ಗುಲ್ಬರ್ಗಾ

ಬಿಜೆಪಿ ಚೂರಿ ಪಾರ್ಟಿ: ಖರ್ಗೆ ವ್ಯಂಗ್ಯ

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.23
ಜನರನ್ನು ನಂಬಿಸಿ ಆಡಳಿತಕ್ಕೆ ಬಂದ ಬಿಜೆಪಿ ನಾಯಕರೆಲ್ಲ ಅವರು ಚೂರಿ ಹಾಕಿದರು ಎಂದು ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.
  ಅವರಲ್ಲಿ ಯಾರು ಯಾರಿಗೆ ಚೂರಿ ಹಾಕಿದರೋ ಗೊತ್ತಿಲ್ಲ. ಆದರೆ ಅವರು ಜನರಿಗೆ ಮಾತ್ರ ಚೂರಿ ಹಾಕಿದ್ದಾರೆ. ಬಿಜೆಪಿಯೊಂದು ಚೂರಿ ಪಾರ್ಟಿ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಅತಿ ಭ್ರಷ್ಟ ಆಡಳಿತ ನೀಡಿದ್ದೇ ಬಿಜೆಪಿ ಸಾಧನೆಯಾಗಿದೆ.   ಸಂಸತ್ ಚುನಾವಣಾ ಸಮಯದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ಈ ಭಾಗಕ್ಕೆ ಕಲಂ 371 ತಿದ್ದುಪಡಿ ತರುವುದಾಗಿ ಭರವಸೆ ನೀಡಿದ್ದರು.  ಮತದಾರರ ಋಣ ತೀರಿಸಲು 371ನೇ ಕಲಂ ತಿದ್ದುಪಡಿ ತರಲಾಗಿದೆ ಎಂದರು.
ರಾಜ್ಯಸಭೆ ಸದಸ್ಯ, ಎಐಸಿಸಿ ವೀಕ್ಷಕ ಆನಂದ ಭಾಸ್ಕರ್ , ಅಭ್ಯರ್ಥಿ ಡಾ. ಮಾಲಕರಡ್ಡಿ ಮಾತನಾಡಿ, ಬಿಜೆಪಿ ದುರಾಡಳಿತ ನೋಡಿ ಜನ ಬೇಸತ್ತಿದ್ದಾರೆ ಎಂದರು. ಜಿಲ್ಲಾಧ್ಯಕ್ಷ ಮರಿಗೌಡ ಹುಲ್ಕಲ್, ಶರಣಬಸ್ಸಪ್ಪ ದರ್ಶನಾಪುರ, ಮಾಜಿ ಎಂಎಲ್‌ಸಿ ಚೆನ್ನಾರಡ್ಡಿ ತುನ್ನೂರ, ಶ್ರೇಣಿಕಕುಮಾರ ದೋಖಾ, ಸುರೇಶ ಜೈನ್, ಶ್ರೀನಿವಾಸರೆಡ್ಡಿ ಕಂದಕೂರ ಇತರರು ಇದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಖಚಿತ
ಸುರಪುರ: ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಒಳ ಜಗಳದಿಂದ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್‌ನಿಂದ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂಬುದು ಜನರಿಗೆ ಮನವರಿಕೆಯಾಗಿದೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಇದನ್ನು ತಡೆಯಲು ಯಾವ ಶಕ್ತಿಗಳಿಂದಲೂ ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿಯ ವಸಂತ ಮಹಲ್‌ನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಹರಕು ಸೀರೆ, ಮುರುಕು ಸೈಕಲ್ ವಿತರಣೆ, ಆಂತರಿಕ ಕಚ್ಚಾಟ, ಪರಸ್ಪರ ಬೆನ್ನಿಗೆ ಚೂರಿ ಇರಿತ, ಪಕ್ಷಾಂತರ ಸೇರಿದಂತೆ ಭ್ರಷ್ಟಾಚಾರದಿಂದ ಜೈಲು ಸೇರಿದ್ದೇ ಬಿಜೆಪಿ ಸಾಧನೆಯಾಗಿದೆ ಎಂದು ಛೇಡಿಸಿದರು.
ಸವಾಲು ಸಾಧ್ಯವೇ?: ಬಿಜೆಪಿಯ ಮೂರು ಹೊಳಾದ ಕೆಜಿ, ಪಾವು, ಚಟಾಕ್ ಪಕ್ಷಗಳಿಂದ ಕಾಂಗ್ರೆಸ್‌ಗೆ ಸವಾಲು ಒಡ್ಡಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಜೋರಾಗಿ ಬೀಸುತ್ತಿದೆ. ಹೈಕದ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.