'ಗುರುಮಠಕಲ್ ಕ್ಷೇತ್ರ ಸರ್ವಾಂಗೀಣ ಪ್ರಗತಿಗೆ ಕೆಜೆಪಿ ಬೆಂಬಲಿಸಿ' (ಸುದ್ದಿ ಸಂಕ್ಷೇಪ)
ಯಾದಗಿರಿ: ಆಂಧ್ರ ಗಡಿಗೆ ಹೊಂದಿಕೊಂಡಿರುವ ಗುರುಮಠಕಲ್ ಕ್ಷೇತ್ರ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಕೆಜೆಪಿ ಅಧಿಕಾರಕ್ಕೆ ಬಂದರೆ ನೆನೆಗುದಿಗೆ ಬಿದ್ದಿರುವ ಭೀಮಾ ನದಿ ನೀರನ್ನು ತರುವ ಯೋಜನೆಗೆ ಮೊದಲಾದ್ಯತೆ ನೀಡಿ, ಜತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ ಭರವಸೆ ನೀಡಿದರು.
ಇಚ್ಛಾಶಕ್ತಿ ಕೊರತೆ: ಮತಕ್ಷೇತ್ರದ ಕೌಳೂರ, ಕಣೇಕಲ್ ಮತ್ತು ನೀಲಹಳ್ಳಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು. ಯಾದಗಿರಿಯ ಭೀಮಾ ನದಿಯಿಂದ ಗುರಮಠಕಲ್ ಪಟ್ಟಣಕ್ಕೆ ನೀರು ಹರಿಸುವ ಯೋಜನೆ ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಇದಕ್ಕೆ ಕ್ಷೇತ್ರದ ಶಾಸಕರ ಇಚ್ಛಾಶಕ್ತಿ ಕೊರತೆಯೇ ಕಾರಣವಾಗಿದೆ. ಈ ಹಿಂದಿನ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಅವ್ಯವಹಾರದಲ್ಲಿ ತೊಡಗಿಕೊಂಡು 13 ಅಧಿಕಾರಿಗಳನ್ನು ಅಮಾನತು ಮಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.
ಸರ್ವಾಂಗೀಣ ಅಭಿವೃದ್ಧಿ: ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಗುರಮಠಕಲ್ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಗುರಮಠಕಲ್‌ನ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಕ್ಷೇತ್ರವನ್ನು ದತ್ತು ಪಡೆಯುವುದಾಗಿ ಘೋಷಿಸಿದ್ದಾರೆ. ನುಡಿದಂತೆ ನಡೆವ ಯಡಿಯೂರಪ್ಪನವರ ಕೈಬಲಪಡಿಸಲು ಕೆಜೆಪಿಗೆ ಮತ ನೀಡುವಂತೆ ಮುದ್ನಾಳ ಮನವಿ ಮಾಡಿದರು.
ಮಟ್ಟಣ್ಣವರ ಪರ ತಂದೆ ಪ್ರಚಾರ
ಗುರುಮಠಕಲ್: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಿರೀಶ ಮಟ್ಟಣ್ಣವರ ಪರ ಪ್ರಚಾರಕ್ಕಾಗಿ ಅವರ ತಂದೆ- ತಾಯಿ ಆಗಮಿಸಿದ್ದು, ಪುತ್ರನ ಪರ ಪ್ರಚಾರ ಆರಂಭಿಸಿದ್ದಾರೆ. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಟ್ಟಣ್ಣವರ ತಂದೆ ಲೋಕನಾಥ ಮಟ್ಟಣ್ಣವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಂದಿನಿಂದಲೇ ಬಡವರು ಹಾಗೂ ಅನ್ಯಾಯಕ್ಕೊಳಗಾದವರ ಪರ ನಿಂತು ಗಿರೀಶ್ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದಾರೆ. ಈ ಕ್ಷೇತ್ರದ ಬಡವರ ಸೇವೆ ಮಾಡಲು ಬಂದಿದ್ದು, ಅವರಿಗೆ ಮತದಾರರು ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು. ಈ ಕ್ಷೇತ್ರ ಸುಮಾರು ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದು ಯಾವುದೇ ಅಭಿವೃದ್ಧಿ ಮಾಡಿಲ್ಲ. ಪುತ್ರ ಗಿರೀಶ ಮಟ್ಟಣ್ಣವರ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಈ ಭಾಗದ ಅಭಿವೃದ್ಧಿಗಾಗಿ ಕಳೆದ 3 ವರ್ಷಗಳಿಂದ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಅವರು ಆರಿಸಿ ಬಂದಲ್ಲಿ ಕ್ಷೇತ್ರವನ್ನು ದತ್ತು ಪಡೆಯುವುದಾಗಿ ಭರವಸೆ ನೀಡಿದ್ದಾರೆ. ಬಾಬುರಾವ್ ಚಿಂಚನಸೂರ ನಮಗೆ 30 ವರ್ಷದಿಂದಲೂ ಗೊತ್ತು. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ತಾಯಿ ನಾಗರತ್ನ ಮಟ್ಟಣ್ಣವರ್, ಪಪಂ ಸದಸ್ಯ ಕೆ. ದೇವದಾಸ, ನರಸಿಂಹುಲು ಯಾದವ, ವಿಶ್ವನಾಥ ಗೊಲ್ಲಾ, ನವಾಜರೆಡ್ಡಿ, ಪ್ರಭುರಾಜ ಮುತ್ತಗಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

