ಕರುಳ ಬಳ್ಳಿ ಹಸಿರು ಚಿಗುರೀತೆ?
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ. 27
ಈ ವಿಧಾನಸಭೆ ಚುನಾವಣೆ ಗುಲ್ಬರ್ಗ ಜಿಲ್ಲೆಯಲ್ಲಿ ಕರುಳ ಬಳ್ಳಿ ಸಂಬಂಧಗಳಿಗೆ ಹಂದರ ಹಾಕಿದ್ದು, ವಂಶ ಪಾರಂಪರ್ಯ ರಾಜಕೀಯದ ಕುಡಿ ಚಿಗುರೊಡೆಯುವುದೆ ಎಂಬ ಬಿಸಿ ಚರ್ಚೆಗೆ ವೇದಿಕೆಯಾಗಿದೆ.
ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ವಂಶಪಾರಂಪರ್ಯ ರಾಜಕೀಯ ಕಾಣಿಸಿಕೊಂಡಿದ್ದು ಎಲ್ಲರಿಗೂ ಇದನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬ ಕೂತೂಹಲ. ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಧರಂಸಿಂಗ್ ತಮ್ಮ ಪುತ್ರರ ರಾಜಕೀಯ ಪಟ್ಟಾಭಿಷೇಕಕ್ಕೆ ತಾವೇ ಪೌರೋಹಿತ್ಯ ವಹಿಸಿಕೊಂಡಿದ್ದಾರೆ. ಇವರೊಂದಿಗೆ ರೇವೂರ್ ಕುಟುಂಬದ ಅರುಣಾ ಪಾಟೀಲ್ ಅವರೂ ತಮ್ಮ ಉತ್ತರಾಧಿಕಾರಿಯಾಗಿ ಪುತ್ರನಿರಲಿ ಎಂದು ಜನಾದೇಶ ಪಡೆಯುವ ತವಕದಲ್ಲಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ನಂತರ ನೆಲೆ ಕಳೆದುಕೊಂಡಿದ್ದ ಕಾಂಗ್ರೆಸ್ನ ಹಿರಿಯ ನಾಯಕ, ದಿ. ವೀರೇಂದ್ರ ಪಾಟೀಲ್ ಪುತ್ರ ಕೈಲಾಸನಾಥ ಪಾಟೀಲ್ ಅವರೂ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ. ಅವರು ಚಿಂಚೋಳಿಯಿಂದ ಗುಲ್ಬರ್ಗ (ದ) ಕ್ಕೆ ವಲಸೆ ಬಂದಿದ್ದಾರೆ. ದಿ. ವೀರೇಂದ್ರ ಅವರ ಅಳಿಯ ಡಾ. ಜವಳಿ ಬಿಜಿ ಸೇರಿದಂತೆ ಅನೇಕರು ಈ ಕರುಳ ಬಳ್ಳಿ ಸಂಬಂಧಕ್ಕೂ ನೀರೇರೆದು ಹಸಿರಾಗಿಸುವ ಹೊಣೆ ಹೊತ್ತು ಕಣದಲ್ಲಿದ್ದಾರೆ.
ಮೊದಲ ಯತ್ನದಲ್ಲಿ ಸೋಲು: ಖರ್ಗೆ ಹಾಗೂ ಧರಂಸಿಂಗ್ 1972ರಲ್ಲಿ ಚೊಚ್ಚಲ ಚುನಾವಣೆ ಎದುರಿಸಿ ಮೊದಲ ಯತ್ನದಲ್ಲೇ ಗೆದ್ದವರು. ಧರಂಸಿಂಗ್ ಜೇವರ್ಗಿಯಿಂದ ಸತತ 8 ಬಾರಿ ಗೆದ್ದರೆ ಖರ್ಗೆ ಅಷ್ಟೆ ಬಾರಿ ಗುರುಮಠಕಲ್ನಿಂದ ಗೆದ್ದಿದ್ದಾರೆ. ಆದರೆ ಪ್ರಿಯಾಂಕ್ ಹಾಗೂ ಡಾ. ಅಜಯ್ ತಮ್ಮ ಚುನಾವಣೆ ರಾಜಕೀಯದ ಪ್ರಥಮ ಪ್ರಯತ್ನದಲ್ಲೇ ಪರಾಭವಗೊಂಡವರು.
ಕೈಲಾಸ್ ಪಾಟೀಲ್ರಿಗೂ ಚುನಾವಣೆ ಹೊಸತೇನಲ್ಲ. ಚಿಂಚೋಳಿಯಿಂದ ಸ್ಪರ್ಧಿಸಿ ಗೆದ್ದವರು. ಗುಲ್ಬರ್ಗ ದಕ್ಷಿಣ ಕ್ಷೇತ್ರ ಹೊಸತಷ್ಟೆ. ಚಿಂಚೋಳಿ ತಾಲೂಕಿನ ಹೂಡದಳ್ಳಿಯ ವೀರೇಂದ್ರರ ಕುಟುಂಬದ ಕುಡಿಗೆ ಗುಲ್ಬರ್ಗ ದಕ್ಷಿಣದಲ್ಲಿ ಮತದಾರ ಅದ್ಯಾವ ರೀತಿ ಕೊಡುಗೆ ನೀಡುವನೋ?
ರೇವೂರ್ ಕುಟುಂಬದ ಕರುಳ ಕುಡಿ: ಗುಲ್ಬರ್ಗ ಕ್ಷೇತ್ರದಿಂದ 2004, 2008ರಲ್ಲಿ ಸತತ ಸ್ಪರ್ಧಿಸಿ ಕಮಲ ಅರಳಿಸಿದವರು ದಿ. ಚಂದ್ರಶೇಖರ ಪಾಟೀಲ್ ರೇವೂರ್. ಅವರ ಅಕಾಲಿಕ ನಿಧನ ನಂತರ 2010ರಲ್ಲಿ ಕ್ಷೇತ್ರ ಕಂಡ ಉಪ ಚುನಾವಣೆಯಲ್ಲಿ ಗೌಡರ ಪತ್ನಿ ಅರುಣಾ ಪಾಟೀಲ್ ಸ್ಪರ್ಧಿಸಿ ಗೆದ್ದರು. ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಜೆಡಿಎಸ್ನಿಂದ ಗೆದ್ದಿದ್ದ ಅರುಣಾ ಪಾಟೀಲ್ ಅವರ ಪುತ್ರ ದತ್ತಾತ್ರೇಯ ಪಾಟೀಲ್ ರೇವೂರ್ ಇದೀಗ ಇಲ್ಲಿಂದ ಪುನಾ ಬಿಜೆಪಿ ಹುರಿಯಾಳಾಗಿ ಕಣಕ್ಕಿಳಿದಿದ್ದಾರೆ.
ಪತಿಯ ಉತ್ತರಾಧಿಕಾರಿಯಾಗುವಲ್ಲಿ ಯಶಸ್ವಿಯಾಗಿದ್ದ ಅರುಣಾ ಪಾಟೀಲ್ ಅವರು ಇದೀಗ ತಮ್ಮ ಪುತ್ರನನ್ನೇ ಉತ್ತರಾಧಿಕಾರಿಯನ್ನಾಗಿಸಲು ಯತ್ನಿಸುತ್ತಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿರುವ ದತ್ತಾತ್ರೇಯ ಪರವಾಗಿ ಖುದ್ದು ಅರುಣಾ ಕ್ಷೇತ್ರಾದ್ಯಂತ ಸಂಚರಿಸಿ ಮತ ಕೇಳುತ್ತಿದ್ದು, ಈ ಕುಟುಂಬಕ್ಕೆ ಇದು ಪ್ರತಿಷ್ಠೆಯಾಗಿದೆ.
ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

