ಕಾದು ಕುಳಿತ ಜನ: ಬರಲಿಲ್ಲ ಕುಮಾರಣ್ಣ
ಕನ್ನಡಪ್ರಭ ವಾರ್ತೆ, ಅಫಜಲ್ಪುರ/ಸೇಡಂ. ಏ.30
ಜಿಲ್ಲೆಯ ಅಫಜಲ್ಪುರ ಹಾಗೂ ಸೇಡಂ ಅಸೆಂಬ್ಲಿ ಕಣದಲ್ಲಿರುವ ಜೆಡಿಎಸ್ ಹುರಿಯಾಳು ವಿಠ್ಠಲ್ ಹೆರೂರ್ ಹಾಗೂ ಮುಕ್ರಂಖಾನ್ ಪರವಾಗಿ ಪ್ರಚಾರಕ್ಕೆಂದು ಮಂಗಳವಾರ ಇವೆರಡೂ ಪಟ್ಟಣಗಳಿಗೆ ಬರಬೇಕಿದ್ದ ಕುಮಾರಸ್ವಾಮಿ ಬರಲೇ ಇಲ್ಲ. ಇದರಿಂದಾಗಿ ಈ ಉಭಯ ಪಟ್ಟಣಗಳಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಗಳು ರದ್ದಾದವು.
ಮಧ್ಯಾಹ್ನ ಅಫಜಲ್ಪುರಕ್ಕೆ ಹಾಗೂ ಸಂಜೆ ಸೇಡಂಗೆ ಕುಮಾರಸ್ವಾಮಿ ಭೇಟಿ ನೀಡಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಈ ಭೇಟಿಗಳು ರದ್ದಾದವು. ಇದರಿಂದಾಗಿ ಕುಮಾರಸ್ವಾಮಿ ಮಾತು ಆಲಿಸಲು ನಾಲ್ಕು ಗಂಟೆಗಳಿಂದ ಕಾಯುತ್ತ ಕುಳಿತಿದ್ದ ನಾಲ್ಕರಿಂದ 5 ಸಾವಿರ ಜನತೆ ತುಂಬ ನಿರಾಶೆಯಿಂದ ತಮ್ಮ ಮನೆಗಳಿಗೆ ಮರಳುವಂತಾಯ್ತು.
ಕುಮಾರಸ್ವಾಮಿ ಕಾರ್ಯಕ್ರಮಕ್ಕೆಂದೇ ಸಾವಿರಾರು ಜನರನ್ನು ಅಭ್ಯರ್ಥಿ ವಿಠ್ಠಲ್ ಹೆರೂರ್ ಆಹ್ವಾನಿಸಿದ್ದರಿಂದ ಅಫಜಲ್ಪುರ ಹಾಗೂ ಸುತ್ತಲಿನ ಹಳ್ಳಿಗಳಿಂದ ಜನ ಆಗಮಿಸಿದ್ದರು. ಆದರೆ ಆಳಂದದಲ್ಲಿಯೇ ಕುಮಾರಸ್ವಾಮಿ ತುಂಬ ವಿಳಂಬವಾಗಿ ಆಗಮಿಸಿದ್ದರಿಂದ ಅವರು ತಮ್ಮ ಅಫಜಲ್ಪುರ, ಸುರಪುರ, ಸೇಡಂ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ನೇರವಾಗಿ ಗುಲ್ಬರ್ಗಕ್ಕೆ ಬಂದು ಇಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಹೆಲಿಕಾಪ್ಟರ್ ಮುಖಾಂತರ ಸಿಂಧನೂರಿಗೆ ತೆರಳಿದರು.
ಕುಮಾರಸ್ವಾಮಿಯವರು ಮಂಗಳವಾರವೇ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹುಣಸಗಿಗೂ ಭೇಟಿ ಕೊಡುವ ಕಾರ್ಯಕ್ರಮವಿತ್ತು. ಇಲ್ಲಿಗೆ ಬಂದಿರುವ ವರದಿಗಳ ಪ್ರಕಾರ ಹುಣಸಗಿಯಲ್ಲಿಯೂ 5 ಗಂಟೆಗಳ ಕಾಲ ಸಾವಿರಾರು ಜನ ಸೇರಿ ಕುಮಾರರನ್ನು ಕಾಣಲು ಕಾದಿದ್ದೇ ಬಂತು. ಅಲ್ಲಿಗೂ ಕುಮಾರಸ್ವಾಮಿ ಹೋಗಲಾಗಲಿಲ್ಲ. ಅಲ್ಲಿನ ಸಮಾರಂಭಗಳೂ ರದ್ದಾದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

