ಗುಲ್ಬರ್ಗಾ

ಸೆಪ್ಟೆಂಬರ್ನಲ್ಲಿ ಬಿದ್ದಾಪುರ ರೇಲ್ವೆ ಮೇಲ್ಸೇತುವೆ; ಭರವಸೆ

Published On :

ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಆ.2
ಗುಲ್ಬರ್ಗ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಗುಲ್ಬರ್ಗ- ಅಫಜಲ್ಪುರ ರಸ್ತೆಯ ಬಿದ್ದಾಪುರ ರೇಲ್ವೆ ಮೇಲ್ಸೇತುವೆ ಕಾಮಗಾರಿಗೆ ಬರುವ ಸೆಪ್ಟೆಂಬರ್ನಲ್ಲಿ ಚಾಲನೆ ನೀಡಲಾಗುವುದು ಎಂದು ಕೇಂದ್ರ ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಮದರ್ ಥೆರೆಸಾ ಶಾಲೆಯ ಜೇವರ್ಗಿ ರಸ್ತೆಯ ಹತ್ತಿರ ರೇಲ್ವೆ ಮೇಲ್ಸೇತುವೆ ಪುನರ್ ನಿರ್ಮಾಣ ಮತ್ತು ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈ ಸೇತುವೆ ಕಾಮಗಾರಿಗೆ ಸುಮಾರು ರು. 28 ಕೋಟಿ ತಗಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಪಾಲು ಅನುದಾನ ಬಿಡುಗಡೆ ಮಾಡಲಿವೆ. ಈಗಾಗಲೇ ರೈಲ್ವೆ ಇಲಾಖೆಯ ಅಧಿಕಾರಿಗಳು ರೈಲ್ವೆ ಮಂಡಳಿಗೆ ಈ ಕುರಿತು ಪ್ರಸ್ತಾಪನೆ ಸಲ್ಲಿಸಿದ್ದು, ಆದಷ್ಟು ಬೇಗನೆ ಅದಕ್ಕೆ ಮಂಜೂರಾತಿ ದೊರೆಯಲಿದೆ. ಬರುವ ಸೆಪ್ಟೆಂಬರ್ನಲ್ಲಿ ಈ ಕಾಮಗಾರಿಗೆ ತಾವೇ ಚಾಲನೆ ನೀಡುವುದಾಗಿ ಹೇಳಿದರು.
ಮೊದಲ ಜವಳಿ ಪಾರ್ಕ್ ಗುಲ್ಬರ್ಗದಲ್ಲಿ: ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಲ್ಲಿ ಜವಳಿ ಪಾರ್ಕ್ ಮಂಜೂರು ಮಾಡಿದ್ದು, ಕರ್ನಾಟಕದಲ್ಲಿಯೇ ಮೊದಲು ಮಂಜೂರಾತಿ ದೊರೆತಿದ್ದು, ಗುಲ್ಬರ್ಗದಲ್ಲಿ ಎಂದು ಖರ್ಗೆ ತಿಳಿಸಿದರು.
ರು. 15 ಕೋಟಿ ವೆಚ್ಚದಲ್ಲಿ ಗುಲ್ಬರ್ಗ ನಗರದ ಶಹಾಬಾದ್ ರಸ್ತೆಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಮಂಜೂರಾತಿ ದೊರೆತಿದ್ದು, ಈಗಾಗಲೇ ಈ ಪಾರ್ಕ್ ಸುತ್ತಲೂ ಸುತ್ತು ಗೋಡೆ ನಿರ್ಮಿಸಲಾಗುತ್ತಿದೆ. ಪಾರ್ಕ್ ಕಾಮಗಾರಿಗೆ ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಚಾಲನೆ ನೀಡಲಾಗುವುದು ಎಂದರು.
ಗುಲ್ಬರ್ಗಕ್ಕೆ ಸೇನಾ ತುಕ್ಕಡಿಯ ವಲಯವನ್ನು ಸ್ಥಾಪಿಸುವ ಚಿಂತನೆಯಿದೆ. ಇದಕ್ಕೆ 200 ಎಕರೆ ಭೂಮಿ ಅಗತ್ಯವಿದೆ. ಅದರೊಂದಿಗೆ ನೀರು ಹಾಗೂ ವಿದ್ಯುತ್ ಅಗತ್ಯತೆ ಇದೆ. ಈ ಮೂರನ್ನು ಸಿದ್ಧಪಡಿಸಿಕೊಂಡಿರುವಂತೆ ಕೇಂದ್ರ ಸಚಿವರು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದರು.
ಪ್ರಮುಖ ಸೌಕರ್ಯಗಳು: ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಮಾತನಾಡಿ, ಅಭಿವೃದ್ಧಿಗೆ ಇನ್ನೊಂದು ಹೆಸರು ಖರ್ಗೆ ಎಂಬು ಬಣ್ಣಿಸಿ, ಯಾವ ಭಾಗದಲ್ಲಿ, ಯಾವ ಸೌಲಭ್ಯ ಕಲ್ಪಿಸಬೇಕೆಂಬ ಅರಿವು ಅವರಿಗಿದೆ. ಮಹಾಗಾಂವದಲ್ಲಿ ರೇಲ್ವೆ ನಿಲ್ದಾಣ ಸ್ಥಾಪಿಸುವುದು ಸೇರಿದಂತೆ ಈ ಭಾಗದಲ್ಲಿ ಪ್ರಮುಖ ರೈಲ್ವೆ ಯೋಜನೆಗಳನ್ನು ಮಂಜೂರುಗೊಳಿಸುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕರಾದ ಡಾ. ಅಜಯಸಿಂಗ್, ದತ್ತಾತ್ರೇಯ ಪಾಟೀಲ್ ರೇವೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣಗೌಡ ಸಂಕನೂರ, ರೈಲ್ವೆ ಮಂಡಳಿಯ ಸದಸ್ಯ ಕುಲಭೂಷಣ, ರೈಲ್ವೆ ಮ್ಯಾನೇಜರ್ ಬಿ.ಪಿ. ಖೇರ್, ಜಿಲ್ಲಾಧಿಕಾರಿ ಪ್ರಸನ್ನಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ, ಉಮಾಕಾಂತ ನಿಗ್ಗುಡಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.