2008ರ ವಿಮಾ ಕಾಯ್ದೆ ಮಸೂದೆಗೆ ವಿರೋಧ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಆ.6
ಜನಸಾಮಾನ್ಯರ ಉಳಿತಾಯವನ್ನು ಕೊಳ್ಳೆ ಹೊಡೆಯಲು ವಿದೇಶಿಯರಿಗೆ ಅನುವು ಮಾಡಿಕೊಡುವ ವಿಮಾ ಕಾಯ್ದೆ (ತಿದ್ದುಪಡಿ)ಯನ್ನು ವಿರೋಧಿಸಿರುವ ವಿಮಾ ನೌಕರರ ಸಂಘವು ಒಂದು ವೇಳೆ ಸಂಸತ್ತಿನಲ್ಲಿ ಈ ಕಾಯ್ದೆ ಅನುಮೋದನೆ ಪಡೆದರೆ ಮರುದಿನವೇ ದೇಶವ್ಯಾಪಿ ಮುಷ್ಕರ ನಡೆಸುವುದಾಗಿ ಎಚ್ಚರಿಸಿದೆ.
ವಿಮಾರಂಗದಲ್ಲಿ ಎಫ್ಡಿಐ ಹೆಚ್ಚಳಕ್ಕೆ ಸಂಬಂಧಿಸಿದ ವಿಮಾ ಕಾಯ್ದೆ ಮಸೂದೆ 2008 ಸಂಸತ್ತಿನ ಮುಂದಿದ್ದು, ಸರ್ಕಾರವು ಈ ಮಸೂದೆಗೆ ಸಂಸತ್ತಿನ ಒಪ್ಪಿಗೆ ಪಡೆಯಲು ಶತಪ್ರಯತ್ನ ನಡೆಸುತ್ತಿದ್ದು, ಸರ್ಕಾರವು ಮುಂದಿನ ದಿನಗಳಲ್ಲಿ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗೀಕರಿಸಿ ದೇಶೀಯ ಹಾಗೂ ವಿದೇಶಿಯ ಬಂಡವಾಳ ಶಾಹಿಗಳಿಗೆ ಸಮರ್ಪಿಸಲು ಮುಂದಾಗಿದೆ ಎಂದು ಸಂಘದ ರಾಯಚೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ. ರವಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅನುಮೋದನೆ ಮಾಡದಿರಲು ಮನವಿ: ವಿಮಾ ತಿದ್ದುಪಡಿ ಕಾಯ್ದೆಯ ವಿರುದ್ಧ 340 ಸಂಸದರನ್ನೂ ಭೇಟಿಯಾಗಿ ಈ ಮಸೂದೆಗೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡಬಾರದೆಂದು ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಈ ದೇಶದ ಸುಮಾರು 35 ಕೋಟಿ ಪಾಲಿಸಿದಾರರ ಆಗಾಧವಾದ ವಿಶ್ವಾಸ ಹಾಗೂ ಸಂಸ್ಥೆಯ ಅತ್ಯುತ್ತಮ ಕಾರ್ಯಕ್ಷಮತೆ ಕಾರಣಗಳಿಂದಾಗಿ ಇಂದಿಗೂ ಎಲ್ಐಸಿಯು ಸಂಪೂರ್ಣವಾಗಿ ಸರ್ಕಾರದ ಒಡೆತನದಲ್ಲಿ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಇದೇ ರೀತಿ ಸಾರ್ವಜನಿಕ ರಂಗದಲ್ಲಿ ಮುಂದುವರೆಯಬೇಕೆಂದು ಒತ್ತಾಯಿಸಿದರು.
ಖಾಸಗೀಕರಣದಿಂದ ಲಾಭವಿಲ್ಲ: ವಿಮಾ ಉದ್ದಿಮೆಯಲ್ಲಿ ಸದ್ಯ ಶೇ.26ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಅನುಮತಿ ಇದ್ದು, ಇದನ್ನು ಶೇ.49ಕ್ಕೆ ಹೆಚ್ಚಿಸಲು ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ. ವಿಮಾ ಖಾಸಗೀಕರಣಗೊಂಡು 13 ವರ್ಷ ಕಳೆದರೂ ಹೇಳಿಕೊಳ್ಳುವಂತಹ ಬಂಡವಾಳ ಈ ದೇಶಕ್ಕೆ ಹರಿದು ಬಂದಿಲ್ಲ ಎಂದರು.
ಮೇಲಾಗಿ ವಿಮಾ ಉದ್ದಿಮೆಯಲ್ಲಿ ವಿದೇಶಿ ನೇರ ಬಂಡವಾಳ ಮೀತಿಯನ್ನು ಶೇ.26ರಿಂದ 49ಕ್ಕೆ ಏರಿಸುವ ಸರ್ಕಾರದ ಪ್ರಸ್ತಾಪಕ್ಕೆ ಸಂಸತ್ತಿನ ಸ್ಥಾಯಿ ಸಮಿತಿಯು ಈಗಾಗಲೇ ತನ್ನ ಅಭಿಪ್ರಾಯವನ್ನು ನೀಡಿದ್ದು, ಸದ್ಯಕ್ಕೆ ವಿಮಾ ರಂಗದಲ್ಲಿ ಹೆಚ್ಚಿನ ವಿದೇಶಿ ನೇರ ಬಂಡವಾಳದ ಮಿತಿಯ ಹೆಚ್ಚಳದ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.
ಈ ವಿಷಯವು ಈಗ ಸಂಸತ್ತಿನ ಮುಂದಿದ್ದು, ಆ.5ರಿಂದ ಪ್ರಾರಂಭವಾಗಿರುವ ಮಳೆಗಾಲದ ಅಧಿವೇಶನದಲ್ಲಿ ಎಫ್ಡಿಐನ ಮೀತಿಯನ್ನು ಶೇ.26ರಿಂದ 49ಕ್ಕೆ ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೂರಿದರು.
ಮುಷ್ಕರದ ಎಚ್ಚರಿಕೆ: ಒಂದು ವೇಳೆ ಅಧಿವೇಶನದಲ್ಲಿ ಈ ಕಾಯ್ದೆಗೆ ಸಂಸತ್ತಿನಲ್ಲಿ ಅನುಮೋದನೆ ಪಡೆದರೆ ಮರುದಿನವೇ ಎಲ್ಐಸಿ ಮತ್ತು ಜಿಐಸಿಯಲ್ಲಿ ಕೆಲಸ ಮಾಡುವ ಎಲ್ಲ ನೌಕರರು ಒಂದು ದಿನದ ಮುಷ್ಕರ ನಡೆಸಲಿದ್ದಾರೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಧರ್, ವೈ.ಬಸವರಾಜ, ಆರ್.ಡಿ. ಜಲಜಾ, ವೆಂಕಟೇಶ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

