ಗುಲ್ಬರ್ಗಾ

7 ಜೂಜುಕೋರರ ಬಂಧನ

Published On :

ಗುಲ್ಬರ್ಗ: ನಗರದ ಚೋರಗುಂಬಜ್ ಬಳಿಯ ದೇವರ ದಾಸಿಮಯ್ಯ ನಗದಲ್ಲಿ ಮಟಕಾ ಮತ್ತು ಜೂಜಾಟನಿರತ ಕುಖ್ಯಾತ 7 ಜನ ಜೂಜುಕೋರರನ್ನು ಬುಧವಾರ ಪೊಲೀಸರು ಬಂಧಿಸಿ, ಅವರಿಂದ 28 ಸಾವಿರ ನಗದು, 3 ಲಕ್ಷ ಮೌಲ್ಯದ ಇಂಡಿಕಾ ಕಾರು, 60 ಸಾವಿರ ಮೌಲ್ಯದ ಎರಡು ಬೈಕ್ ಜಪ್ತಿ ಮಾಡಿದ್ದಾರೆ. ನಗರದ ಬಾಳೇ ಲೇಔಟ್‌ನ ಮಾರುತಿ ತಂದೆ ನಿಂಗಣ್ಣ ಜಮಾದಾರ, ಆಜಾದ್‌ಚೌಕ್‌ನ ಅಯುಬಲಿ ಸೈಯದ್, ಕೈಲಾಸ ನಗರದ ರಾಯಪ್ಪ ಸಾವಳಗಿ, ಅಫಜಲ್ಪುರ ತಾಲೂಕಿನ ಚಿಮಣಗೇರಿಯ ಸಿದ್ದು ತಳಕೇರಿ, ಗುಲ್ಬರ್ಗದ  ಬೋರಾಬಾಯಿ ನಗರದ ಪ್ರಭು ಜಾಂತಿ, ಚಿಂಚನಸೂರದ ದಯಾನಂದ ಮಾಡಬೂಳ ಮತ್ತು ಗುಲ್ಬರ್ಗದ ಬ್ರಹ್ಮಪುರದ ಪ್ರಕಾಶ ಪರೀಟ್ ಬಂಧಿತರು. ಎಸ್ಪಿ ಅಮಿತ್‌ಸಿಂಗ್, ಎಎಸ್ಪಿ ಕಾಶಿನಾಥ ತಳಕೇರಿ ಮಾರ್ಗದರ್ಶನದಲ್ಲಿ ಎ ಉಪ ವಿಭಾಗದ ಡಿಎಸ್ಪಿ ಉದಯಕುಮಾರ್ ಬೇವಿನಗಿಡದ ನೇತೃತ್ವದಲ್ಲಿ ಡಿಸಿಐಬಿ ಘಟಕದ ಪಿಐ ಎಸ್.ಎಸ್. ಹುಲ್ಲೂರ್, ರಾಘವೇಂದ್ರ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಇಕ್ಕಳಕಿ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಬುಧವಾರ ಬೆ.11ಕ್ಕೆ ದಾಳಿ ನಡೆಸಿ ಜೂಜುಕೋರರನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಿಚಾರಣೆ ಹಾಗೂ ತನಿಖೆ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಟಕಾ ಮತ್ತು ಜೂಜಾಟದ ದೊಡ್ಡ ಗ್ಯಾಂಗ್ ಬೇಧಿಸಿ ಪತ್ತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಎಸ್ಪಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಎ ಉಪ ವಿಭಾಗದ ಡಿಎಸ್ಪಿ ಉದಯಕುಮಾರ್ ಬೇವಿನಗಿಡದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಧೆಡೆ ಇಂದುಧ್ವಜಾರೋಹಣ
ಗುಲ್ಬರ್ಗ: ನಗರದ ಪೊಲೀಸ್ ಗ್ರೌಂಡ್‌ನಲ್ಲಿ 67ನೇ ಸ್ವಾತಂತ್ರ್ಯೋತ್ಸವನ್ನು ಆ.15ರ ಗುರುವಾರ ಬೆಳಿಗ್ಗೆ 9ಕ್ಕೆ ಆಚರಿಸಲಾಗುವುದು. ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಹಾಗೂ ಪೌರಾಡಳಿತ, ಸಾರ್ವಜನಿಕ ಉದ್ದಿಮೆಗಳು, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಹಜ್ ಸಚಿವ ಖಮರುಲ್ ಇಸ್ಲಾಂ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡುವರು. 9.30ಕ್ಕೆ ಗುಲ್ಬರ್ಗ ಹೈಕೋರ್ಟ್‌ನ ಸಂಚಾರಿ ಪೀಠದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದು. ನ್ಯಾ. ಮೋಹನ ಶಂತನಗೌಡ ಧ್ವಜಾರೋಹಣ ನೆರವೇರಿಸುವರು.
ಗುವಿವಿಯಲ್ಲಿ...
ಗುಲ್ಬರ್ಗ ವಿಶ್ವ ವಿದ್ಯಾಲಯದಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬೆ.9ಕ್ಕೆ ಹಮ್ಮಿಕೊಳ್ಳಲಾಗಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಈ ಸಂದರ್ಭದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆಂದೋಲನ
ಸಂಪೂರ್ಣ ಸಾಕ್ಷರ ಪಂಚಾಯತಿಗಳ ನಿರ್ಮಾಣಕ್ಕಾಗಿ ಸಾಕ್ಷರತಾ ಆಂದೋಲನದ ಅಂಗವಾಗಿ ಗುಲ್ಬರ್ಗ ಜಿಪಂ ಆವರಣದಲ್ಲಿ ಆ.15 ರಂದು ಬೆಳಿಗ್ಗೆ 8ಕ್ಕೆ ಜಿಪಂ ಅಧ್ಯಕ್ಷ ಶರಣಪ್ಪ ಪಾಟೀಲ್ ತೇಲ್ಕೂರ್ ಸಾಕ್ಷರತಾ ಧ್ವಜಾರೋಹಣ ನೆರವೇರಿಸುವರು.
ಇಂದು ರಕ್ತದಾನ ಶಿಬಿರ
ಸುರಪುರ: ಸಮೀಪದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆ.10ರಿಂದ ಸಂಜೆ 4ರವರೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಸ್ಮರಣಾರ್ಥ ರಂಗಂಪೇಟೆಯ ಓಂಕಾರ ಯೋಗ ಶಿಕ್ಷಣ ಸಮಿತಿ, ಸುರಪುರದ ಪತಂಜಲಿ ಯೋಗ ಶಿಕ್ಷಣ ಸಮಿತಿ, ವೀರಶೈವ ಸಮಿತಿ ಮತ್ತು ತಾಲೂಕು ಆರೋಗ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಈ ಶಿಬಿರ ಏರ್ಪಡಿಸಲಾಗಿದೆ. ಬೆ.10ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಶಿಬಿರ ಉದ್ಘಾಟಿಸುವರು. ವೀರಶೈವ ಸಮಿತಿ ತಾಲೂಕಾಧ್ಯಕ್ಷ ಸುರೇಶ ಸಜ್ಜನ್ ಅಧ್ಯಕ್ಷತೆ ವಹಿಸುವರು. ತಾಲೂಕು ಆರೋಗ್ಯಾಕಾರಿ ಡಾ. ಆರ್.ವಿ. ನಾಯಕ ಹಾಗೂ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಅಭಯಕುಮಾರ ಪಾಟೀಲ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಮಿತಿಯ ಮುಖಂಡ ಭುವನಸುಂದರ ತಿಳಿಸಿದ್ದಾರೆ.
ಕೃಷ್ಣಮೃಗ ಬೇಟೆ;
ಅರಣ್ಯ ಇಲಾಖೆ ದಿವ್ಯ ಮೌನ
ಶಹಾಪುರ: ತಾಲೂಕಿನ ಬೀರನೂರು ಗ್ರಾಮದ ವ್ಯಾಪ್ತಿಯಲ್ಲಿ ಕೃಷ್ಣಮೃಗ(ಜಿಂಕೆ)ಗಳು ಕಾಣಿಸಿಕೊಳ್ಳುತ್ತಿದ್ದು, ಕೆಲವು ಅಪರಿಚಿತ ಬೇಟೆಗಾರರು ಕಳೆದ ವಾರದಿಂದ ನಿರಂತರವಾಗಿ ತಮ್ಮ ಆಟಾಟೋಪ ಮುಂದುವರಿಸಿದ್ದಾರೆ. ಆದರೂ ಅರಣ್ಯ ಇಲಾಖೆ ಮಾತ್ರ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ ಎಂದು ಗ್ರಾಮದ ಪರಶುರಾಮ ಮರಿಲಿಂಗಪ್ಪ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.
  ಈ ಕುರಿತು ಮಾಹಿತಿ ನೀಡಿರುವ ಅವರು ಬೇಟೆಗಾರರನ್ನು ವಿಚಾರಿಸಿದರೆ, ಸರ್ಕಾರ ನಮಗೆ ಬೇಟೆಯಾಡಲು ಪರವಾನಗಿ ಕೊಟ್ಟಿದೆ ಎನ್ನುತ್ತಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದರೆ ಅದು ನಮಗೆ ಸಂಬಂಧಿಸಿದ್ದಲ್ಲ, ಅರಣ್ಯ ಇಲಾಖೆ ಗಮನಕ್ಕೆ ತರಬೇಕೆಂದು ಅವರು ಸಂಬಂಧವಿರದಂತೆ ಮಾತನಾಡುತ್ತಿದ್ದಾರೆ. ಇದರಿಂದ ಬೇಟೆಗಾರರಿಗೆ ಕುಮ್ಮಕ್ಕು ನೀಡಿದಂತಾಗಿದೆ.
 ತಕ್ಷಣವೇ ಅಳಿದುಳಿದ ಜಿಂಕೆಗಳನ್ನು ರಕ್ಷಿಸುವತ್ತ ಇನ್ನಾದರು ಅರಣ್ಯ ಇಲಾಖೆ ತಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ನಿರ್ವಹಿಸಿ ಅಕ್ರಮವಾಗಿ ಬೇಟೆಯಾಡುವವರ ವಿರುದ್ಧ ಕ್ರಮ ಕೈಗೊಂಡು ವನ್ಯಜೀವಿಗಳನ್ನು ರಕ್ಷಿಸಬೇಕೆಂದು ಪರಶುರಾಮ ಮರಿಲಿಂಗಪ್ಪ ಮನವಿ ಮಾಡಿದ್ದಾರೆ.
ಸುರಪುರ ತಾ.ಪಂ.
ಅಧ್ಯಕ್ಷರ ರಾಜಿನಾಮೆ
ಸುರಪುರ: ಇಲ್ಲಿಯ ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಸಾಬಮ್ಮ ಗೋಪಣ್ಣ ದೇಸಾಯಿ ದೇವರಗೋನಾಲ ಇವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಎರಡನೇ ಅವಧಿಯ ಮೊದಲ ಹತ್ತು ತಿಂಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಅನುಭವಿಸಿದ್ದರು. ತಾವು ಯಾವುದೇ ಒತ್ತಡಕ್ಕೆ ಒಳಗಾಗದೆ ಪಕ್ಷದ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಸ್ವ ಇಚ್ಛೆಯಿಂದ ರಾಜಿನಾಮೆ ನೀಡುತ್ತಿರುವುದಾಗಿ ತಮ್ಮ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ನಿಯಮ ಪಾಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರಿಗೆ ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ. ಉಪಾಧ್ಯಕ್ಷೆಯಾಗಿದ್ದ ಅನ್ನಪೂರ್ಣ ಮಾಲಿ ಪಾಟೀಲ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಬಿಜೆಪಿ ಕಾರ್ಯಾಲಯ ಉದ್ಘಾಟನೆ
ಶಹಾಪುರ: ಮಂಡಲದ ಬಿಜೆಪಿ ನೂತನ ಕಾರ್ಯಾಲಯವನ್ನು ಪಟ್ಟಣದ ಮೆಹತಾ ಕಟ್ಟಡದ ಮಹಡಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿ ಉದ್ಘಾಟಿಸಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನೂತನ ಕಾರ್ಯಾಲಯ ಸಾರ್ವಜನಿಕರ ಸಮಸ್ಯೆ ಹಾಗೂ ದುಃಖ ದುಮ್ಮಾನಗಳನ್ನು ಚರ್ಚಿಸಿ ರೈತರ, ಬಡವರ, ದೀನ ದಲಿತರ ಸಮಸ್ಯೆಗಳನ್ನು ಪರಿಹರಿಸುವ ಸಂಕಲ್ಪ ಕೈಗೊಳ್ಳುವ ಪ್ರೇರಣಾ ಶಕ್ತಿ ಕೇಂದ್ರವಾಗಬೇಕು ಎಂದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಯಲ್ಲಯ್ಯನಾಯಕ ವನದುರ್ಗ, ಬಿಜೆಪಿ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ಬಸವರಾಜ ಅರುಣಿ, ಗುರು ಕಾಮಾ, ದೇವು ಕೊನೇರ, ತ್ರಿಶೂಲ ಹವಾಲ್ದಾರ, ಶಾಂತವೀರ ಪಾಟೀಲ, ಹಣಮಂತ್ರಾಯ ವಡಗೇರಾ, ಚನ್ನಬಸು ಹಾಗೂ ತಿರುಪತಿ ಇತರರು ಇದ್ದರು.
18ರಂದು ಶ್ರದ್ಧಾಂಜಲಿ
ಗುಲ್ಬರ್ಗ: ಮೂರು ದಶಕ ಕರ್ನಾಟಕದಲ್ಲಿ ರಾಜ್ಯ ದದಸಂಸ ಸ್ವಾಭಿಮಾನಿ ಚಳವಳಿಯಲ್ಲಿ ತೊಡಗಿ, ರಾಜ್ಯ ಖಜಾಂಚಿಯಾಗಿದ್ದ ಅಯ್ಯಪ್ಪ ಅರೋಲಿ ಅವರ ಅಕಾಲಿಕ ನಿಧನದ ಪ್ರಯುಕ್ತ ಆ.18 ರಂದು ಮ.12.30ಕ್ಕೆ ರಾಯಚೂರಿನ ಮಲ್ಲನ ನಾರಾಯಣ ಕಲ್ಯಾಣ ಮಂಟಪದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಸದಸ್ಯ ಮಲ್ಲೇಶಿ ಸಜ್ಜನ್ ಹೇಳಿದರು. ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್, ಡಾ. ದಸ್ತಗೀರ ಸಾಬ್ ದಿನ್ನಿ, ಶೋಭಾ ಕಟ್ಟಿಮನಿ, ಅರ್ಜುನ ಭದ್ರೆ, ಬಸವರಾಜ ಮುಧೋಳ ಆಗಮಿಸಲಿದ್ದಾರೆ ಎಂದರು. ಅಕಾಲಿಕ ನಿಧನ ಹೊಂದಿರುವ ಅಯ್ಯಪ್ಪ ಅರೋಲಿ ಅವರ ಕುಟುಂಬಕ್ಕೆ ರಾಜ್ಯ ಸಮಿತಿ ಸಂಚಾಲಕರು 2 ಲಕ್ಷ ನೆರವು ನೀಡಲಿದ್ದಾರೆ. ಪದಾಧಿಕಾರಿಗಳು ಭಾಗವಹಿಸಲು ಕೋರಿದರು.
ಇಂದು ಸಾಠೆ ಜನ್ಮದಿನೋತ್ಸವ
ಗುಲ್ಬರ್ಗ: ಭಾರತ ಮುಕ್ತಿ ಮೋರ್ಚಾದ ವತಿಯಿಂದ ಆ.15 ರಂದು ನಗರದ ಕನ್ನಡ ಭವನದಲ್ಲಿ ಸಾಹಿತ್ಯ ಸಾಮ್ರಾಟ ಅಣ್ಣಾಬಾವು ಸಾಠೆ ಅವರ ಜನ್ಮದಿನೋತ್ಸವ ನಿಮಿತ್ತ ಈ ದೇಶದಲ್ಲಿ ಬ್ರಾಹ್ಮಣರ ಕೈಯಲ್ಲಿ ಅನಿಯಂತ್ರಿತ ಅಧಿಕಾರ ಇರುವುದೇ ಭ್ರಷ್ಟಾಚಾರ ಮತ್ತು ಆತಂಕವಾದದ ಮೂಲ ಕಾರಣ ಅಥವಾ ನಾವು ಗುಲಾಮಿ ಸ್ಥತಿಯಲ್ಲಿದ್ದಾಗ ಯಾರ ಮಾತು ಕೇಳಿಲ್ಲವೋ ಸ್ವಾತಂತ್ರ್ಯ ನಂತರ ಅವರಿಂದ ಒದೆ ತಿನ್ನಬೇಕಾಗುತ್ತದೆ ಎಂಬ ವಿಷಯ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3ಕ್ಕೆ ನಡೆಯುವ ಕಾರ್ಯಕ್ರಮವನ್ನು ಖ್ಯಾತ ಸಾಹಿತಿ ಡಾ. ವಿಕ್ರಂ ವಿಸಾಜಿ ಉದ್ಘಾಟಿಸಲಿದ್ದಾರೆ.  ಅಣ್ಣಾಬಾವು ಸಾಠೆ ಅವರ ತಮ್ಮನ ಮಗ ವಿಲಾಸ ಸಾಠೆ, ವಿಶ್ವನಾಥ ಕೋರ್ಣೇಶ್ವರ ಅಪ್ಪ, ಡಾ. ಪ್ರಭು ಖಾನಾಪುರೆ, ಬಾಮಸೆಪ್ ರಾಜ್ಯಾಧ್ಯಕ್ಷ ಸುಭಾಷ ಶೀಲವಂತ, ಬಾಮಸೆಫನ್ ಸೌಥ ಇಂಡಿಯಾದ ಪ್ರಚಾರಕ ಕುಮಾರ ಕಾಳೆ, ನಾಗೇಶ ಕೊಳ್ಳಿ, ಗುರಣ್ಣ ಜಮಾದಾರ, ಎಂ. ಬಸವರಾಜ, ವೆಂಕಟೇಶ ದೊರೆಪಲ್ಲಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಸುಧೀರ ನಾಗ ತಿಳಿಸಿದ್ದಾರೆ.
ನಾಳೆ ಶಿಲ್ಪಕಲಾ ಲೋಕಾರ್ಪಣೆ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ವತಿಯಿಂದ ಸಮೂಹ ಶಿಲ್ಪಕಲಾ ಶಿಬಿರದ ಸಮಾರೋಪ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಆ.16 ರಂದು ಬೆಳಿಗ್ಗೆ 11ಕ್ಕೆ ವಿಶ್ವವಿದ್ಯಾಲಯದ ರಾಧಾಕೃಷ್ಣ ಸಭಾಂಗಣದಲ್ಲಿ ನಡೆಯಲಿದೆ. ಖ್ಯಾತ ಕಲಾವಿದ ಪ್ರೊ. ವಿ.ಜಿ. ಅಂದಾನಿ, ಕುಲಸಚಿವ ಪ್ರೊ. ದಯಾನಂದ ಅಗಸರ್, ಕುಲಸಚಿವ (ಮೌಲ್ಯಮಾಪನ) ಪ್ರೊ. ಶಿವಶರಣಪ್ಪ ಹಲಸೆ, ಪ್ರೊ. ಬಿ.ಎನ್. ಕನ್ನಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.