ಕೆರೆ ಅಭಿವೃದ್ಧಿ; ಪ್ರತ್ಯೇಕ ಪ್ರಾಧಿಕಾರ ರಚಿಸುವ ಚಿಂತನೆ
ಕ.ಪ್ರ.ವಾರ್ತೆ, ಯಾದಗಿರಿ, ಆ. 15
ರಾಜ್ಯದ ಎಲ್ಲ ನೀರಾವರಿ ಕೆರೆಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಲು ಚಿಂತನೆ ನಡೆಸಿದೆ ಎಂದು ಜವಳಿ, ಬಂದರು, ಒಳನಾಡು ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ್ ಹೇಳಿದರು.
ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಗುರುವಾರ 67ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕೆಲವು ಕೆರೆಗಳಿಗೆ ನೀರಾವರಿ ಕಾಲುವೆಗಳಿಂದ ನೀರು ತುಂಬಿಸುವ ಯೋಜನೆಯನ್ನೂ ಸರ್ಕಾರ ರೂಪಿಸಿ ಅನುಷ್ಠಾನಗೊಳಿಸಲು ಬದ್ಧವಾಗಿದೆ. ಇದರಿಂದ ಬಡ ರೈತರ ಹಾಗೂ ಗ್ರಾಮಗಳ ಕುಡಿವ ನೀರಿನ ಸಮಸ್ಯೆಯನ್ನು ಸಹ ನಿವಾರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಾದರಿ ಜಿಲ್ಲೆಯಾಗಿಸಲು ಸರ್ಕಾರ ಬದ್ಧ: ಯಾದಗಿರಿ ಹೊಸ ಜಿಲ್ಲೆಯಾದ ನಂತರ ನಗರೋತ್ಥಾನ ಯೋಜನೆಯಡಿ ಮಿನಿ ವಿಧಾನಸೌಧ ಸಂಕೀರ್ಣ, ಜಿಲ್ಲಾ ಆಸ್ಪತ್ರೆ, ಕ್ರೀಡಾಂಗಣ, ಕೆರೆಯ ಅಭಿವೃದ್ಧಿ, ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಸುಮಾರು 300 ಕೋಟಿ ಪ್ಯಾಕೇಜ್ ಅಡಿಯಲ್ಲಿ ಕಾಮಗಾರಿ ಪ್ರಾರಂಭಿಸಿದ್ದು, ತೀವ್ರಗತಿಯಲ್ಲಿ ಮುಗಿಸಿ ಮಾದರಿ ಜಿಲ್ಲೆಯನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರ ಉಣ್ಣೆ ವಲಯ ಪುನಶ್ಚೇತನಕ್ಕಾಗಿ 27 ಕೋಟಿ ಮಂಜೂರು ಮಾಡಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ 100 ದಿನಗಳನ್ನು ಪೂರೈಸುತ್ತಿದೆ. ಅನ್ನಭಾಗ್ಯ ಯೋಜನೆಯಡಿ 1ಕ್ಕೆ ಕೆಜಿ ಅಕ್ಕಿ ನೀಡುವ, ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲು ವಿತರಣೆ, ರೈತರ ಸಾಲ ಮನ್ನಾ, ನೇಕಾರರ ಸಾಲ ಮನ್ನಾ ಸೇರಿದಂತೆ ಇಂತಹ ಹತ್ತು ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ಹೈ-ಕ ಅಭಿವೃದ್ಧಿಗೆ ಒತ್ತು: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಅಪೂರ್ವ ಕೊಡುಗೆಯ ಫಲವಾಗಿ 371(ಜೆ) ವಿಧಿ ಅನುಷ್ಠಾನಗೊಳಿಸಿ ಹೈಕ ಭಾಗದ 6 ಜಿಲ್ಲೆಗಳ ಸ್ಥಳೀಯರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ.70ರಿಂದ ಶೇ.85ರವರೆಗೆ ಮೀಸಲಾತಿ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ನಾರಾಯಣಪೇಟ ರೇಲ್ವೆ ನಿಲ್ದಾಣಕ್ಕೆ ಸೈದಾಪುರ ನಿಲ್ದಾಣವೆಂದು ಮರು ನಾಮಕಾರಣ ಮಾಡಿ ಘೋಷಿಸುವ ಕುರಿತಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಧಾರವಾಡ ಮತ್ತು ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂ ಪೀಠಗಳನ್ನಾಗಿ ಮಾಡಲು ಅನುಮೋದನೆ ದೊರೆತಿದೆ ಎಂದು ಹೇಳಿದರು. ಯಾದಗಿರಿ ತಾಲೂಕಿನ ಕಡೇಚೂರು, ಬಾಡಿಯಾಳ ಗ್ರಾಮದಲ್ಲಿ ಜವಳಿ ಪಾರ್ಕ್ ಸ್ಥಾಪನೆ, ಜಿಲ್ಲೆಯ ಪ್ರತಿಷ್ಠಿತ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದಲ್ಲಿ ಕಾಮಗಾರಿ ತ್ವರಿತ ಗತಿಯಲ್ಲಿ ತೆಗೆದುಕೊಂಡು ರಾಜ್ಯದ ಪಾಲಿನ 177 ಟಿಎಂಸಿ ನೀರನ್ನು ಬಳಸಿ ಸಾವಿರಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಉದ್ದೇಶಿಸಿದೆ. ಈ ಮೂರನೇ ಹಂತದ ಕಾಮಗಾರಿಗೆ ಈಗಾಗಲೇ 10 ಸಾವಿರ ಕೋಟಿ ಅಂದಾಜು ಪಟ್ಟಿಗೆ ಮಂಜೂರಾತಿ ದೊರಕಿದ್ದು, ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಅದರಂತೆ ಕೇಂದ್ರ ಸರ್ಕಾರದ 4,100 ಕೋಟಿ ಅದಾನದಿಂದ ಈಗ ಇರುವ ಎಲ್ಲಾ ಯುಕೆಪಿ ನಾಲೆಗಳ ಆಧುನೀಕರಣ, ಸಬಲೀಕರಣ ಮತ್ತು ವಿಸ್ತರಣೆ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ ಎಂದು ಹೇಳಿದರು.
ಸರ್ವರಿಗೂ ಸಮಪಾಲು.. ಗುರಿ: ಆಹಾರ ಭದ್ರತಾ ಕಾಯ್ದೆ ಜಾರಿ, ರಾಜ್ಯದ ಕಟ್ಟಕಡೆಯ ವ್ಯಕ್ತಿಗೆ ಮೂಲ ಸೌಕರ್ಯ ಒದಗಿಸುವುದು ಹಾಗೂ ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎಂಬ ಘೋಷಣೆಯೊಂದಿಗೆ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಗುರಿ ಹೊಂದಿದೆ ಎಂದು ಚಿಂಚನಸೂರ ಹೇಳಿದರು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಯೋಧರ ಕುಟುಂಬದ ಸದಸ್ಯರಿಗೆ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಜನಮನ ಸೆಳೆದ ನೃತ್ಯ ಪ್ರದರ್ಶನ: ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳ ದೇಶಭಕ್ತಿ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಇದಕ್ಕೂ ಮುನ್ನ ಸಚಿವರು ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್, ಗೃಹರಕ್ಷಕ ದಳ, ಶಾಲಾ ಕಾಲೇಜುಗಳ ಎನ್ಸಿಸಿ, ಸ್ಕೌಟ್ಸ್, ಗೈಡ್ಸ್ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಜಿಪಂ ಅಧ್ಯಕ್ಷ ಶರಣಿಕಕುಮಾರ ದೋಖಾ, ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡ್ರಕಿ ಇತರರು ಇದ್ದರು. ಉಪ ವಿಭಾಗಾಧಿಕಾರಿ ಬಿ.ಪಿ. ವಿಜಯ ಸ್ವಾಗತಿಸಿದರು.
'ಸಹಕಾರ ಸಂಘಗಳಿಗೆ
ಸ್ವಾಯತ್ತತೆ ಬೇಕು'
ಶಹಾಪುರ: ಸಹಕಾರ ಸಂಘಗಳು ದೇಶದ ಪ್ರಗತಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ಅಂತಹ ಸಂಘಗಳಿಗೆ ಹೆಚ್ಚಿನ ಸ್ವಾಯತ್ತತೆ ಬೇಕು. ರಾಜಕೀಯ ಪ್ರವೇಶವಿಲ್ಲದೇ ಅವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸಹಕಾರ ಸಂಘಗಳು ಉನ್ನತ ಮಟ್ಟಕ್ಕೇರುತ್ತವೆ ಎಂದು ಶಾಸಕ ಗುರುಪಾಟೀಲ್ ಶಿರವಾಳ ಅಭಿಪ್ರಾಯಪಟ್ಟರು. ಪಟ್ಟಣದ ಕಲ್ಯಾಣ ಕರ್ನಾಟಕ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ, ನಂತರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ಶರಣಬಸವ ಗದ್ದುಗೆ, ಉಪಾಧ್ಯಕ್ಷ ಸೋಮಣ್ಣ ದೇವದುರ್ಗ, ನಿರ್ದೇಶಕ ಚೆನ್ನಬಸಯ್ಯಸ್ವಾಮಿ ಸಿದ್ದಲಿಂಗೇಶ್ವರಬೆಟ್ಟ, ಸುರೇಶ ಜೆಡೆಪ್ಪಮಠ, ಕಾಂತೀಲಾಲ್ ಜೈನ್, ರುದ್ರಯ್ಯಸ್ವಾಮಿ, ಭೀಮರಾಯ ಮಮದಾಪುರ ಇದ್ದರು. ಕಾರ್ಯದರ್ಶಿ ಅಮರೇಶ ಹಿರೇಮಠ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

