ಗುಲ್ಬರ್ಗಾ

ಕ್ರೂಜರ್‌ನಲ್ಲಿ ಕರೆದೊಯ್ದು ಕೊಲೆ

Published On :

ಗುಲ್ಬರ್ಗ: 8-10 ಜನರ ತಂಡವೊಂದು ವ್ಯಕ್ತಿಯೊಬ್ಬನನ್ನು ಕ್ರೂಜರ್‌ನಲ್ಲಿ ಕರೆದುಕೊಂಡು ಹೋಗಿ ಚಾಕುವಿನಿಂದ ತಿವಿದು, ಕೊಲೆ ಮಾಡಿದ ಘಟನೆ ಆಳಂದ ತಾಲೂಕಿನ ವೈಜಾಪುರ ಸೀಮಾಂತರದಲ್ಲಿರುವ ವಾರಿ ಹಳ್ಳದ ಹತ್ತಿರ ನಡೆದಿದೆ.
ಸಿಂದಗಿ ತಾಲೂಕಿನ ಆಲಮೇಲ ಗ್ರಾಮದ ಸಿದ್ದಪ್ಪ ಕಾಳೆ ಎಂಬಾತನೆ ಕೊಲೆಯಾದ ನತದೃಷ್ಟ. ಸಿದ್ದಪ್ಪ ಕಾಳೆ ಮನೆಯಲ್ಲಿ ಇದ್ದಾಗ ಆ. 19ರಂದು ಸಂಜೆ 4ರ ಸುಮಾರಿಗೆ ರೇಲಪೂರ ಅಲಿಯಾಸ ಬಾಬು ಕಾಳೆ, ಮುಖೇಶ ಕಾಳೆ, ಶಮ್ಯಾ ಕಾಳೆ, ರವ್ಯಾ ಸಿಂಧೆ, ಬಪ್ಯಾ, ಕುನ್ಯಾಬಾಯಿ ಇತರರು ಕ್ರೂಜರ್‌ನಲ್ಲಿ ಬಂದು ದೇವರು ಮಾಡೋದಿದೆ ಎಂದು ಒತ್ತಾಯದಿಂದ ಕರೆದುಕೊಂಡು ಹೋಗಿ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿದ್ದ ಸಿದ್ದಪ್ಪನಿಗೆ ಗುಲ್ಬರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ 20ರಂದು ಕೊನೆಯುಸಿರೆಳೆದಿದ್ದಾನೆ. ಪತ್ನಿ ಯಲ್ಲಮ್ಮ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾಳೆ.
ವಿದ್ಯುತ್ ತಗುಲಿ ಮನೆ ಭಸ್ಮ
ಆಳಂದ: ವಿದ್ಯುತ್ ತಗುಲಿ ಮನೆ ಭಸ್ಮಗೊಂಡ ಘಟನೆ ತಾಲೂಕಿನ ಭೂಸನೂರ ಸಕ್ಕರೆ ಕಾರ್ಖಾನೆ ಹತ್ತಿರ ಗುರುವಾರ ಸಂಜೆ ನಡೆದಿದೆ. ಮಲ್ಲಣ್ಣ ಮಾಲಿಪಾಟೀಲ್‌ರಿಗೆ ಸೇರಿದ ಮನೆ ಇದಾಗಿದ್ದು, ಮನೆಯ ಮೇಲೆ ಮೇನ್ ವಿದ್ಯುತ್ ತಂತಿ ಹಾದು ಹೋಗಿತ್ತು. 2 ತಂತಿ ಕೂಡಿ ವಿದ್ಯುತ್ ಸ್ಪಾರ್ಕ್ ಆಗಿರುವುದರಿಂದ ಏಕಾಏಕಿ ಬೆಂಕಿ ಹೊತ್ತಿದ್ದರಿಂದ ಜೋಳ, ಗೋಧಿ, ಅಕ್ಕಿ, ರಸಗೊಬ್ಬರ, ದಿನಬಳಕೆಯ ಅಡುಗೆ ಸಾಮಾಗ್ರಿಗಳು, ಬಟ್ಟೆ, ಹಣ, ಕೃಷಿ ಸಲಕರಣೆಗಳು ಬೆಂಕಿಗಾಹುತಿಯಾಗಿವೆ. ಅಂದಾಜು 3 ಲಕ್ಷ ಹಾನಿಯಾಗಿದೆ. ಅಗ್ನಿಶಾಮಕದವರ ಹರ ಸಾಹಸದಿಂದ ಹತ್ತಿರದ ಮನೆಗಳಿಗೆ ಆಗುವ ಅನಾಹುತವನ್ನು ತಡೆಯಲಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಸಿದ್ದಮಲ್ಲಪ್ಪ ಅಷ್ಟಗಿ, ಗ್ರಾಮ ಲೇಖಾಪಾಲಕ ಬಸವರಾಜ ಖಂಡಾಳ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮರ ಸಾಗಣೆ: ಬಂಧನ
ಚಿಂಚೋಳಿ: ತಾಲೂಕಿನ ಗೊಟ್ಟಂಗೊಟ್ಟ ಕಾಯ್ದಿಟ್ಟ ಅರಣ್ಯದಲ್ಲಿ ಬೆಳೆಲಾಗಿದ್ದ ಸಾಗುವಾನಿ ಮರಗಳನ್ನು ಕಡಿದು ಅಟೋದಲ್ಲಿ ಆಂಧ್ರಕ್ಕೆ ಕಳ್ಳ ಸಾಗಾಟ ಮಾಡುತ್ತ ಇಬ್ಬರು ಅಂತಾರಾರಾಜ್ಯ ಕಳ್ಳರನ್ನು ಮಾಲು ಸಮೇತವಾಗಿ ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಹೀರಾಬಾದ್‌ನ ಮಿಟ್ಟು ನಾಯಕ ತಾಂಡಾದ ತೋಳುರಾಮ ಶೆಟ್ಟಿ ರಾಠೋಡ (35), ಸೀತಾರಾಮ ಗೋಪಾಲ್ ಪವಾರ (24) ಎಂಬುವವರನ್ನು ಬಂಧಿಸಿ ಸಾಗುವಾನಿ ತುಂಡುಗಳನ್ನು ಮತ್ತು ಆಟೋ ವಶಪಡಿಸಿಕೊಳ್ಳಲಾಗಿದೆ. ಗೊಟ್ಟಂಗೊಟ್ಟ ಕಾಯ್ದಿಟ್ಟ ಅರಣ್ಯಪ್ರದೇಶದ ವ್ಯಾಪ್ತಿಯಲ್ಲಿ ಬರುವ ಪಡಿಯಾಳ ತಾಂಡಾದ ಹತ್ತಿರದಲ್ಲಿರುವ ರಾಜ್ಯದ ಅರಣ್ಯಪ್ರದೇಶದಲ್ಲಿ ಬೆಳೆದಿರುವ ಸಾಗುವಾನಿ ಮರಗಳ 23 ತುಂಡುಗಳನ್ನು ರು. 30 ಸಾವಿರ ರು. ಮೌಲ್ಯದ್ದು ಆಟೋದಲ್ಲಿ ಆಂಧ್ರಕ್ಕೆ ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸಾಗಿಸುತ್ತಿದ್ದಾಗ ದಾಳಿ ನಡೆಸಿ ಬಂಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.