ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ಹೋಬಳಿ ಮಟ್ಟದ ಕ್ರೀಡೆ: ಸಾಧನೆ
ಆಳಂದ: ಪಟ್ಟಣದ ವಿವೇಕ ವರ್ಧಿನಿ ಸಿಬಿಎಸ್‌ಸಿ ಪ್ರೌಢಶಾಲೆ ವಿದ್ಯಾರ್ಥಿಗಳು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಆಟಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ದೈಹಿಕ ಶಿಕ್ಷಕ ಪ್ರಭಾಕರ್ ಮದಾನೆ, ಲಿಂಗರಾಜ ಘೋಡಕೆ ತಿಳಿಸಿದ್ದಾರೆ. 1500 ಮೀ. ಓಟದ ಸ್ಪರ್ಧೆಯಲ್ಲಿ ಸ್ವಾತಿ ಬೆಳ್ಳೆ ಪ್ರಥಮ, 200 ಮೀ, ಓಟದಲ್ಲಿ ಸಾಧಿಕ್ ದ್ವಿತೀಯ, 5000 ಮೀ. ಓಟದಲ್ಲಿ ಅರುಣಕುಮಾರ್ ಪ್ರಥಮ, ಟ್ರಿಪಲ್ ಜಂಪ್ ಅಕ್ಬರ್ ಪ್ರಥಮ, ಭಲ್ಲೆ ಎಸೆತದಲ್ಲಿ ಸುಮನ ಪ್ರಥಮ, 4್ಢ100 ಮೀ. ರಿಲೇಯಲ್ಲಿ ಬಾಲಕರು ಪ್ರಥಮ, ಬಾಲಕಿಯರು ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಮಕ್ಕಳ ಸಾಧನೆಗೆ ಶಾಸಕ ಬಿ.ಆರ್. ಪಾಟೀಲ್, ಸಂಸ್ಥೆ ಕಾರ್ಯದರ್ಶಿ ಡಾ. ಪ್ರಭು ಖಾನಾಪುರೆ, ಆಡಳಿತಾಧಿಕಾರಿ ಮಲ್ಲಿನಾಥ ಯಲಶೆಟ್ಟಿ, ಪ್ರಾಚಾರ್ಯ ದೀಪಾ ನೆಬೂ ಹರ್ಷ ವ್ಯಕ್ತಪಡಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ: ಕಾನೂನು ಸೂಕ್ಷ್ಮವಾಗಲಿ
ಗುಲ್ಬರ್ಗ: ಮುಂಬೈನ ಛಾಯಾಗ್ರಾಹಕಿಯಾಗಿದ್ದ ಯುವತಿ ಮೇಲೆ ಹಾಡುಹಗಲೇ ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ದೇಶದಲ್ಲಿ ಮಹಿಳೆಯರು ಎಳ್ಳಷ್ಟು ಸುರಕ್ಷಿತವಾಗಿಲ್ಲ ಎಂಬುವುದನ್ನು ಮತ್ತೆ ಸಾಬೀತುಗೊಳಿಸಿದೆ ಎಂದು ಪ್ರಜ್ಞಾ ಕಾನೂನು ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ. ದೆಹಲಿಯ ಸಾಮೂಹಿಕ ಅತ್ಯಾಚಾರದ ಘಟನೆಯು ಜನಮಾನಸದಿಂದ ಇನ್ನು ಅಳಿಸಿಹೋಗಿಲ್ಲ. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಲ್ಲಿ ತೋರುತ್ತಿರುವ ವಿಳಂಬ ಧೋರಣೆಯೇ ಮತ್ತೆ ಈ ಬಗೆಯ ಘಟನೆಗಳು ಪುನರಾವರ್ತನೆಯಾಗುತ್ತಿರುವುದಕ್ಕೆ ಕಾರಣವಾಗುತ್ತಿವೆ ಎಂದು ತಿಳಿಸಿದೆ. ಈ ದಿಸೆಯಲ್ಲಿ ಕಾನೂನು ಸುವ್ಯವಸ್ಥೆ ಇನ್ನಷ್ಟು ಸೂಕ್ತಗೊಳಿಸಬೇಕಿದೆ. ಮುಂಬೈನಲ್ಲಿ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು. ಇಲ್ಲವಾದರೆ ದೇಶವ್ಯಾಪಿ ಹೋರಾಟ ಮಾಡಲಾಗುವುದು ಎಂದು ಡಾ.ಮೀನಾಕ್ಷಿ ಬಾಳಿ, ನೀಲಾ ಕೆ, ಶಾಂತಾ ಮಠ, ಚಂದಮ್ಮ ಮಾದಿನಕರ್ ಎಚ್ಚರಿಸಿದ್ದಾರೆ.

ಖಾಸಗಿ ವಾಹನಗಳ ಸಂಚಾರಕ್ಕೆ ಮನವಿ
ಗುಲ್ಬರ್ಗ: ನಗರದ ಗಂಜ್ ಬಸ್ ನಿಲ್ದಾಣದಿಂದ ಪ್ರತಿದಿನ ಸುಮಾರು 8-10 ಸಾವಿರ ಜನ ಸಂಚರಿಸುತ್ತಾರೆ. ಆದರೆ ಇತ್ತೀಚೆಗೆ ಖಾಸಗಿ (ಕ್ರೂಸರ್, ಜೀಪ್) ವಾಹನಗಳನ್ನು ನಗರದಲ್ಲಿ ಸಂಚರಿಸಲು ಬಿಡುತ್ತಿಲ್ಲ. ಆದ್ದರಿಂದ ಗಂಜ್ ಬಸ್ ನಿಲ್ದಾಣದಿಂದ ಸರ್ಕಾರಿ ಬಸ್‌ಗಳನ್ನು ಓಡಿಸಬೇಕೆಂದು ರೇವಪ್ಪ ಮುಲಗೆ ಒತ್ತಾಯಿಸಿದ್ದಾರೆ. ಹಬ್ಬಗಳು ಇರುವುದರಿಂದ ಪ್ರಯಾಣಿಕರು ಕಿರಾಣಿಯ ಸಾಮಾನು ಸೇರಿದಂತೆ ಇನ್ನಿತರ ದಿನಸಿಗಳನ್ನು ಖರೀದಿಸಲು ಗುಲ್ಬರ್ಗಕ್ಕೆ ಬರುತ್ತಾರೆ. ಆದರೆ ಸರ್ಕಾರಿ ಬಸ್‌ಗಳು ಹುಮನಾಬಾದ್ ರಿಂಗ್ ರಸ್ತೆ ಮೂಲಕ ಹೊರುಡುತ್ತಲಿವೆ. ಇದರಿಂದ ಪ್ರಯಾಣಿರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರಯಾಣಿಕರಿಗೆ ತೊಂದರೆ ತಪ್ಪಿಸಲು ತಕ್ಷಣ ಗಂಜ್ ಬಸ್ ನಿಲ್ದಾಣದಿಂದ ಹುಮನಾಬಾದ್‌ವರೆಗೆ ಬಸ್ಸುಗಳನ್ನು ಓಡಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಪ್ರಯಾಣಿಕರ ಸಮಸ್ಯೆ ಅರಿತು, ಅತೀ ಬೇಗನೆ ಬಸ್ಸಿನ ವ್ಯವಸ್ಥೆ ಮಾಡಬೇಕೆಂದು ವಿನಂತಿಸಿದ್ದಾರೆ.

ಡೋಣಗಾಂವಕ್ಕೆ ಬಸ್ ಸೌಕರ್ಯ
ಗುಲ್ಬರ್ಗ: ಚಿತ್ತಾಪುರ ಬಸ್ ಡಿಪೋ ಘಟಕದಿಂದ ಡೋಣಗಾಂವ ಗ್ರಾಮಕ್ಕೆ ಬಸ್ಸಿನ ಸೌಕರ್ಯ ಒದಗಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗುಲ್ಬರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಆ.5 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಡೋಣಗಾಂವಕ್ಕೆ ಹೆಚ್ಚಿನ ಬಸ್ ಸೌಲಭ್ಯಕ್ಕೆ ಆಗ್ರಹ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡ ಸುದ್ದಿಗೆ ಸ್ಪಷ್ಟಿಕರಣ ನೀಡಿರುವ ಅವರು, ಪ್ರತಿದಿನ ಬೆಳಿಗ್ಗೆ 8.15, ಮಧ್ಯಾಹ್ನ 12ಕ್ಕೆ, ಸಂಜೆ 4.30, ರಾತ್ರಿ 7.30ಕ್ಕೆ ನಾಲ್ಕು ಸುತ್ತಿನ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ಅಲ್ಲದೇ ಈ ಸಾರಿಗೆಯನ್ನು ನಿಯಮಿತವಾಗಿ ಕಾರ್ಯಾಚರಣೆ ಮಾಡಲು ಘಟಕ ವ್ಯವಸ್ಥಾಪಕರು ಕಟ್ಟುನಿಟ್ಟಿನ ಆದೇಶ ನೀಡಿ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಚಿತ್ತಾಪುರ: ರಾಘವೇಂದ್ರ ಸ್ವಾಮಿಗಳ ಆರಾಧನೆ ಸಂಭ್ರಮ
ಚಿತ್ತಾಪುರ: ಇಲ್ಲಿನ ಶ್ರೀಮಠದಲ್ಲಿ ವೇದ ಮಂತ್ರಘೋಷ, ವಿದ್ಯುದ್ವೀಪ, ಹೂವಿನಿಂದ ಅಲಂಕೃತ ರಾಯರ ಮಠ ಸಡಗರ ಸಂಭ್ರಮದ ಮಧ್ಯೆ ಗುರುವಾರ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ 342ನೇ ಅರಾಧನೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಅರಾಧನೆ ಮಹೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಗಜ ವಾಹನೋತ್ಸವ ನಡೆಯಿತು. ಸಂಜೆ ಪಲ್ಲಕ್ಕಿ ಸೇವೆ, ತೋಟ್ಟಿಲು ಸೇವೆ ವಿಜೃಂಭಣೆಯಿಂದ ಜರುಗಿತು.
ಪಲ್ಲಕ್ಕಿ ಮಂಡಳಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ವಿಶೇಷ ಪ್ರವಚನ ಹೇಳಲಾಯಿತು.
ಮುಖಂಡರಾದ ಹಣಮಂತರಾವ ದೇಶಪಾಂಡೆ, ಪ್ರಕಾಶ ಕುಲಕರ್ಣಿ, ಧಿರೇಂದ್ರರಾವ ಮೊಹರಿರ್, ಭರತಕುಮಾರ್ ಹಣ್ಣಿಕೇರಾ, ನರಹರಿ ಕುಲ್ಕರ್ಣಿ, ಅರವಿಂದ ಸರಾಫ, ರಾಜು ಕುಲಕರ್ಣಿ, ಪ್ರದೀಪ ಹಣ್ಣಿಕೇರಾ, ಕಣ್ವ ನಾಯಕ, ಬಾಬು ಸರಾಫ, ಪುಷ್ಪಾವತಿ ಮೆಹರೀರ್, ಸುಂದ್ರಾಬಾಯಿ ಹಣ್ಣಿಕೇರಾ, ಸ್ವಪ್ನಾ ಪಾಟೀಲ್, ವೈಜಯಂತಿ ಕುಲಕರ್ಣಿ, ಇಂದಿರಾ ದೇಶಪಾಂಡೆ ಭಾಗವಹಿಸಿದ್ದರು. ಸಾವಿರಾರು ಭಕ್ತರು ರಾಯರ ದರ್ಶನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.