ಗುಲ್ಬರ್ಗಾ

ಸುದ್ದಿಸಂಕ್ಷೇಪ

Published On :

ನಾಳೆ ಬಂದ್ ಹಿಂದಕ್ಕೆ
ಗುಲ್ಬರ್ಗ: ಜಿಲ್ಲೆಯ ಸಚಿವರು, ಉನ್ನದ ಶಿಕ್ಷಣ ಸಚಿವರು ಡಿಪ್ಲೋಮಾ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಸಿಒಬಿ ಪದ್ಥತಿ ಜಾರಿಗೆ ತರುವ ವಿಷಯವಾಗಿ ಒಂದು ವಾರದಲ್ಲಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಆ.29 ರಂದು ಕರೆ ನೀಡಿರುವ ಗುಲ್ಬರ್ಗ ಬಂದ್ ಹಿಂದಕ್ಕೆ ಪಡೆಯಲಾಗಿದೆ ಎಂದು ಹೈ.ಕ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಒಕ್ಕೂಟ ತಿಳಿಸಿದೆ.
ಆ.29 ರಂದು ಬೆಳಿಗ್ಗೆ 10.30ಕ್ಕೆ ಎಲ್ಲ ವಿದ್ಯಾರ್ಥಿಗಳು ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಸಮಾವೇಶಗೊಂಡು ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಆಸ್ತಿಗಾಗಿ ತಾಯಿಯನ್ನೇ ಕೊಂದ ಮಗ
ಗುಲ್ಬರ್ಗ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದ ಅಮಾನವೀಯ ಘಟನೆ ಫರಹತಾಬಾದ್ ಠಾಣೆ ವ್ಯಾಪ್ತಿಯ ಕೊಳ್ಳೂರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಕ್ಯಾದಿಗಮ್ಮ ಗಂಡ ಮಹಾದೇವಪ್ಪ ಪೂಜಾರಿ(50) ಎಂಬುವವರನ್ನು ಅವರ ಮಗ ಭೀಮಪ್ಪ ತಂದೆ ಮಹಾದೇವಪ್ಪ ಪೂಜಾರಿ(26) ಎಂಬಾತ ಕೊಲೆಗೈದು ಪರಾರಿಯಾಗಿದ್ದಾನೆ. ಚಾಕುವಿನಿಂದ ಹೊಟ್ಟೆ ಮತ್ತು ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ಕೊಲೆಯಾದ ಕ್ಯಾದಿಗಮ್ಮ ಮತ್ತು ಆಕೆಯ ಮಗಳು ಬೇರೆ ಮನೆ ಮಾಡಿಕೊಂಡಿದ್ದರು. ಮಗ ಭೀಮಪ್ಪ ಪೂಜಾರಿ ತನ್ನ ಹೆಸರಿಗೆ ಹೊಲ ಮಾಡಿಕೊಂಡ ವಿಷಯ ತಿಳಿದು ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.ಆಸ್ತಿಯನ್ನು ತಾಯಿ, ಮಗ ಹಾಗೂ ಮಗಳ ನಡುವೆ ಹಂಚಿಕೆ ಮಾಡುವಂತೆ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿತ್ತು. ಕುಪಿತಗೊಂಡ ಭೀಮಪ್ಪ ಪೂಜಾರಿ ಮಂಗಳವಾರ ಬೆಳಗ್ಗೆ 8ರ ಸುಮಾರಿಗೆ ತನ್ನ ತಾಯಿ ಕ್ಯಾದಿಗೆಮ್ಮನನ್ನು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಫರಹತಾಬಾದ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ
ಗುಲ್ಬರ್ಗ: ಗಂಡನ ಕಿರುಕುಳ ತಾಳದೆ ಮಹಿಳೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೇಡಂ ತಾಲೂಕಿನ ನಾಡೇಪಲ್ಲಿ ತಾಂಡಾದಲ್ಲಿ ನಡೆದಿದೆ.
ರಾಮಿಬಾಯಿ ಗಂಡ ಕಿಶನ್ ಚವ್ಹಾಣ ಮೃತಳು. ಕಿಶನ್‌ಗೆ ರಾಮಿಬಾಯಿ 3ನೇ ಹೆಂಡತಿಯಾಗಿದ್ದು, ಆತ ರಾಮಿಬಾಯಿ ಶೀಲ ಶಂಕಿಸಿ ಮತ್ತು ಕೂಲಿ ಮಾಡಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದನು. ಆತನೊಂದಿಗೆ ಕಿಶನ್‌ನ ಎರಡನೇ ಹೆಂಡತಿ ಕಮಲಾಬಾಯಿ, ಅವಳ ಮಗ ರಡ್ಯಾ ನಾಯಕ ಸಹ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. 24ರಂದು ಮೂರು ಜನ ಸೇರಿ ಹಲ್ಲೆ ಮಾಡಿದ್ದರಿಂದ ಬೇಸತ್ತು ಕ್ರಿಮಿನಾಷಕ ಸೇವಿಸಿದಾಗ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಮೃತನ ಸಹೋದರ ನೀಲ್ಯಾ ನಾಯಕ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾರು ಪಲ್ಟಿ; ಒಬ್ಬ ಸಾವು
ಗುಲ್ಬರ್ಗ: ಕಾರು ಪಲ್ಟಿಯಾಗಿ ಒಬ್ಬ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡ ಘಟನೆ ಕಮಲಾಪುರ ಸಮೀಪದ ಕುದುರೆಮುಖ ಕ್ರಾಸ್ ಹತ್ತಿರ ಸೋಮವಾರ ರಾತ್ರಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಹೈದ್ರಾಬಾದಿನ ಅಭಿಷೇಕ ಹರಿಶ್ಚಂದ್ರ(26) ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಿದ್ದಾರ್ಥ ರವಿಕಿರಣ ಮತ್ತು ಅವರ ಪತ್ನಿ ಅರ್ಚನಾ ಸಿದ್ದಾರ್ಥ ಗಾಯಗೊಂಡಿದ್ದಾಳೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಹೈದ್ರಾಬಾದ್‌ನಿಂದ ಗೋವಾಕ್ಕೆ ಹೊರಟಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಸ್ಪರ್ಶ, 7 ಕುರಿ ಸಾವು
ಚಿಂಚೋಳಿ: ತಾಲೂಕಿನ ಕೊರವಿ ದೊಡ್ಡ ತಾಂಡಾದಲ್ಲಿ ಸೋಮವಾರ ಸಂಜೆ ಬಿಸಿದ ಬಿರುಗಾಳಿಯಿಂದಾಗಿ ವಿದ್ಯುತ್ ತಂತಿ ಕಡಿದು ಕುರಿಗಳ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ 7 ಕುರಿಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿವೆ.
ತಾಂಡಾದ ಸೋಮನಾಥ ಸೀತು ರಾಠೋಡ ಅವರು ಕುರಿಗಳನ್ನು ಮೇಯಿಸಿಕೊಂಡು ಸಂಜೆ ಮನೆಯ ಮುಂದಿನ ರಸ್ತೆ ಮೇಲೆ ಕುಳಿತಿದ್ದ ಕುರಿಗಳ ಮೇಲೆ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾವಾಗಿ 7 ಕುರಿಗಳು ಸಂಪೂರ್ಣವಾಗಿ ಸಾವನ್ನಪ್ಪಿವೆ.

ಇಂದು ಸಚಿವ, ಶಾಸಕರಿಗೆ ಸನ್ಮಾನ
ಜೇವರ್ಗಿ: ಜಿಲ್ಲೆಯ ನೂತನ ಶಾಸಕರು ಹಾಗೂ ಸಚಿವರಿಗೆ ತಾಲೂಕಿನ ಬಿರಾಳ ಗ್ರಾಪಂನಿಂದ ಬರುವ 28ರಂದು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದಲಿಂಗರಡ್ಡಿಗೌಡ ಇಟಗಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 11ಕ್ಕೆ ತಾಲೂಕಿನ ಬಿರಾಳ(ಬಿ) ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಿರಾಳ ಗ್ರಾಪಂ ಅಧ್ಯಕ್ಷ ಮಲ್ಲಾರಡ್ಡಿ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಖಮರುಲ್ ಇಸ್ಲಾಂ, ಬಾಬುರಾವ ಚಿಂಚನಸೂರ, ಡಾ. ಶರಣಪ್ರಕಾಶ ಪಾಟೀಲ್, ಶಾಸಕರಾದ ಡಾ.ಅಜಯಸಿಂಗ್, ಮಾಲಿಕಯ್ಯ ಗುತ್ತೇದಾರ, ಪ್ರಿಯಾಂಕ್ ಖರ್ಗೆ, ಡಾ. ಉಮೇಶ ಜಾದವ, ಅಲ್ಲಂಪ್ರಭು ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಾಗಣಗೌಡ ಪಾಟೀಲ್ ಸಂಕನೂರ ಅವರನ್ನು ಸನ್ಮಾನಿಸಲಾಗುತ್ತಿದೆ.

ಇಂದು ರಫ್ತುತರಬೇತಿ ಶಿಬಿರ
ಗುಲ್ಬರ್ಗ: ಇಲ್ಲಿನ ದೊಡ್ಡಪ್ಪ ಅಪ್ಪ ಇನ್‌ಸ್ಟಿಟ್ಯೂಟ್ ಆಫ್ ಎಂಬಿಎ, ಎಸ್‌ಬಿ ಕಾಲೇಜು ಆವರಣದಲ್ಲಿ ಆ.28 ರಂದು ಬೆಳಿಗ್ಗೆ 10ಕ್ಕೆ ಒಂದು ದಿನದ ರಫ್ತುಜಾಗೃತಿ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಗುಲ್ಬರ್ಗದ ಜಿಲ್ಲಾ ಕೈಗಾರಿಕಾ ಕೇಂದ್ರ, ಹೈದ್ರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಸಣ್ಣ ಕೈಗಾರಿಕೆಗಳ ಸಂಘ, ದೊಡ್ಡಪ್ಪ ಅಪ್ಪ ಇನ್‌ಸ್ಟಿಟ್ಯೂಟ್ ಆಫ್‌ಎಂಬಿಎ ಹಾಗೂ ಫೆಡರೇಶನ್ ಆಫ್ ಇಂಡಿಯನ್ ಎಕ್ಸಪೋರ್ಟ್ ಆರ್ಗನೈಜೇಶನ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ಒಂದು ದಿನದ ತರಬೇತಿ ಶಿಬಿರ ಜರುಗಲಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-223988) ಅಥವಾ ಧಾರವಾಡದ ವಿಟಿಪಿಸಿ ಜಂಟಿ ನಿರ್ದೇಶಕರು ಸಂಖ್ಯೆ 0836-2222600 ಅಥವಾ 9342548485) ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.