ಯಾದಗಿರಿ: ನಿರ್ವಾಹಕಿಯೊಬ್ಬರು ಥಳಿಸಿದ್ದಾರೆಂದು ಆರೋಪಿಸಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕೇಂದ್ರ ಬಸ್ ನಿಲ್ದಾಣದೆದುರು ನಡೆಸಿದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆಸಿದ ಘಟನೆ ಬುಧವಾರ ನಡೆದಿದೆ.
ನಗರ ಸಾರಿಗೆ ಬಸ್ ತುಂಬಿದ್ದರಿಂದ ಕೆಲ ವಿದ್ಯಾರ್ಥಿಗಳು ಬಾಗಿಲಲ್ಲಿ ನಿಂತಿದ್ದರು. ಈ ವೇಳೆ ನಿರ್ವಾಹಕಿ ಈ ಬಸ್ ತುಂಬಿದೆ ಬೇರೆ ಬಸ್ಗೆ ಬರುವಂತೆ ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಬಸ್ನಿಂದ ಇಳಿಯಲು ನಿರಾಕರಿಸಿದಾಗ ಮಾತಿನ ಚಕಮಕಿ ನಡೆದಿದ್ದು, ನಿರ್ವಾಹಕಿ ವಿದ್ಯಾರ್ಥಿಯೊಬ್ಬನ ಕೊರಳುಪಟ್ಟಿ ಹಿಡಿದು ಥಳಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ ನಿಲ್ದಾಣದಲ್ಲಿ ನಿಂತಿದ್ದ ಬಸ್ಗಳಿಗೆ ಕಲ್ಲು ತೂರಿದ್ದಾರೆ. ಇದೇ ವೇಳೆ ಡ್ರೈವರ್ ಮೇಲೂ ಹಲ್ಲೆ ನಡೆಸಲಾಗಿದೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಸುಮಾರು 15 ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ವಿದ್ಯಾರ್ಥಿಗಳ ವಿರುದ್ಧ ನಗರ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.