ಗುಲ್ಬರ್ಗಾ

ಅಂದಾಜು ಪತ್ರಿಕೆ ಸಲ್ಲಿಸಿದ್ರೆ ರಾಷ್ಟ್ರೀಯ ಹೆದ್ದಾರಿ ಭಾಗ್ಯ

Published On :

ಗುಲ್ಬರ್ಗ:  ಸೊಲ್ಲಾಪುರ- ಗುಲ್ಬರ್ಗ ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಒಪ್ಪಿಗೆ ಸೂಚಿಸಿದ್ದು, ಸಮೀಕ್ಷೆ ಕೈಗೊಂಡು ಅಂದಾಜು ಪತ್ರಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ ಸಚಿವ ಸುಶೀಲಕುಮಾರ್ ಸಿಂಧೆ ಅವರೊಂದಿಗೆ ಚರ್ಚಿಸಿ ಒತ್ತಾಯಿಸಲಾಗುವುದು. ಈ ಹೆದ್ದಾರಿಯಿಂದ ಸೊಲ್ಲಾಪುರದಿಂದ- ಬೆಂಗಳೂರಿಗೆ ನೇರ ಸಂಪರ್ಕ ಕಲ್ಪಿಸಿದಂತಾಗುವುದು ಎಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ಹೈ-ಕ ಜಿಲ್ಲೆಗಳಿಗೆ ಮಂಜೂರಾಗುವ ಕಟ್ಟಡಗಳು, ಕಚೇರಿಗಳ ನಿರ್ಮಾಣಕ್ಕೆ ನಗರ ಪ್ರದೇಶಗಳಲ್ಲಿ ನಿವೇಶನಗಳು ಲಭ್ಯವಾಗದಂತಾಗಿದೆ. ಜಿಲ್ಲಾಧಿಕಾರಿಗಳು ಎಲ್ಲ ತಾಲೂಕು ಮಟ್ಟದ ಕೇಂದ್ರ ಸ್ಥಾನದ ಹತ್ತಿರದಲ್ಲಿ ಸುಮಾರು 50 ಎಕರೆ ಪ್ರದೇಶದಷ್ಟು ಭೂಮಿ ಗುರುತಿಸಿ ಭೂ ಬ್ಯಾಂಕ್ ನಿರ್ಮಿಸಲು ಭೂ ಸ್ವಾಧೀನಕ್ಕೆ ಕ್ರಮ ಜರುಗಿಸಬೇಕೆಂದು ತಿಳಿಸಿದರು.
119 ಕೋಟಿಯ ಯೋಜನೆ ಸಿದ್ಧ: ಎಂಎಸ್‌ಡಿಪಿ ಯೋಜನೆಯಡಿ ಚಿತ್ತಾಪುರ ವಿಭಾಗವನ್ನು ಆಯ್ಕೆ ಮಾಡಲಾಗಿದ್ದು, ಈ ವಿಭಾಗದಲ್ಲಿ ಆರೋಗ್ಯ, ಶಿಕ್ಷಣ, ಸ್ವಚ್ಛತೆ, ವೃತ್ತಿ ಕೌಶಲ್ಯ ಹಾಗೂ ಚರಂಡಿಗಳನ್ನು ನಿರ್ಮಿಸಲಾಗುವುದು. 2013- 14ನೇ ಸಾಲಿಗಾಗಿ ಜಿಲ್ಲೆಯ ಒಟ್ಟು 11 ಅಲ್ಪಸಂಖ್ಯಾತ ಕೇಂದ್ರಿತ ಪ್ರದೇಶಗಳಾದ ಚಿತ್ತಾಪುರ- 15 ಕೋಟಿ, ವಾಡಿ- 13 ಕೋಟಿ, ಶಹಾಬಾದ್- 10 ಕೋಟಿ, ಮಹಾನಗರ ಪಾಲಿಕೆ ಗುಲ್ಬರ್ಗ ಬ್ಲಾಕ್ 1- 9.86 ಕೋಟಿ, ಮಹಾನಗರ ಪಾಲಿಕೆ ಗುಲ್ಬರ್ಗ ಬ್ಲಾಕ್ 2- 10.49 ಕೋಟಿ, ಮಹಾನಗರ ಪಾಲಿಕೆ ಗುಲ್ಬರ್ಗ ಬ್ಲಾಕ್ 3- 9.65 ಕೋಟಿ, ಆಳಂದ ಟಿಎಂಸಿ- 11 ಕೋಟಿ ಹಾಗೂ ಅಫಜಲ್ಪುರ, ಚಿಂಚೋಳಿ, ಜೇವರ್ಗಿ ಮತ್ತು ಸೇಡಂ ಟಿಎಂಸಿಗಳಿಗೆ ತಲಾ 10 ಕೋಟಿ ಸೇರಿದಂತೆ ಒಟ್ಟು 119 ಕೋಟಿಯ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು. ಸರ್ಕಾರದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಮಂಡಿಸಿದಲ್ಲಿ ಸಂಬಂಧಿತ ಕೇಂದ್ರ ಸಚಿವರೊಂದಿಗೆ ಸಮಾಲೋಚಿಸಿ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದು ಸಚಿವರು ತಿಳಿಸಿದರು.
ಅನುದಾನ ವಾಪಸ್ಸಾಗಲು ಬಿಡಬೇಡಿ: ಸರ್ವಶಿಕ್ಷಣ ಅಭಿಯಾನದಡಿ ಜಿಲ್ಲೆಗೆ 947 ಹೆಚ್ಚುವರಿ ಕೊಠಡಿ ಮಂಜೂರಾಗಿದ್ದು, 373 ಕೊಠಡಿಗಳನ್ನು ನಿರ್ಮಸಲಾಗಿದೆ. 71 ಕೊಠಡಿಗಳಿಗೆ ಸ್ಥಳಾವಕಾಶ ಮತ್ತು ಎಸ್‌ಡಿಎಂಸಿ ಸಮಸ್ಯೆ ಇದ್ದ ಕಾರಣ ಕೈ ಬಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಜಿಲ್ಲೆಗೆ 7 ಆದರ್ಶ ಶಾಲೆಗಳು ಮಂಜೂರಾಗಿದ್ದು, ನಿವೇಶನದ ಸಮಸ್ಯೆಯಿರುವ ಚಿತ್ತಾಪುರ, ಗುಲ್ಬರ್ಗ ನಗರ ಪ್ರದೇಶದಲ್ಲಿ ನಿವೇಶನ ದೊರಕಿಸಿಕೊಳ್ಳುವಂತೆ ಸೂಚಿಸಿದರು.
ಜೆಸ್ಕಾಂ ಪ್ರಗತಿ- ಪ್ರತ್ಯೇಕ ಸಭೆ: ಜೆಸ್ಕಾಂನಿಂದ ನಿರಂತರ ಜ್ಯೋತಿ ಕಾರ್ಯಕ್ರಮ ಸಮರ್ಪಕ ಅನುಷ್ಠಾನವಾದಲ್ಲಿ ಗ್ರಾಮೀಣ ಭಾಗಕ್ಕೆ 24 ಗಂಟೆಗಳ ಸಿಂಗಲ್ ಫೇಸ್ ಹಾಗೂ ಪಂಪ್‌ಸೆಟ್‌ಗಳಿಗೆ 6 ಗಂಟೆ ಕಾಲ 3 ಫೇಸ್ ವಿದ್ಯುತ್ ನೀಡಲು ಅನುಕೂಲವಾಗುವುದು. ಆದರೆ ಎರಡು ವರ್ಷವಾದ್ರೂ ಪೂರ್ಣವಾಗುವ ಹಂತದಲ್ಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ರೇಲ್ವೆ ಸಚಿವರ ಗಮನಕ್ಕೆ ತಂದರು.
ಜೆಸ್ಕಾಂ ಪ್ರಗತಿ ಪರಿಶೀಲಿಸಲು ಪ್ರತ್ಯೇಕ ಸಭೆಯನ್ನು ಕರೆಯಲಾಗುವುದು. ಅದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಜೆಸ್ಕಾಂನ ಮುಖ್ಯ, ಕಾರ್ಯನಿರ್ವಾಹಕ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಸಭೆಯನ್ನು ಕರೆದು ನಿರಂತರ ಜ್ಯೋತಿ, ಪಂಪಸೆಟ್‌ಗಳಿಗೆ ವಿದ್ಯುತ್ ಸರಬರಾಜು, ಎಸ್ಸಿ- ಎಸ್ಟಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ, ಗಂಗಾಕಲ್ಯಾಣ ಯೋಜನೆ ವಿದ್ಯುತ್ ಸಂಪರ್ಕದ ಬಗ್ಗೆ ಗುರಿ, ಸಾಧನೆ ಹಾಗೂ ಗುರಿ ಸಾಧಿಸದಿದ್ದರೆ ಕಾರಣಗಳ ಬಗ್ಗೆ ಮಾಹಿತಿ ಪಡೆದು ಸಲ್ಲಿಸಬೇಕು ಸಚಿವ ಖರ್ಗೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.