ಬ್ರೌನ್ ಶುಗರ್: ಪೇದೆ ಸೇರಿ 8 ಸೆರೆ
ಗುಲ್ಬರ್ಗ: ಬ್ರೌನ್ ಶುಗರ್ ಮಾರಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಗರದ ಆಳಂದ ರಸ್ತೆಯ ಹೊರ ವಲಯದ ರಾಣೇಶಪೀರ್ ದರ್ಗಾದ ಬಳಿ ಭಾನುವಾರ ದಾಳಿ ನಡೆಸಿ 2900 ಗ್ರಾಂ ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ. ಈ ದಂಧೆಯಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾದಕ ವಸ್ತು ಮಾರುತ್ತಿದ್ದ ಡಿಆರ್ ಪೇದೆ, ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಎಂಟು ಯುವಕರನ್ನು ಬಂಧಿಸಿ ನಾಲ್ಕು ದ್ವಿಚಕ್ರ ವಾಹನಗಳು, ಏಳು ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಬೀದರನಲ್ಲಿ ಡಿಆರ್ ಪೇದೆಯಾಗಿರುವ ಗುಂಡಪ್ಪ ಯಲಗುರ್ತಿ, ವಿದ್ಯಾರ್ಥಿಗಳಾದ ಇರ್ಫಾನ್ ಉಸ್ಮಾನ್ ಪಟೇಲ್, ಗಣೇಶಕುಮಾರ್ ಹೊಸಮನಿ, ರಾಜಶೇಖರ ತಂದೆ ಸಿದ್ದಣ್ಣ ಕ್ಯಾಸನ್, ಶಿವಕುಮಾರ್ ಪಡಶೆಟ್ಟಿ, ಜಯತೀರ್ಥ ತಂದೆ ಮಲ್ಲಿಕಾರ್ಜುನ ಹುಡಗಿ, ಶ್ರೀನಿವಾಸ, ಮೆಹಬೂಬ್ ಖಾನಾಮಿಯಾ ಇನಾಮದಾರ ಮತ್ತು ರಾಚಯ್ಯ ತಂದೆ ಮೊಗಲಯ್ಯ ಗುತ್ತೇದಾರ ಬಂಧಿತ ಆರೋಪಿಗಳು. ಇವರೆಲ್ಲರೂ ಚಿತ್ತಾಪುರ, ಚಿಂಚೋಳಿ ಮತ್ತು ಬೀದರ್ ಜಿಲ್ಲೆಯವರಾಗಿದ್ದಾರೆ.
ಬ್ರೌನ್ ಶುಗರ್ ಮಾರಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಎಎಸ್ಪಿ ಕೆ. ಸಂತೋಷ್ ಬಾಬು ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಡಿ. ಜಿ. ರಾಜಣ್ಣ, ಪಿಎಸ್‌ಐಗಳಾದ ಹರೀಬಾ ಜಮಾದಾರ, ನಿಂಗಪ್ಪ ಶಿವೂರ, ಬಾಪುಗೌಡ ಪಾಟೀಲ್, ಗುಲ್ಬರ್ಗ ಗ್ರಾಮೀಣ, ಮಹಾಗಾಂವ ಠಾಣೆಯ ಸಿಬ್ಬಂದಿ ಭಾನುವಾರ ಮಧ್ಯಾಹ್ನ ದಾಳಿ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಕೈದಿ ಸಾವು
ಗುಲ್ಬರ್ಗ: ನಗರದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬಳು ಅನಾರೋಗ್ಯದಿಂದ ಭಾನುವಾರ ಸಂಜೆ ಮೃತಪಟ್ಟಿದ್ದಾಳೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಆಶಾಬೀ ತಂದೆ ಚಾಂದ್ ಮಹಿಬೂಬ ಸಾಬ್ ಮೃತಪಟ್ಟ ಕೈದಿ. ಈಕೆ ಒಂದು ವರ್ಷ ಶಿಕ್ಷೆ ಅನುಭವಿಸುತ್ತಿದ್ದಳು. ವಯೋವೃದ್ಧೆಯಾಗಿರುವುದರಿಂದ ಭಾನುವಾರ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆಂದು ಕಾರಾಗೃಹದ ಅಧೀಕ್ಷಕ ಎಂ.ಸೋಮಶೇಖರ ಫರತಹಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

