ಗುಲ್ಬರ್ಗಾ

ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಗುಲ್ಬರ್ಗ: ವಿ.ಬಾಲಸುಪ್ರಮಣ್ಯನ್ ಸಮಿತಿ ವರದಿಯನ್ನು ಒಪ್ಪಿಕೊಂಡು ರಾಜ್ಯ ಸರ್ಕಾರ ಕೂಡಲೇ ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಎಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಎಸ್ಸಿ, ಎಸ್ಟಿ, ಹಿಂದುಳಿದ ಜಾತಿಗಳು ಮತ್ತು ಭೂರಹಿತರು ರಾಜ್ಯಾದ್ಯಂತ ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ನಮೂನೆ 50, 53ರ ಪ್ರಕಾರ ಅರ್ಜಿ ಸಲ್ಲಿಸಿರುವ  ಭೂಮಿಯನ್ನು ಸಕ್ರಮಗೊಳಿಸಲು ತಕ್ಷಣ ಕ್ರಮ ಕೈಗೊಂಡು ಅವರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು. ದೊಡ್ಡ ಭೂಮಾಲೀಕರು, ರಿಯಲ್ ಎಸ್ಟೆಟ್ ಭೂ ಮಾಫಿಯಾಗಳು ರಾಜ್ಯಾದ್ಯಂತ ಅಕ್ರಮವಾಗಿ ಕಬಳಿಸಿರುವ ಭೂಮಿಯನ್ನು ಸರ್ಕಾರ ತಕ್ಷಣ ವಶಪಡಿಸಿಕೊಂಡು ಭೂರಹಿತ ಕುಟುಂಬಗಳಿಗೆ ಹಂಚಿಕೆ ಮಾಡಬೇಕು ಮಹಾದೇವ ಧನ್ನಿ, ಶಿವಲಿಂಗಪ್ಪ ಕಿನ್ನೂರ್, ಸೈಯ್ಯದ್ ಖುರ್ಷಿದ ಹುಸೇನ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆ.ಬಿ. ವಾಸು, ಎಂ.ಎಂ. ಖಾನ್, ಹಣಮಂತ ಬೋಧನಕರ್, ನಾಗೇಂದ್ರ ಯಳಸಂಗಿ, ಮಹಾದೇವಿ ಬೀಮಸೂರೆ, ಶ್ರೀದೇವಿ ನಿಂಬಾಳಕರ್, ಬಸವರಾಜ ಪ್ರಸಾದ, ಕಾಶಿನಾಥ ದಂಡಗುಲೆ ಇತರರು ಭಾಗವಹಿಸಿದ್ದರು.

ಕನಕದಾಸರ ಜಾತ್ಯತೀತ ತತ್ವಗಳ ಆಚರಣೆಗೆ ಕರೆ
ಆಳಂದ: ಶೋಷಿತ ವರ್ಗಗಳಿಗೆ ಸಮಾನತೆ ಬಯಸಿದ ಭಕ್ತ ಕನಕದಾಸರ ಜಾತ್ಯತೀತ ತತ್ವಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡು ಮುನ್ನಡೆಯಬೇಕೆಂದು ತಾಪಂ ಸದಸ್ಯ ಮಲ್ಲಿಕಾರ್ಜುನ ಮದಲಿ ಕರೆ ನೀಡಿದರು. ತಾಲೂಕಿನ ನರೋಣಾ ಗ್ರಾಮದಲ್ಲಿ ಬೀರಲಿಂಗೇಶ್ವರ ನವ ತರುಣ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಭಕ್ತ ಕನಕದಾಸರ ಜಯಂತ್ಯುತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶರಣರಂತೆ ಕನಕದಾಸರು ಶ್ರೇಷ್ಠ ದಾಸರೆನಿಸಿಕೊಂಡು ಸಮಾಜದ ಜಾತಿಯತೆ ಹಾಗೂ ಅಂಧಶ್ರದ್ಧೆಗಳನ್ನು ಹೊಗಲಾಡಿಸಲು ಶ್ರಮಿಸಿದವರು.  ಸಂಘಾಧ್ಯಕ್ಷ ಮಾಳಪ್ಪ ಅಮಗೊಂಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಸದಸ್ಯ ಸುನೀಲ್ ಕಲಶೆಟ್ಟಿ, ಕಾರ್ಯದರ್ಶಿ ಮಲಕಪ್ಪ ಭಂಕೂರ, ಮೈಲಾರಲಿಂಗ ಅಮಗೊಂಡ, ಮಾಳಪ್ಪ ಕ್ಯಾತನ, ನೀಲಕಂಠ ಭಂಕೂರ,  ಶ್ರೀಮಂತ ತಡಕಲ್, ಸಿದ್ದಪ್ಪ ಕ್ಯಾತನ ಸೇರಿದಂತೆ ಸಮಾಜದ ಇತರ ಗಣ್ಯರು ಪಾಲ್ಗೊಂಡಿದರು. ನಂತರ ದಣ್ಣೂರ ಮತ್ತು ನರೋಣಾ ಗ್ರಾಮಗಳ ಕನಕದಾಸರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

ಸಾರ್ವತ್ರಿಕ ರಜೆ ಘೋಷಣೆಗೆ ಟೋಕರೆ ಸಮಾಜ ಒತ್ತಾಯ
ಗುಲ್ಬರ್ಗ: ಟೋಕ್ರಿ, ಕೋಳಿ ಜನಾಂಗದ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಟೋಕ್ರಿ, ಕೋಲಿ (ಕಬ್ಬಲಿಗ) ಯುವ ಸಮಾಜದ ಮುಖಂಡರು ಗುಲ್ಬರ್ಗದಲ್ಲಿ ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿದರು. ಅಂಬಿಗರ ಚೌಡಯ್ಯ ಜಯಂತಿಗೆ ಜ.21ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು, ಸೇಡಂ ತಾಲೂಕಿನ ಯಾನಾಗುಂದಿ ಕ್ಷೇತ್ರಕ್ಕೆ ಅಗತ್ಯ 24 ಗಂಟೆ ಕಾಲ ಶುದ್ಧ ಕುಡಿವ ನೀರು ಕಲ್ಪಿಸಿ, ಹಾವೇರಿ ಜಿಲ್ಲೆಯ ಚೌಡಾದಾನಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನಪೀಠಕ್ಕೆ ಉಳಿದ 1 ಕೋಟಿ ಬಿಡುಗಡೆ ಮಾಡಬೇಕೆಂದು ಶರಣು ಎಂ.ಡೋಣಗಾಂವ, ನಾಗರಾಜ ಸಂಗಾವಿ, ರಮೇಶ ತಳವಾರ, ಮಲ್ಲು ಹರಕತ್ತಿ, ಗುರುರಾಜ ನಾಟಿಕಾರ್, ಕಾರ್ತಿಕ ಕಣಿ ಒತ್ತಾಯಿಸಿದರು. ಗುಲ್ಬರ್ಗದಲ್ಲಿ ಅಂಬಿಗರ ಚೌಡಯ್ಯ ಸ್ಮಾರಕ ಭವನ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.


'ಅನ್ನಭಾಗ್ಯ' ಅಕ್ಕಿ ಕಳವು ವಿಫಲಗೊಳಿಸಿದ ಪೊಲೀಸರು
ಜೇವರ್ಗಿ: ಬಡತನ ರೇಖೆಗಿಂತ ಕೆಳಗಿರುವ ಜನಾಂಗಕ್ಕೆ ಅನ್ನಭಾಗ್ಯ ಯೋಜನೆಗೂ ಕನ್ನ ಹಾಕಲು ಎಗ್ಗಿಲ್ಲದ ಪ್ರಯತ್ನ ಹಲವೆಡೆ ನಡೆಯುತ್ತಿದೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸರ್ಕಾರಿ ಸಾಮಥ್ಯದ ಅಕ್ಕಿಯನ್ನು ಪೊಲೀಸರು ತಮ್ಮ ಸುಪರ್ದಿಗೆ ಭಾನುವಾರ ತೆಗೆದುಕೊಂಡಿದ್ದಾರೆ. ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಪೊಲೀಸರು ಲಾರಿಯಲ್ಲಿ ತುಂಬಲಾಗಿದ್ದ 260 ಅಕ್ಕಿ ಚೀಲಗಳನ್ನು ವಶ ಪಡಿಸಿಕೊಂಡಿದ್ದಾರೆ. ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿರುವ ಅಮೃತಗೌಡ ಪಾಟೀಲ್ ಅಂಗಡಿ ಹತ್ತಿರ ಸಾಗಿಸುತ್ತಿದ್ದ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶಕ್ಕೆ ಸೇರಿದ ಲಾರಿಯೊಂದರಲ್ಲಿ ಈ ಅಕ್ರಮ ಅಕ್ಕಿ ಪತ್ತೆಯಾಗಿದೆ ಎನ್ನಲಾಗಿದೆ. ಎಸ್.ಪಿ. ಅಮಿತ್‌ಸಿಂಗ್, ಸಿಪಿಐ ಬಾಸು ಚವ್ಹಾಣ ಮಾರ್ಗದರ್ಶನದಲ್ಲಿ ಜೇವರ್ಗಿ ಪಿಎಸ್‌ಐ ಸುಧೀರ್ ಬೆಂಕಿ ದಾಳಿ ನಡೆಸಿದ್ದಾರೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ತನಿಖೆ ಮುಂದುವರಿದಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.