ಪ್ರೊಫೆಸರ್ ದಶರಥ ನಾಯಕ್ ಸಸ್ಪೆಂಡ್
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಡಿ.7
ಸಂಶೋಧನಾ ವಿದ್ಯಾರ್ಥಿನಿಗೆ ಕಿರುಕುಳ(ಹಣ ಪಡೆದದ್ದು ಹಾಗೂ ಅಶ್ಲೀಲ ಚಿತ್ರಗಳನ್ನು ತೋರಿಸಿ ಲೈಂಗಿಕವಾಗಿ ಪ್ರಚೋದಿಸುವುದು) ನೀಡಿರುವ ಆರೋಪ ಎದುರಿಸುತ್ತಿದ್ದ ಗುಲ್ಬರ್ಗ ವಿಶ್ವವಿದ್ಯಾಲಯ ಜ್ಞಾನಗಂಗೆ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ದಶರಥ ನಾಯಕ್ ಅವರು ಸೇವೆಯಿಂದ ಅಮಾನತುಗೊಂಡಿದ್ದಾರೆ.
ಶನಿವಾರ ದಿಢೀರ್ ಸಭೆ ಸೇರಿದ್ದ ವಿವಿ ನೀತಿನಿರೂಪಕ ಉನ್ನತಾಂಗ ಸಿಂಡಿಕೇಟ್ನಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಯ್ತು. ಇತ್ತ ಸಿಂಡಿಕೇಟ್ ನಿರ್ಣಯ ಕೈಗೊಳ್ಳುತ್ತಿದ್ದಂತೆಯೇ ಅತ್ತ ಕುಲಪತಿ ಡಾ. ಈ.ಟಿ. ಪುಟ್ಟಯ್ಯನವರು ದಶರಥ ನಾಯಕ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
'ಕನ್ನಡಪ್ರಭ' ಬಯಲಿಗೆಳೆದಿತ್ತು: ಅರ್ಥಶಾಸ್ತ್ರ ವಿಭಾಗದಲ್ಲಿನ ಈ ಅನರ್ಥವನ್ನು ಮೊಟ್ಟಮೊದಲಿಗೆ 'ಕನ್ನಡಪ್ರಭ' ತನ್ನ ಡಿ.5ರ ಸಂಚಿಕೆಯಲ್ಲಿ ವರದಿ ಮಾಡಿ ಬಯಲಿಗೆಳೆದಿತ್ತು. 'ಗೈಡ್ ಕಂಪ್ಯೂಟರ್ನಲ್ಲಿ ಅಶ್ಲೀಲ ಚಿತ್ರ, ಪೊಲೀಸರಿಗೆ ಸಂಶೋಧನಾ ವಿದ್ಯಾರ್ಥಿನಿ ದೂರು' ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ವರದಿ ಜ್ಞಾನಗಂಗೆ ಅಂಗಳವಷ್ಟೇ ಅಲ್ಲ, ಶಿಕ್ಷಣ ಪ್ರೇಮಿಗಳ ವಲಯದಲ್ಲೆಲ್ಲಾ ಸಂಚಲನ ಉಂಟು ಮಾಡಿತ್ತು.
ಈ ಸುದ್ದಿ ಪ್ರಕಟವಾದ ದಿನವೇ ವಿದೇಶದಿಂದ ಗುಲ್ಬರ್ಗಕ್ಕೆ ಬಂದಿಳಿದ ಕುಲಪತಿ ಡಾ. ಪುಟ್ಟಯ್ಯನವರು ತಕ್ಷಣ ಮಧ್ಯಸ್ಥಿಕೆ ವಹಿಸಿದ್ದಲ್ಲದೆ ದೂರು ನೀಡಿದ ಸಂಶೋಧಕಿಯ ಬೇಡಿಕೆಯಂತೆ ತಕ್ಷಣ ಪಿಎಚ್ಡಿ ಮಾರ್ಗದರ್ಶಕರನ್ನು ಬದಲಿಸಿ ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.
ವಿದ್ಯಾರ್ಥಿಗಳ ಪ್ರತಿಭಟನೆ ಬಿಸಿ: ಗೈಡ್ಶಿಪ್ ಬದಲಾವಣೆ ನಂತರ ಪ್ರಕರಣ ತಣ್ಣಗಾಗುವ ಲಕ್ಷಣಗಳು ಕಂಡಿದ್ದವು. ಆದರೆ ಶನಿವಾರ ಜ್ಞಾನಗಂಗೆಯಲ್ಲಿರುವ 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಪಿಎಚ್ಡಿ ಸಂಶೋಧನೆಯಲ್ಲಿರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರೆಲ್ಲರೂ ಒಂದಾಗಿ ಪ್ರತಿಭಟನೆ ನಡೆಸಿದರಲ್ಲದೆ ಕಾರ್ಯಸೌಧಕ್ಕೂ ಮುತ್ತಿಗೆ ಹಾಕಿ ಕಿರುಕುಳ ನೀಡಿರುವ ಆರೋಪ ಹೊತ್ತ ಪ್ರೊಫೆಸರ್ ದಶರಥ ನಾಯಕ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ವಿದ್ಯಾರ್ಥಿನಿಯರ ಭಾರಿ ಪ್ರತಿಭಟನೆ, ವಿವಿ ಸಿಂಡಿಕೇಟ್ ವಿಶೇಷ ಸಭೆ ಎಲ್ಲವೂ ಶನಿವಾರವೇ ನಡೆದು ಕಿರುಕುಳದ ಆರೋಪ ಹೊತ್ತಿರುವ ಪ್ರೊಫೆಸರ್ ನಾಯಕ್ ಅವರ ಅಮಾನತಿನೊಂದಿಗೆ ಅರ್ಥಶಾಸ್ತ್ರದ ಅನರ್ಥ ಪ್ರಕರಣ ವಿವಿಯನ್ನು ಮತ್ತೆ ಸುದ್ದಿಗೆ ಗ್ರಾಸ ಮಾಡಿದೆ.
ಹಣದ ಅವ್ಯವಹಾರ, ಅಶ್ಲೀಲ ಚಿತ್ರಗಳ ದರ್ಶನ
ಪಿಎಚ್ಡಿ ಗೈಡ್ ಆಗಿದ್ದ ಪ್ರೊ. ದಶರಥ ನಾಯಕ್ ಸ್ಟೈಫಂಡ್(ಉದ್ಯೋಗ ಭತ್ಯೆ) ಕೊಡಿಸುವ ನೆಪವೊಡ್ಡಿ 1 ಲಕ್ಷ ಹಣವನ್ನು ಸದರಿ ವಿದ್ಯಾರ್ಥಿನಿಯಿಂದ ಪಡೆದುಕೊಂಡಿದ್ದರು ಎಂದು ಪೊಲೀಸ್ ವಿಚಾರಣೆಯಿಂದ ಬಯಲಾಗಿದೆ. ಇದಲ್ಲದೆ ತಮ್ಮ ಕಂಪ್ಯೂಟರ್ನಲ್ಲಿ ಅಶ್ಲೀಲ ಚಿತ್ರಗಳ ವಿಡಿಯೋಗಳನ್ನು ಡೌನ್ಲೋಡ್ ಮಾಡಿ ಅವುಗಳನ್ನು ವಿದ್ಯಾರ್ಥಿನಿ ಸುಲಭದಲ್ಲಿ ನೋಡಿ ಲೈಂಗಿಕವಾಗಿ ಪ್ರಚೋದನೆಯಾಗುವಂತೆಯೂ ಸಂಚು ಮಾಡುತ್ತಿದ್ದರು ಎಂಬುದನ್ನು ಪೊಲೀಸ್ ವಿಚಾರಣೆ ಖಚಿತಪಡಿಸಿದೆ.
ಕಳೆದ 2 ವರ್ಷಗಳಿಂದ ಸದರಿ ವಿದ್ಯಾರ್ಥಿನಿ ಪಿಎಚ್ಡಿ ಮಾಡುತ್ತಿದ್ದಳು. ಇಂತಹ ಕಿರುಕುಳ ಹೆಚ್ಚುತ್ತ ಹೋದಂತೆ ಬೇಸತ್ತು ಪೊಲೀಸ್ ಮೊರೆ ಹೋಗಿದ್ದಾಳೆ ಎಂದು ಹೇಳಲಾಗುತ್ತಿದೆ.
ನಾಳೆಯೊಳಗೆ ಪ್ರೊಫೆಸರ್ಗೆ ಬಂಧನಕ್ಕೆ ಕ್ರಮ: ಡಿವೈಎಸ್ಪಿ
ಗುಲ್ಬರ್ಗ: ಸಂಶೋಧನಾ ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಗುಲ್ಬರ್ಗ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ದಶರಥ ನಾಯಕ ಅವರನ್ನು ವಿಚಾರಣೆ ನಡೆಸಲು ಮುಂದಾಗಿರುವ ಇಲ್ಲಿನ ಪೊಲೀಸರು ಅವರ ಬಂಧನಕ್ಕೂ ಜಾಲ ಬೀಸಿದ್ದಾರೆ.
ಪ್ರೊಫೆಸರ್ ವಿರುದ್ಧ ದೂರು ಸಲ್ಲಿಸಿದ್ದ ವಿದ್ಯಾರ್ಥಿನಿ ವಿಚಾರಣೆಗೂ ಮುನ್ನ ಪ್ರಕರಣ ಮುಂದುವರಿಸಬೇಕೇ, ಬೇಡವೇ ಎಂದು ನಿರ್ಧರಿಸಲು ಮೂರು ದಿನಗಳ ಕಾಲಾವಕಾಶ ಕೋರಿದ್ದಳು. ಸೋಮವಾರ ಮರಳಿ ಸಂಪರ್ಕಿಸುವುದಾಗಿ ಹೇಳಿದವಳು ಬಂದಿಲ್ಲ. ಏತನ್ಮಧ್ಯೆ ಪ್ರಕರಣದ ವಿಚಾರ ಪತ್ರಿಕೆಗಳಲ್ಲಿ ವರದಿಯಾಗಿದೆ. ವಿಶ್ವವಿದ್ಯಾಲಯವೂ ಸದರಿ ಪ್ರೊಫೆಸರ್ ಅವರನ್ನು ಸೇವೆಯಿಂದಲೇ ಅಮಾನತು ಮಾಡಿದೆ.
ವಶಕ್ಕೆ ಪಡೆಯುತ್ತೇವೆ: ಇವೆಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಿರುಕುಳ ಆರೋಪ ಹೊತ್ತಿರುವ ಪ್ರೊಫೆಸರ್ ವಿರುದ್ಧ ವಿಚಾರಣೆ ಶುರು ಮಾಡುತ್ತೇವೆ, ದಶರಥ ನಾಯಕ ಸದ್ಯ ತಲೆಮರೆಸಿಕೊಂಡಿದ್ದಾರೆ, ಅವರು ಎಲ್ಲಿದ್ದಾರೆ ಎಂಬುದರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಇಂದೋ, ನಾಳೆಯೋ ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಗುಲ್ಬರ್ಗ ಗ್ರಾಮೀಣ ಡಿವೈಎಸ್ಪಿ, ಪ್ರೊಬೇಷ್ನರಿ ಐಪಿಎಸ್ ಅಧಿಕಾರಿ ಸಂತೋಷ ಬಾಬು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಪಿಎಚ್ಡಿ ವಿದ್ಯಾರ್ಥಿನಿ ಕಳೆದ ನಾಲ್ಕು ದಿನಗಳ ಹಿಂದೆ ತನಗಾಗುತ್ತಿರುವ ಕಿಕುರುಳ ವಿವರಿಸಿ ನ್ಯಾಯ ಕೋರಿ ವಿವಿ ಠಾಣೆಗೆ ದೂರು ಸಲ್ಲಿಸಿದ್ದಳು. ಸದರಿ ಪ್ರಕರಣದ ಬಗ್ಗೆ ವಿವಿ ಆಡಳಿತದ ಗಮನಕ್ಕೆ ತಂದಿದ್ದ ಡಿವೈಎಸ್ಪಿ ಸಂತೋಷ ಬಾಬು ಪ್ರಕರಣದಲ್ಲಿ ಆರೋಪ ಹೊತ್ತಿರುವ ಪ್ರೊಫೆಸರ್ ವಿರುದ್ಧ ವಿಚಾರಣೆ ನಡೆಸುವ ಸೂಚನೆಯನ್ನೂ ನೀಡಿದ್ದರು.
ವಿದ್ಯಾರ್ಥಿನಿಗೆ ರಕ್ಷಣೆ ಕೊಡಿ: ಎಬಿವಿಪಿ
ಗುಲ್ಬರ್ಗ: ಗುಲ್ಬರ್ಗ ವಿವಿ ಅರ್ಥಶಾಸ್ತ್ರ ವಿಭಾಗದಲ್ಲಿ ಪಿಎಚ್ಡಿ ಮಾಡುತ್ತಿರುವ ವಿದ್ಯಾರ್ಥಿನಿ ಮಾರ್ಗದರ್ಶಕ ದಶರಥ ನಾಯಕ್ ತಮಗೆ ನೀಡುತ್ತಿದ್ದ ಕಿರುಕುಳವನ್ನು ಬಯಲಿಗೆ ಎಳೆದ ಕಾರಣ ಅವಳಿಗೆ ಗೈಡ್ ಬೆಂಬಲಿಗರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ದೂರಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಕ್ಷಣ ಸಂಶೋಧನಾ ವಿದ್ಯಾರ್ಥಿನಿಗೆ ರಕ್ಷಣೆ ಕೊಡುವಂತೆ ಆಗ್ರಹಿಸಿದ್ದಾರೆ. ಕಿರುಕುಳ ಆರೋಪ ಎದುರಿಸುತ್ತಿರುವ ದಶರಥ ನಾಯಕರನ್ನು ಸೇವೆಯಿಂದ ಅಮಾನತು ಮಾಡಿರುವ ಕುಲಪತಿ ಡಾ. ಪುಟ್ಟಯ್ಯನವರ ಹಾಗೂ ಸಿಂಡಿಕೇಟ್ ಕ್ರಮವನ್ನು ಸ್ವಾಗತಿಸಿರುವ ಎಬಿವಿಪಿ ವಿದ್ಯಾರ್ಥಿನಿಗೆ ಸೂಕ್ತ ರಕ್ಷಣೆ ನೀಡುವ ಹೊಣೆ ಗುಲ್ಬರ್ಗ ವಿವಿಗೆ ಸೇರಿದ್ದು ಎಂದು ಹೇಳಿದೆ. ಕುಲಪತಿಗಳಿಗೆ ಎಬಿವಿಪಿ ನಗರ ಪ್ರಮುಖರಾದ ಅರುಣ ಪಾಟೀಲ್, ಭಾಗಣ್ಣ, ಆನಂದ ಕಪನೂರ್, ವಿದ್ಯಾನಂದ, ರಮೇಶ ಸರಡಗಿ, ಸಚಿನ್, ಸಂತೋಷ ಪತ್ರ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

