ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಟಕ್ಕೆ ಮುಂದಾಗಿ
ಕ.ಪ್ರ. ವಾರ್ತೆ ಯಾದಗಿರಿ ಡಿ.18
ಸಮಾಜದ ಪ್ರತಿ ವ್ಯಕ್ತಿಯೂ ತನ್ನ ಹಕ್ಕುಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದುವ ಜೊತೆಗೆ ಪ್ರತಿಯೊಬ್ಬರ ಹಕ್ಕುಗಳಿಗೆ ಚ್ಯುತಿ ಬರದಂತೆ ನಡೆದುಕೊಳ್ಳುವುದು ಅವಶ್ಯಕ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿದ್ಯಾವತಿ ಎಸ್. ಅಕ್ಕಿಯವರು ಹೇಳಿದ್ದಾರೆ.
ಹಕ್ಕುಗಳಿಗೆ ಚ್ಯುತಿಯಾಗದಿರಲಿ: ನಗರದ ಜಿಪಂ ಸಭಾಂಗಣದಲ್ಲಿಂದು ಮಾನವ ಹಕ್ಕುಗಳ ದಿನಾಚರಣೆ ಉದ್ಫಾಟಿಸಿ, ಭಾರತದ ಸಂವಿಧಾನ ಎಲ್ಲರೂ ಸಮಾನತೆಯಿಂದ ಸಮಾಜದಲ್ಲಿ ಬದುಕುವ ಕುರಿತು ಹಲವು ನಿರ್ದೇಶನಗಳನ್ನು ನೀಡಿದೆ. ಕಾರಣ ಪ್ರತಿಯೊಬ್ಬರು ಸಮಾಜದಲ್ಲಿ ಸಂತೋಷದಿಂದ, ಘನತೆಯಿಂದ, ಆತ್ಮಗೌರವದಿಂದ ಹಾಗೂ ಬೇರೊಬ್ಬರ ಹಕ್ಕುಗಳಿಗೆ ಚ್ಯುತಿಯಾಗದಂತೆ ಎಚ್ಚರವಹಿಸಿ ಬದುಕುವ ಅವಶ್ಯಕತೆ ಇದೆ ಎಂದರು.
ಸಮಾಜದಲ್ಲಿಂದು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಡುವ ಅವಶ್ಯಕತೆ ಇದೆ. ಮಹಿಳೆಯರು, ಅಸಹಾಯಕರು, ದಲಿತರು, ಮಕ್ಕಳು ದೌರ್ಜನ್ಯಕ್ಕೆ ಒಳಗಾದಾಗ, ಅವರ ಹಕ್ಕುಗಳ ಸಂರಕ್ಷಣೆಗೆ ಹೋರಾಡುವ ಅವಶ್ಯಕತೆ ಇದೆ. ನೊಂದವರು ಅಸಹಾಯಕರಾದಾಗ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದು. ಅದರಂತೆ ಕೆಲವೊಮ್ಮೆ ಸ್ವಯಂ ಪ್ರೇರಣೆಯಿಂದ ಆಯೋಗವು ದೂರನ್ನು ದಾಖಲಿಸಿಕೊಂಡು ಸರ್ಕಾರದ ಮೂಲಕ ನ್ಯಾಯ ಒದಗಿಸಲು ಪ್ರಯತ್ನಿಸುತ್ತದೆ. ಕೆಲವೊಮ್ಮೆ ಇಂತಹ ಹೋರಾಟದ ಸಂದರ್ಭದಲ್ಲಿ ನ್ಯಾಯ ದೊರೆಯಲು ಸಹ ತೊಂದರೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರೇತರ ಸಂಸ್ಥೆಗಳು ಅವರಿಗೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದರು.
ಶೋಷಣೆ ವಿರುದ್ಧ ದನಿ: ಸಮಾರಂಭದಲ್ಲಿ ಉಪನ್ಯಾಸ ನೀಡಿದ ರಾಜ್ಯಶಾಸ್ತ್ರ ಸರ್ಕಾರಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಎಸ್. ದೇವಿಂದ್ರಪ್ಪ ಹಳಿಮನಿ, ಸಮಾಜದಲ್ಲಿ ಪ್ರತಿಯೊಬ್ಬರೂ ಸ್ವತಂತ್ರವಾಗಿ, ಸಮಾನತೆಯಿಂದ ಬದುಕುವ ಹಕ್ಕನ್ನು ಪಡೆದಿದ್ದಾರೆ. ಕಾರಣ ಸಮಾಜದಲ್ಲಿ ನಡೆಯುವ ಎಲ್ಲ ತರಹದ ಶೋಷಣೆ ವಿರುದ್ಧ ಧ್ವನಿ ಎತ್ತುವ ಅವಶ್ಯಕತೆ ಇದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ಸಮಾಜದಲ್ಲಿಂದು ಮಾನವನು ಮಾನವೀಯತೆಯಿಂದ ಬದುಕದೆ, ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿದ್ದಾನೆ. ಶೋಷಣೆ, ಅನ್ಯಾಯ, ಅತ್ಯಾಚಾರ ಮತ್ತು ದೌರ್ಜನ್ಯದಲ್ಲಿ ತೊಡಗಿರುವುದು ವಿಷಾದಕರ. ಎಲ್ಲರೂ ಇಂದು ಸಮಾಜದಲ್ಲಿ ಗೌರವ, ಘನತೆಯಿಂದ ಬದುಕುವ ಜೊತೆಗೆ ಪ್ರತಿಯೊಬ್ಬರ ಹಕ್ಕುಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡು ಬದುಕುವುದು ಅವಶ್ಯಕ ಎಂದು ಹೇಳಿದರು.
ಸಮಾರಂಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಮಹಿಳಾ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಸಂಗೀತಾ ಅಶೋಕ ಹಪ್ಪಳ ಉಪಸ್ಥಿತರಿದ್ದರು. ನಾಗರತ್ನ ಅನಪುರ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

