ಗುಲ್ಬರ್ಗಾ

ಸಿಮೆಂಟ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಬೇಡಿಕೆ; ಇಂದು ಬೆಂಗಳೂರಲ್ಲಿ ಮಹತ್ವದ ಸಭೆ

Published On :

ಕ.ಪ್ರ. ವಾರ್ತೆ  ಗುಲ್ಬರ್ಗ  ಡಿ.22
ಇಲ್ಲಿನ ರಾಜಶ್ರೀ, ವಾಸವದತ್ತಾ ಸಿಮೆಂಟ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸೇವಾ ಭದ್ರತೆ, ಸಿಮೆಂಟ್ ವೇಜ್ ಬೋರ್ಡ್ ವೇತನದ ಬೇಡಿಕೆಗಳ ವಿಚಾರವಾಗಿ ಚರ್ಚಿಸಲು ಡಿ.23ರಂದು ಬೆಂಗಳೂರಲ್ಲಿರುವ ಕೇಂದ್ರ ಸರ್ಕಾರದ ಉಪ ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಹಾಗೂ ಕಾರ್ಮಿಕ ಹೋರಾಟಗಾರ ಚಂದ್ರಶೇಖರ ಹಿರೇಮಠ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಸಂಗತಿ ತಿಳಿಸಿರುವ ಅವರು, ಭಾರತ ಸರ್ಕಾರದ ಮುಖ್ಯ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಸಿಮೆಂಟ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ನಡೆದಂತಹ ಒಪ್ಪಂದದಲ್ಲಿ ಸಿಮೆಂಟ್ ವೇಜ್ ಬೋರ್ಡ್ ಅನುಸಾರ ವೇತನ ನೀಡುವ ಒಪ್ಪಂದವಾದರೂ ಇಂದಿಗೂ ಅದು ಜಾರಿಗೊಂಡಿಲ್ಲ. ಈ ವಿಚಾರದಲ್ಲಿ ಕಂಪನಿಗಳು ಸುಳ್ಳು ಹೇಳುತ್ತ ಜಾರಿಕೊಳ್ಳುತ್ತಿವೆ ಎಂದು ಹಿರೇಮಠ ದೂರಿದರು.
ಬಳ್ಳಾರಿಯ ಪ್ರಾದೇಶಿಕ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿಯೂ ಸಭೆ ನಡೆದು ಚರ್ಚೆಯಾಗಿದೆ. ಅಲ್ಲಿಯೂ ಪರಿಹಾರ ದೊರಕಿಲ್ಲ. ಇದೀಗ ಬೆಂಗಳೂರಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಏನೆಲ್ಲಾ ಚರ್ಚೆಗಳು ನಡೆಯುತ್ತವೆಯೋ ನೋಡುತ್ತೇವೆ. ಬೇಡಿಕೆ ಈಡೇರದೆ ಹೋದಲ್ಲಿ ಹೋರಾಟವನ್ನು ದೆಹಲಿಗೆ ಕೊಂಡೊಯ್ಯುತ್ತೇವೆ. ಕಾರ್ಮಿಕರ ಶೋಷಣೆ ನಿಲ್ಲುವವರೆಗೂ ಹಾಗೂ ಸಿಮೆಂಟ್ ವೇಜ್ ಬೋರ್ಡ್ ನಿಗದಿಪಡಿಸುವ ವೇತನ ಕಾರ್ಮಿಕರಿಗೆ ದೊರಕುವಂತೆ ಅಗತ್ಯ ಕ್ರಮಗಳನ್ನು ಜರುಗುವವರೆಗೂ ಹೋರಾಟ ನಿಲ್ಲದು ಎಂದು ಹಿರೇಮಠ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಲ್ಲಿ ಡಿ.23ರಂದು ನಡೆಯುವ ಉಪ ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯ ಸಭೆಯಲ್ಲಿ ಕಾರ್ಮಿಕ ಹೋರಾಟಗಾರ ಪ್ರತಿನಿಧಿಗಳು, ಸಿಮೆಂಟ್ ಕಂಪನಿಗಳ ಪ್ರತಿನಿಧಿಗಳನ್ನು ಸಭೆಗೆ ಕರೆಯಲಾಗುತ್ತಿದೆ. ಈ ಸಭೆ ಗುತ್ತಿಗೆ ಕಾರ್ಮಿಕರ ಬೇಡಿಕೆಗಳ ಈಡೇರಿಕೆ ವಿಚಾರದಲ್ಲಿ ಮಹತ್ವದ್ದು ಎಂದು ಹೇಳಲಾಗುತ್ತಿದೆ. ಈ ಸಭೆಯ ಫಲಿತಾಂಶ ಏನಾಗುವುದೋ ಎಂಬುದು ಕಾರ್ಮಿಕರು ಕಾದು ನೋಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.