ಗುಲ್ಬರ್ಗಾ

ಖಟ್ರಾ ರಸ್ತಾ ಕಾಯ್, ಅಫಜಲ್ಪುರ ಆಲಾ ಬಗಾ..

Published On :

ಕ.ಪ್ರ.ವಾರ್ತೆ ,  ಗುಲ್ಬರ್ಗ ,  ಡಿ.27
ನೋಟ- 1
ಗುಲ್ಬರ್ಗದಿಂದ 55 ಕಿಮೀ ದೂರದ ಅಫಜಲ್ಪುರ ತಾಲೂಕು ಕೇಂದ್ರಕ್ಕೆ ತೆರಳಲು ಕನಿಷ್ಠ 2 ಗಂಟೆ ಬೇಕು. ಹದಗೆಟ್ಟ ರಸ್ತೆಗೆ ಹೆಸರಾಗಿರುವ ಈ ತಾಲೂಕಿಗೆ ಯಾರೂ ಬರೋದಿಲ್ಲ. ಹೀಗಾಗಿ ಇಲ್ಲಿನ ಪ್ರಗತಿ- ವಿಗತಿಗಳ ವಿಚಾರ ಪರಿಶೀಲನೆಗೊಳಪಡೋದೇ ಇಲ್ಲ. ಜಿಲ್ಲಾಧಿಕಾರಿ, ಜಿಪಂ ಸಿಇಒ ಆದಿಯಾಗಿ ಜಿಲ್ಲಾಡಳಿತದ ಅಧಿಕಾರಿಗಳೇ ಈ ದಾರಿಗೆ ಸುಳಿಯೋದಿಲ್ಲ ಎಂದ ಮೇಲೆ ತಾಲೂಕಿನ ಹದಗೆಟ್ಟಂತಹ ರಸ್ತೆ ಅದೆಷ್ಟು ಕುಖ್ಯಾತಿ ಪಡೆದಿರಬೇಕು ಎಂಬುದನ್ನು ನೀವೇ ಊಹಿಸಿಕೊಳ್ಳಿ.
ನೋಟ- 2
ಹೋಬಳಿ, ಹಳ್ಳಿ ಆಸ್ಪತ್ರೆ ಬಿಡಿ, ತಾಲೂಕು ಕೇಂದ್ರ ಅಫಜಲ್ಪುರದ 100 ಹಾಸಿಗೆ ಆಸ್ಪತ್ರೆಗೆ 12 ಜನ ವೈದ್ಯರಿರಬೇಕು, ಸದ್ಯ ಇರೋದು ಇಬ್ಬರು ಮಾತ್ರ. ರೋಗಿಗಳ ಪಾಡು ದೇವರೇ ಬಲ್ಲ. ಆರೋಗ್ಯ ತಪಾಸಣೆಗೆ ಪಕ್ಕದ ಅಕ್ಕಲಕೋಟೆ, ಸೊಲ್ಲಾಪುರಕ್ಕೆ ಹೋಗದೆ ಗತಿಯಿಲ್ಲ. ಮಣ್ಣೂರು, ಮಾಶಾಳ, ಕರ್ಜಗಿ, ಚೌಡಾಪುರ, ಆತನೂರಿನಂತಹ ದೊಡ್ಡ ಹಳ್ಳಿಗಳಲ್ಲಿರುವ ಆಸ್ಪತ್ರೆಗಳಲ್ಲಂತೂ ವಾರಕ್ಕೋ, 15 ದಿನಕ್ಕೋ ವೈದ್ಯರು ಬಂದು ಹೋಗುತ್ತಾರೆ. ಚಿಕಿತ್ಸೆ ಪಡೆಯಲು ವಾರ, 2 ವಾರ ಕಾಯಲೇಬೇಕು.
ನೋಟ- 3
ಪಟ್ಟಣದ ಪಕ್ಕದಲ್ಲೇ ಭೀಮಾ ನದಿ, ನಾಲ್ಕಾರು ಬಾಂದಾರುಗಳೂ ಈ ನದಿಗುಂಟ ಇದ್ದರೂ ತಾಲೂಕಿನ 100 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನಿತ್ಯ ಕುಡಿಯುವ ನೀರಿನ ಬವಣೆ. ಕೊಡ ಹಿಡಿದು ಅಂಡಲೆಯುವುದೇ ಇಲ್ಲಿನ ಮಂದಿ ಕಾಯಕ. ಚಳಿ- ಮಳೆ- ಬಿಸಿಲು ಎನ್ನದೆ ವರ್ಷದ ಎಲ್ಲ ಮೂರೂ ಕಾಲದಲ್ಲೂ ಕೊಡ ನೀರಿಗೂ ಪರದಾಡುವುದು ನಮ್ಮ ಹಣೆಬರಹ ಎಂದು ಅಫಜಲ್ಪುರದವರು ಗೋಳಾಡುತ್ತಲೇ ದಿನಗಳೆಯುತ್ತಾರೆ. ಆಡಳಿತ ವರ್ಗದ ಮೇಲೆ ಹಿಡಿಶಾಪ ಹಾಕುತ್ತಾರೆ.
ನೋಟ- 4
25ಕ್ಕೂ ಹೆಚ್ಚು ದೊಡ್ಡ ಹಳ್ಳಿಗಳು ಇಂದಿಗೂ ಬಸ್ಸು ಕಂಡಿಲ್ಲ. ಇದಕ್ಕೆ ಕಾರಣ ಈಶಾನ್ಯ ಸಾರಿಗೆ ಬಳಿ ಬಸ್ಸುಗಳ ಕೊರತೆ ಅಂತೇನಿಲ್ಲ, ಈ ಊರುಗಳಿಗೆ ಸಂಪರ್ಕ ರಸ್ತೆಗಳೇ ಇಲ್ಲ. ಎತ್ತಿನ ಗಾಡಿ ಓಡಲೂ ಕಷ್ಟ ಎನ್ನುವ ದಾರಿ ಇಲ್ಲಿರುವಾಗ ಬಸ್ಸು ಊರುಗಳಿಗೆ ಬರುವುದು ಹೇಗೆ ಸ್ವಾಮಿ? ಈ ಊರಿನವರು ಇಂದಿಗೂ ಸಂಚಾರಕ್ಕೆ ಎತ್ತಿನ ಗಾಡಿಯನ್ನೋ, ಬಸ್ಸು, ಟಂಟಂ, ಗೂಡ್ಸ್ ಕ್ಯಾರಿಯರ್, ಲಾರಿ, ಟ್ರ್ಯಾಕ್ಟರ್‌ನಂತಹ ಅಪಾಯಕಾರಿ ಸಾಗಾಣಿಕಾ ವಾಹನಗಳನ್ನೇ ಅವಲಂಬಿಸಿದ್ದು ಅಫಜಲ್ಪುರ ಅಸೆಂಬ್ಲಿಯ ದುರಂತವಲ್ಲದೆ ಮತ್ತೇನು?
ಶಾಸಕರ ಹೇಳಿಕೆಗೆ ಕಂಗಾಲು
ಅಫಜಲ್ಪುರ ಕ್ಷೇತ್ರ, ಅಲ್ಲಿನ ಜನತೆ ನಾನಾ ಸಮಸ್ಯೆಗಳಲ್ಲಿ ಮುಳುಗೇಳುತ್ತಿರುವಾಗ ಸದನದಲ್ಲಿ ಈ ಕ್ಷೇತ್ರ ಪ್ರತಿನಿಧಿಸಿರುವ ಶಾಸಕ ಮಾಲಿಕಯ್ಯಾ ಗುತ್ತೇದಾರ್ ದೂರದ ಬೆಂಗಳೂರಲ್ಲಿ ನಮ್ಕಡೆ(ಕ್ಷೇತ್ರದಲ್ಲೆಲ್ಲಾ) ಎಲ್ಲಾ ಆರಾಮಾಗಿದೆ, ಜನರೂ ಆರಾಮಾಗಿದ್ದಾರೆ, ವಿದೇಶಕ್ಕೆ ಅಧ್ಯಯನ ಎಂದು ಹೋದ್ರೆ ತಪ್ಪೇನು ಎಂದು ಮಾದ್ಯಮದವರಿಗೇ ಪಾಟೀ ಸವಾಲು ಮಾಡಿದ್ದನ್ನು ಪತ್ರಿಕೆಗಳಲ್ಲಿ ಓದಿ, ಟೀವಿಗಳಲ್ಲಿ ಕಣ್ಣಾರೆ ನೋಡಿದ್ದಾರೆ. ಅವರಿಗೆ ಮತ ಹಾಕಿ ಸೌಲಭ್ಯಗಳ ಕೊರತೆಯನ್ನೇ ಹಾಸಿ- ಹೊದ್ದು ಮಲಗಿರುವ ಕ್ಷೇತ್ರದ ಜನತೆ ಅಯ್ಯೋ.. ಶಿವನೇ, ಎಂಥಾ ಸುಳ್ಳು ಹೇಳುತ್ತಿದ್ದಾರೆ ನಮ್ಮ ನಾಯಕರು.. ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ತಮ್ಮ ರಾಜಕೀಯದ ಗುರಿ ಎಂದು ಭೀಮಾ ಏತ ನೀರಾವರಿ ಯೋಜನೆಯ ಬಗ್ಗೆಯೇ ಅವಕಾಶ ಸಿಕ್ಕಾಗಲೆಲ್ಲಾ ಹೇಳುತ್ತ ತಾಲೂಕಿನಲ್ಲಿ ಹಸಿರುಕ್ರಾಂತಿಯಾಗಿದೆ ಎನ್ನುತ್ತಿರುವ ತಮ್ಮ ಶಾಸಕರಿಗೆ ಹದಗೆಟ್ಟಿರುವ ರಸ್ತೆ, ಹನಿ ನೀರಿಗೂ ಬಾಯಿ ಬಿಡುತ್ತಿರುವ ಕ್ಷೇತ್ರದ ಜನತೆ, ಅಷ್ಟೇ ಯಾಕೆ, ಬಸ್ಸುಗಳನ್ನು ಕಾಣದೆ ಕೈಯಲ್ಲೇ ಜೀವ ಹಿಡಿದವರಂತೆ ಟಂಟಂ, ಗೂಡ್ಸ್, ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಸಂಚರಿಸುತ್ತಿರುವ ಬಡಪಾಯಿಗಳು ಅದ್ಯಾಕೆ ಕಾಣುತ್ತಿಲ್ಲವೋ.. ಎಂದು ಜನ ತಮ್ಮೊಳಗೆ ಆಡಿಕೊಳ್ಳುತ್ತಿದ್ದಾರೆ.
ಖರಾಬ್ ರಸ್ತೆಗಳಿಗೆ ಕುಖ್ಯಾತಿ
ದತ್ತನ ಗಾಣಗಾಪುರ, ಭಾಗ್ಯವಂತಿ ಸನ್ನಿಧಾನ ಘತ್ತರ್ಗಾ, ಚೆನ್ನಕೇಶವ, ಯಲ್ಲಮ್ಮ ದೇವಿ ಸನ್ನಿಧಾನವಿರುವ ಮಣ್ಣೂರು ಸೇರಿದಂತೆ ಹಲವು ಕ್ಷೇತ್ರಗಳನ್ನು, ಜೊತೆಗೇ ತೋಟಗಾರಿಗೆ ಬೆಳೆಗಳಿಗೆ ಹೆಸರಾಗಿದ್ದರೂ ಈ ತಾಲೂಕಿನಲ್ಲಿ ಕಳೆದ ಅನೇಕ ವರ್ಷಗಳಿಂದ ರಸ್ತೆಗಳೇ ಸುಧಾರಣೆ ಕಾಣುತ್ತಿಲ್ಲ. ಧಾರ್ಮಿಕ ಕ್ಷೇತ್ರಗಳ ಭೇಟಿಗೆ ಬರುವ ಮಹಾರಾಷ್ಟ್ರದವರಂತೂ ಖರಾಬ್ ರಸ್ತಾ ಇರೋ ಅಫಜಲ್ಪುರ ಎಂದು ಈ ತಾಲೂಕನ್ನು 'ಖರಾಬ್ ರಸ್ತಾ ಕಾಯ್, ಅಫಜಲ್ಪೂರ ಆಲ ಬಗಾ... (ಕೆಟ್ಟ ರಸ್ತೆ ಬಂತಾ, ಇದಲ್ಲಿಂದ ಅಫಜಲ್ಪುರ ಶುರುವಾಯ್ತು ನೋಡಿ) ಎಂದು ಬಸ್‌ನಲ್ಲಿ ಕುಳಿತೇ ಅಡ್ಡನಾಮದಿಂದ ಕರೆದು ಲೇವಡಿ ಮಾಡುತ್ತಿದ್ದಾರೆ. ಕೆಟ್ಟ ರಸ್ತೆಗೆ ಕುಖ್ಯಾತಿ ಪಡೆದ ಅಸೆಂಬ್ಲಿಯಲ್ಲಿನ ಗುಲ್ಬರ್ಗ- ಡೌಪಾರುವರೆಗಿನ 33 ಕಿಮೀ ರಸ್ತೆ ಹೊರತುಪಡಿಸಿದಲ್ಲಿ ಇಂದಿಗೂ ಒಂದುಕಡೆಯೂ ಕುಳಿ ಮುಕ್ತ 1 ಕಿಮೀ ರಸ್ತೆಯೂ ಇಲ್ಲ. ಇಂತಹ ರಸ್ತೆ ದುರವಸ್ಥೆಯಲ್ಲೇ ಜನ ದಶಕದಿಂದ ಬದುಕುತ್ತಿರುವಾಗ ರಸ್ತೆಗಳ ಸುಧಾರಣೆ ಶಾಸಕರ ಆದ್ಯ ಕೆಲಸವಾಗಬಾರದೆ ಎಂಬುದು ಜನರ ಪ್ರಶ್ನೆ.
ಸಮಸ್ಯೆಗಳು ಹಲವು
ಅರ್ಜುಣಗಿ, ತಾಂಡಾಗಳಲ್ಲಿ ನೀರಿನ ಬರ ದಶಕದ ಸಮಸ್ಯೆ. ಕರ್ಜಗಿಯಲ್ಲೂ ನೀರಿನ ಬರಗಾಲ. ಕರ್ಜಗಿ, ಮಾಶಾಳ, ಮಣ್ಣೂರತಂಹ ದೊಡ್ಡ ಗ್ರಾಮಗಳಲ್ಲಿ ಸಂತೆದಿನ ಮಾತ್ರ ವೈದ್ಯರ ಸವಲತ್ತು. ಉಳಿದ ದಿನ ದವಾಖಾನೆಗಳು ಭಣಭಣ. ದಿಕ್ಸಂಗಾ, ನಂದರ್ಗಾ, ತೆಲ್ಲುಣಗಿ, ಉಪ್ಪರವಾಡಿ, ಶೇಷಗಿರಿವಾಡಿ, ಮಂಗಳೂರು, ಹಿರಿಯಾಳ, ಭಾಸಗಿ, ದುದ್ದುಗಿ, ಭಿಂಗೋಳಿ, ಬಂದರವಾಡ, ಇಂಗಳಗಿ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಿಗೆ ಸಂಪರ್ಕ ರಸ್ತೆಯೇ ಇಲ್ಲ. ಹೀಗಾಗಿ ಈ ಊರುಗಳು ಇಂದಿಗೂ ಹೊರಜಗತ್ತಿನ ಸಂಪರ್ಕಕ್ಕೆ ಸಿಗದೆ ಅನಾಥ. ಬಸ್ ಡೀಪೋ ಆದರೂ  ಇಲ್ಲಿನ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳು ಓಡುತ್ತಿಲ್ಲ, ಅದೇನಿದ್ದರೂ ಜನತೆ ಜೀಪ್, ಟಂಟಂ ಹತ್ತಿ ಹೋಗುವ ಅನಿವಾರ್ಯತೆ ಇಂದಿಗೂ ಇದೆ.

ಶಾಸಕರಲ್ಲವೇ ಗಮನಹರಿಸಬೇಕಾದ್ದು?
ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ, ಬಸ್ಸು, ಕುಡಿವ ನೀರು... ಹೀಗೆ ಮೂಲ ಸೌಕರ್ಯ ಸಂಬಂಧಿ ಸಮಸ್ಯೆಗಳಿಗೆ ಶಾಸಕಕರೇ ಪರಿಹಾರ ಹುಡುಕಬೇಕು. ಆದರೆ ಇಲ್ಲಿನ ಶಾಸಕರು ವಿದೇಶ ಪ್ರವಾಸದ ವ್ಯಾಮೋಹದಲ್ಲಿ ಕ್ಷೇತ್ರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿಕೆ ನೀಡಿ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಜನತೆ, ಸ್ಥಳೀಯ ಸಂಘಟನೆಗಳ ಸದಸ್ಯರು ದೂರುತ್ತಿದ್ದಾರೆ. ಶಾಸಕರು ಇನ್ನಾದರೂ ವಿದೇಶ ಪ್ರವಾಸದ ವಿಚಾರ ಬದಿಗಿಟ್ಟು ಕ್ಷೇತ್ರದಲ್ಲಿನ ಮೂಲ ಸೌಕರ್ಯಗಳ ಕೊರತೆಗೆ ಪರಿಹಾರೋಪಾಯ ರೂಪಿಸುವರೇ ?
ಶಾಸಕರು ಕ್ಷೇತ್ರ ಸುತ್ತಲಿ, ಸಮಸ್ಯೆ ಪರಿಹಾರಕ್ಕೆ ಮುಂದಾಗಲಿ...
ಪ್ರಗತಿ ವಿಚಾರದಲ್ಲಿ ಅಫಜಲ್ಪುರ ತುಂಬ ಹಿಂದುಳಿದಿದೆ. ಶಾಸಕರ ವಿದೇಶಿ ಪ್ರವಾಸಗಳಿಂದ ಕ್ಷೇತ್ರದ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಕ್ಷೇತ್ರದ ಸಮಸ್ಯೆಗಳ ಕುರಿತು ಮೊದಲು ಗಮನ ಕೊಡಬೇಕೇ ಹೊರತು ವಿದೇಶ ಪ್ರವಾಸ ಸರಿಯಲ್ಲ.
- ಸುರೇಶ ಅವಟೆ, ಜೈಕರವೇ ಅಫಜಲಪುರ ತಾಲೂಕಾಧ್ಯಕ್ಷ
ಯಾರು ಎಲ್ಲಿ ಬೇಕಾದ್ರೂ ಹೋಗಬಹುದು. ಆದರೆ ಶಾಸಕರು ಜವಾಬ್ದಾರಿಯನ್ನು ಅರಿತು ಮೊದ್ಲು ಕ್ಷೇತ್ರಕ್ಕೆ ಬರಬೇಕು. ಜನತೆ ಶಾಸಕರ ಮೇಲೆ ಅಪಾರ ನಂಬಿಕೆ ಇಟ್ಟಿರುತ್ತಾರೆ. ನಿರೀಕ್ಷೆ ಹುಸಿ ಮಾಡದೆ ಉತ್ತಮ ಕೆಲಸಗಳನ್ನು ಮಾಡಲಿ, ಕ್ಷೇತ್ರ ಸುತ್ತಾಡಿ ಜನರ ಗೋಳು ಅರಿತು ಆಡಳಿತಕ್ಕೆ ಚುರುಕು ನೀಡಲಿ.
- ರಾಹುಲ್ ದೊಡ್ಮನಿ, ಪದವೀಧರ
ಚುನಾವಣೆ ವೇಳೆ ಅನೇಕ ಭರವಸೆಗಳನ್ನು ಹೇಳಿ ಗೆದ್ದು ಬರುವ ಶಾಸಕರು ನಂತರ ಮತದಾರರನ್ನು ಮರೆತು ಸರ್ಕಾರಿ ಖರ್ಚಿನಲ್ಲಿ ವಿದೇಶ ಪ್ರವಾಸಕ್ಕೆ ಹೋಗುವುದು ಉಚಿತವಲ್ಲ. ಆಗಾಗ ಕ್ಷೇತ್ರ ಸುತ್ತಾಡಿ ಜನರೊಂದಿಗೆ ಸಂವಾದಿಯಾಗಬೇಕು. ಅಂದಾಗ ಮಾತ್ರ ಶಾಸಕರ ಪ್ರತಿ ಜನರ ಅಭಿಮಾನ ಹೆಚ್ಚುತ್ತದೆ.
- ರವಿಕಿರಣ ಬೆಟ್ಟಜೇವರ್ಗಿ, ಜೈಕರವೇ



-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.