ಗುಲ್ಬರ್ಗಾ

ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ರೋಗಿಗಳ ಪರದಾಟ ನಿಂತಿಲ್ಲ

Published On :

ಕನ್ನಡಪ್ರಭ ವಾರ್ತೆ  ಚಿತ್ತಾಪುರ  ಡಿ.29
ತಾಲೂಕಿನ ಡೋಣಗಾಂವದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಬಡ ಜನರ ಆರೋಗ್ಯದ ದೃಷ್ಟಿಯಿಂದ 2008 ರಲ್ಲಿ ಶಾಸಕರಾಗಿದ್ದಾಗ ಆಯುರ್ವೇದ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಿ ವೈದ್ಯರನ್ನು ನೇಮಿಸಿದ್ದರು. ಆದರೆ ವೈದ್ಯರು ಆಸ್ಪತ್ರೆಗೆ ಬರದೇ ಇರುವುದರಿಂದ ಇದು ಪೂಜಾರಿ ಇಲ್ಲದ ದೇವ ಮಂದಿರದಂತಾಗಿದ್ದು, ಬೇಸತ್ತ ಜನ ವೈದ್ಯರೇ ಇಲ್ಲದ ಆಸ್ಪತ್ರೆ ಇದ್ದರೆಷ್ಟು ಬಿಟ್ಟರೆಷ್ಟು ಎನ್ನುತ್ತಿದ್ದಾರೆ.
ಗ್ರಾಮೀಣ ಜನರ ಅನುಕೂಲಕ್ಕಾಗಿ ಮತ್ತು ತಾಲೂಕು ಕೇಂದ್ರದಿಂದ 25 ಕಿಮೀ ದೂರದಲ್ಲಿರುವ ಗ್ರಾಮದ ಹಾಗೂ ಸುತ್ತಮುತ್ತಲಿನ ಜನರ ಆರೋಗ್ಯದ ದೃಷ್ಟಿಯಿಂದ ಶಾಸಕರ ಒತ್ತಾಸೆ ಮೇರಗೆ ನಿರ್ಮಾಣವಾದ ದೊಡ್ಡ ಆಸ್ಪತ್ರೆಗೆ ಈಗ ವೈದ್ಯರೇ ಬರುವುದಿಲ್ಲ.
ರೋಗಿಗಳಿಗೆ ನಿರಾಶೆ: ವೈದ್ಯರಿಗಾಗಿ ಕಣ್ಣು ಬಿಟ್ಟು ಕುಳಿತ ರೋಗಿಗಳಿಗೆ ವೈದ್ಯರು ಬಾರದೇ ಇರುವುದರಿಂದ ಮತ್ತು ಸೂಜಿ ಸಿರಿಂಜ್‌ಗಳು ಇಲ್ಲದೆ ಇರುವುದರಿಂದ ಬೇಸತ್ತ ಜನರು ದೂರದ ಚಿತ್ತಾಪುರ, ಸೇಡಂ, ಯಾದಗಿರಿಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆಯಿದೆ.
ಇತ್ತೀಚೆಗೆ ಈ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿಯ ದೋಷದ ಕಾರಣ ಹಲವಾರು ಜನರಿಗೆ ಕಾಲರಾ ರೋಗ ಹರಡಿ ಅನೇಕ ಜನರು ಸಾವು ಬದುಕಿನ ನಡುವೆ ಹೋರಾಡಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ದೂರದ ಊರುಗಳಿಗೆ ತೆರಳಿ ಚಿಕಿತ್ಸೆ ಪಡೆದು ಬದುಕುಳಿಯಬೇಕಾಯಿತು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಇಲ್ಲಿನ ವೈದ್ಯರು ಸತತ ಗೈರು ಆಗಿ ಇಲ್ಲಿನ ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ. ಇಲ್ಲಿನ ಜನರ ಜೀವಕ್ಕೆ ಬೆಲೆಯನ್ನೇ ನೀಡುತ್ತಿಲ್ಲ.
  ನಮ್ಮ ಆರೋಗ್ಯ ಕೈಕೊಟ್ಟರೇ ದೇವರೇ ಕಾಪಾಡಬೇಕೆಂದು ನೋವಿನಿಂದ ನುಡಿಯುತ್ತಾರೆ ಗ್ರಾಮದ ಜನರು.
ವೈದ್ಯರು ಹೇಳೋದೇನು?: ಈ ಬಗ್ಗೆ 'ಕನ್ನಡಪ್ರಭ' ವೈದ್ಯರನ್ನು ಸಂಪರ್ಕಿಸಲಾಗಿ ನನಗೆ ಎರಡು ಕಡೆ ಚಾರ್ಜ್ ಇದೆ. ಹೀಗಾಗಿ ನಾನು ಎರಡೂ ಕಡೆ ಹೋಗಿ ಸೇವೆ ಸಲ್ಲಿಸುವುದು ಕಷ್ಟವಾಗುತ್ತದೆ. ವಾರದಲ್ಲಿ ಮೂರು ದಿನದಂತೆ ಸೇವೆ ಸಲ್ಲಿಸುತ್ತೇನೆ' ಎಂದು ಹೇಳುತ್ತಾರೆ. ಆದರೆ ಗ್ರಾಮಸ್ಥರ ಪ್ರಕಾರ- ಅವರು ಆಸ್ಪತ್ರೆಗೆ ಬರುವುದೇ ಅಪರೂಪ. ಅವರು ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಇರುತ್ತಾರೆ ಎಂದು ಹೇಳುತ್ತಾರೆ.
ಚಿತ್ತಾಪುರದ ಶಾಸಕರಾದ ಪ್ರಿಯಾಂಕ್ ಖರ್ಗೆಯವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿನ ಆಯುಷ್ ಆಸ್ಪತ್ರೆಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಪರೀಶಿಲಿಸಿ ಅವ್ಯವಸ್ಥೆ ಸರಿಪಡಿಸಿ ಇಲ್ಲಿನ ಜನರ ಆರೋಗ್ಯ ಕಾಪಾಡಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.