ಜನರೆದುರು ಆನೆ, ಕುದುರೆ ಆಟ ನಡೆಯದು
ಯಾದಗಿರಿ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗ ಕಾಂಗ್ರೆಸ್ ಪಕ್ಷವು ಹೈದರಾಬಾದ್ ಕರ್ನಾಟಕಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ 371(ಜೆ) ಕಾಯ್ದೆ ಮುಂದಿಟ್ಟುಕೊಂಡು, ಆನೆ, ಕುದುರೆ ರಥದಲ್ಲಿ ಮೆರವಣಿಗೆ ಮಾಡುವುದು ಖಂಡನಾರ್ಹ. ಜನತೆ ಮುಂದೆ ನಾಟಕ ನಡೆಯುವುದಿಲ್ಲ ಎಂದು ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ್ ಟೀಕಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಐದು ದಶಕಗಳಿಂದ ನೂರಾರು ಹೋರಾಟಗಾರರು ಹೈಕ ವಿಶೇಷ ಸ್ಥಾನಮಾನಕ್ಕಾಗಿ ಶ್ರಮಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳು, ಕನ್ನಡಪರ ಸಂಘಗಳು, ದಲಿತ ಸಂಘಟನೆಗಳು ಜಾತಿ ಮತ ಪಂಥ ಮರೆತು ಹೋರಾಟ ನಡೆಸಿವೆ. ವೈಜನಾಥ ಪಾಟೀಲರು ಹೋರಾಟಕ್ಕಾಗಿ ತಮ್ಮ ಸಚಿವ ಸ್ಥಾನ ಕಳೆದುಕೊಂಡರು. ಯುವ ಸಮುದಾಯ ಬೀದಿಗಿಳಿದಿದ್ದರು. ಇದನ್ನೆಲ್ಲಾ ಮರೆತಿರುವ ಕಾಂಗ್ರೆಸ್ಸಿಗರು ತಮ್ಮ ಸನ್ಮಾನ ತಾವೇ ಮಾಡಿಕೊಳ್ಳುತ್ತಿರುವುದನ್ನು ಪ್ರಜ್ಞಾವಂತ ಜನರು ಒಪ್ಪುವುದಿಲ್ಲ ಎಂದು ಗುಡುಗಿದರು.
ಕಳೆದ 60 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹೈದರಾಬಾದ್ ಕರ್ನಾಟಕವನ್ನು ಅಂಧಕಾರದಲ್ಲಿಟ್ಟಿತ್ತು. ಈಗ ಎಲ್ಲ ಹೋರಾಟಗಾರರ ತ್ಯಾಗ ಮರೆ ಮಾಚಿ ಮತ್ತೆ ಅಂಧಕಾರದಲ್ಲಿಡುವ ಪ್ರಯತ್ನ ಮಾಡುತ್ತಿದೆ ಎಂದು ಮಟ್ಟಣ್ಣವರ್ ಕಿಡಿಕಾರಿದರು.
ಗಿಮಿಕ್ ನಡೆಯೋಲ್ಲ: ಗುರುಮಠಕಲ್ ಕ್ಷೇತ್ರದಲ್ಲಿ ಜನತೆ ಶಾಸಕರ ವಿರುದ್ಧ ದಂಗೆ ಏಳುತ್ತಿದ್ದಾರೆ. ಎಲ್ಲಿ ಹೋದರೂ ಜನ ಅವರಿಗೆ ಧಿಕ್ಕಾರ ಹೇಳುತ್ತಿದ್ದಾರೆ. ಹೀಗಾಗಿ ಆನೆ, ಕುದುರೆ ತರಿಸಿ ಜನರನ್ನು ಮರುಳು ಮಾಡುವ ಗಿಮಿಕ್ ಶಾಸಕರು ಮಾಡುತ್ತಿದ್ದಾರೆ. ಆದರೆ ಈಗ ಜನ ಜಾಗೃತರಾಗಿದ್ದಾರೆ ಎನ್ನುವುದನ್ನು ಅವರು ಮರೆಯಬಾರದು. ಬಡತನ, ಬರಗಾಲದಿಂದ ಬಳಲುತ್ತಿರುವ ಗುರುಮಠಕಲ್ದಲ್ಲಿ ಬಡ ರೈತರು ತಮ್ಮ ದನಕರುಗಳನ್ನು ಮಾರಿ ಗುಳೆ ಹೋಗುತ್ತಿರುವ ಸಂದರ್ಭದಲ್ಲಿ ರೈತನ ದನಕರುಗಳನ್ನು ಪ್ರೋತ್ಸಾಹಿಸುವ ಬದಲು ಆನೆ, ಕುದುರೆಗಳನ್ನು ತಂದು ಇಲ್ಲಿಯ ರೈತರಿಗೆ ಕಾಂಗ್ರೆಸ್ ಅವಮಾನಿಸುತ್ತಿದೆ. ಇತ್ತೀಚೆಗಷ್ಟೆ ಶಾಸಕರ ಮೇಲೆ ಲೋಕಾಯುಕ್ತ ಪ್ರಕರಣ ದಾಖಲಾಗಿ ಲೋಕಾಯುಕ್ತರು ದಾಳಿ ಮಾಡಿ ಕೋಟಿಗಟ್ಟಲೆ ಆಸ್ತಿ, ಕೆಜಿಗಟ್ಟಲೆ ಚಿನ್ನ ವಶಪಡಿಸಿಕೊಂಡಿದೆ ಎಂದರು.
ಬಿಜೆಪಿ ಸಂಘಟನೆ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಬಲಶಾಲಿಯಾಗಿರುವುದರಿಂದ ಇಲ್ಲಿಯ ಜನತೆಗೆ ಆನೆಯ ಬಲ ಮತ್ತು ಕುದುರೆ ವೇಗ ಬಂದಿದೆ. ಕಾಂಗ್ರೆಸ್ ಶಾಸಕರ ಕುತಂತ್ರ ಎದುರಿಸಲು ಬಿಜೆಪಿ ಕಾರ್ಯಕರ್ತ ಸಜ್ಜಾಗಿದ್ದಾರೆ ಎಂದು ಗಿರೀಶ ಮಟ್ಟಣ್ಣವರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

