ಕಾವೇರಿದ ಕಮಿಷನರ್ ಕುರ್ಚಿ ಕದನ
ಗುಲ್ಬರ್ಗ: ಎಲ್ಲಾರು ಮಾಡೋದು ಹೊಟ್ಟೆಗಾಗಿ... ಗೇಣು ಬಟ್ಟೆಗಾಗಿ... ತುಂಡು ರೊಟ್ಟಿಗಾಗಿ... ಅನ್ನೋ ದಾಸರ ಪದ ಪಾಲಿಕೆ ಸಂದರ್ಭಕ್ಕೆ ತುಸು ಬದಲಾಯಿಸಿ ಇಲ್ಲಿ ಅಧಿಕಾರಿಗಳ ಕದನ ನಡೆದಿದ್ದು ಕುರ್ಚಿಗಾಗಿ, ಅಧಿಕಾರಕ್ಕಾಗಿ... ಸರ್ಕಾರಿ ಸವಲತ್ತಲ್ಲಿ ದೌಲತ್ತು ಮಾಡೋದಕ್ಕಾಗಿ... ಎಂದು ಹೇಳಬಹುದೇನೋ...
ಏಕೆಂದರೆ ಕಮಿಷನರ್ ಕುರ್ಚಿಗಾಗಿ ಇಲ್ಲಿನ ಪಾಲಿಕೆಯಲ್ಲಿ ಕಳೆದೊಂದು ವಾರದಿಂದ ಸಾಗಿರುವ ಕದನ ತಣ್ಣಗಾಗುವ ಲಕ್ಷಣಗಳೇ ಇಲ್ಲ. ಕೆಎಟಿ ತೀರ್ಪಿನ ನಂತರ ಈ ಕುರ್ಚಿ ಕದನ ಶಮನವಾಗಬಹುದೇನೋ ಎಂದು ಅಂದುಕೊಂಡರೆ ಅದಿನ್ನು ತನ್ನ ಪರಾಕಾಷ್ಠೆ ಹಂತ ತಲುಪಿದ್ದು ದುರಂತ.
ಬುಧವಾರ ಕುರ್ಚಿ ಸಮರ ಹತ್ತು ಹಲವು ಕಾರಣಗಳಿಂದಾಗಿ ಕಾವೇರಿತ್ತು. ಅಷ್ಟೆ ಅಲ್ಲ, ತಮ್ಮನ್ನು ಸರ್ಕಾರ ವರ್ಗಾವಣೆ ಮಾಡಿದೆ ಎಂದು ಎ.ಎಸ್. ರಾಯ್ಕರ್ ಕುರ್ಚಿ ಹತ್ತಿದ್ದನ್ನು ಇಲ್ಲಿದ್ದ ಆಯುಕ್ತ ಡಾ. ನಾಗಯ್ಯ ಕೆಎಟಿಯಲ್ಲಿ ಪ್ರಶ್ನಿಸಿದ್ದು, ಅಲ್ಲಿಂದ ತೀರ್ಪು ಬಂದಿದೆ ಎಂದು ನಾಗಯ್ಯ ಆಯುಕ್ತರ ಕುರ್ಚಿ ಹತ್ತಿ ಕೆಲಹೊತ್ತು ಕುಳಿತಿದ್ದು ನಡೆಯಿತು. ಅಲ್ಲದೆ ಇದೆಲ್ಲದರ ಸುತ್ತಮುತ್ತ ಬಹುದೊಡ್ಡ ದೊಂಬರಾಟವೇ ನಡೆದುಹೋಯ್ತು.
ವಾಕ್ಸಮರ-ಚೇಂಬರ್ ಉದ್ವಿಗ್ನ: ಬುಧವಾರ ಕೆಎಟಿ ತೀರ್ಪು ತಮ್ಮ ಪರವಾಗಿ ಬಂದಿದೆ ಎಂದು ಡಾ. ನಾಗಯ್ಯ ಮಧ್ಯಾಹ್ನದ ಹೊತ್ತು ಚೇಂಬರ್ ಪ್ರವೇಶಿಸಿ ಕುರ್ಚಿ ಮೇಲೆ ಕುಳಿತಾಗ ಸುದ್ದಿ ತಿಳಿದ ರಾಯ್ಕರ್ ಧಾವಿಸಿ ಬಂದರು. ಪಾಲಿಕೆ ಸಿಬ್ಬಂದಿ ಸಮ್ಮುಖದಲ್ಲೇ ಈ ಹಿರಿಯ ಅಧಿಕಾರಿಗಳಿಬ್ಬರ ಮಧ್ಯೆ ವಾಕ್ಸಮರ ಶುರುವಾಯಿತು. ಅಲ್ಲದೆ ಇಬ್ಬರೂ ಕುರ್ಚಿಗಾಗಿ ಪರಸ್ಪರ ಮಾತಿನ ಚಕಮಕಿ ನಡೆಸಿದರು ಎಂದು ತಿಳಿದು ಬಂದಿದೆ.
ತಾವು ಚೇಂಬರ್ ಪ್ರವೇಶಿಸಿದ್ದು ಅಕ್ರಮ, ಕೆಎಟಿ ಆದೇಶ ಎಲ್ಲಿದೆ ತೋರಿಸಿ ಎಂಬ ರಾಯ್ಕರ್ ಪ್ರಶ್ನೆಗೆ ಮಾರುತ್ತರ ನೀಡಿದ ಡಾ. ಸಿ ನಾಗಯ್ಯ, ಆದೇಶ ಸರ್ಕಾರಕ್ಕೆ ಹೋಗಿದೆ, ನಿಮಗೇಕೆ ಕೊಡಬೇಕು. ನೀವು ನನ್ನ ಮುಂದೆ ಕುಳಿತುಕೊಳ್ಳಿ, ವಿಷಯ ತಿಳಿಸುವೆ ಎಂದರು. ಪರಿಸ್ಥಿತಿ ಕ್ಷಣಕಾಲ ಉದ್ವಿಗ್ನಗೊಂಡಿತ್ತು ಎಂದು ಈ ಸಂದರ್ಭಕ್ಕೆ ಸಾಕ್ಷಿಯಾದ ಪಾಲಿಕೆ ಸಿಬ್ಬಂದಿ ವರ್ಗ “OÚ«ÚsÚ®ÚúڒOæQ ಮಾಹಿತಿ ನೀಡಿದ್ದಾರೆ.
ತಮ್ಮ ಅನುಪಸ್ಥಿತಿಯಲ್ಲಿ ಅಕ್ರಮವಾಗಿ ಚೇಂಬರ್ ಪ್ರವೇಶಿಸಿದ್ದಲ್ಲದೆ ಕುರ್ಚಿ ಮೇಲೆ ಕುಳಿತುಕೊಳ್ಳುವ ಮೂಲಕ ಅಶಿಸ್ತು ಪ್ರದರ್ಶಿಸಿದ್ದಾರೆ ಎಂದು ಎ.ಎಸ್. ರಾಯ್ಕರ್ ಅವರು ಡಾ. ನಾಗಯ್ಯ ವಿರುದ್ಧ ಬ್ರಹ್ಮಪುರ ಠಾಣೆಗೆ ಲಿಖಿತ ದೂರು ಸಹ ಸಲ್ಲಿಸಿದ್ದರು. ಆದರೆ ನಾಗಯ್ಯ ಕೆಲಕಾಲ ಕಮಿಷನರ್ ಚೆಂಬರ್ನಲ್ಲಿದ್ದು, ನಂತರ ಜಾಗ ಖಾಲಿ ಮಾಡಿದ್ದ ಕಾರಣ ರಾಯ್ಕರ್ ಅವರು ಹಿರಿಯ ಅಧಿಕಾರಿಗಳ ಸಲಹೆ-ಸೂಚನೆ ಪಡೆದು ತಾವು ನೀಡಿದ್ದ ಪೊಲೀಸ್ ದೂರನ್ನು ವಾಪಸ್ ಪಡೆದಿದ್ದಾರೆ.
ಸರ್ಕಾರದ ಸ್ಪಷ್ಟೀಕರಣ ಪತ್ರ: ಈ ಕದನ ಕುತೂಹಲದ ನಡುವೆಯೇ ಡಾ. ನಾಗಯ್ಯ ಜ.30ರಂದು ಸರ್ಕಾರಕ್ಕೆ ಪತ್ರ ಬರೆದು ಇಲ್ಲಿನ ಸಂದರ್ಭ ವಿವರಿಸಿ ಕೇಳಿದ್ದ ವಿವರಣೆಗೆ ನಗರಾಭಿವೃದ್ಧಿ ಇಲಾಖೆಯಿಂದ ಸ್ಪಷ್ಟೀಕರಣ ಬಂದಿದೆ. ಅದರಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಮಾಲಾ ಇವರು ಡಾ. ನಾಗಯ್ಯ ಅವರನ್ನು ತಮಗೆ ಬಿಬಿಎಂಪಿ ಉಪ ಆಯುಕ್ತರ ಹುದ್ದೆಗೆ 2012ರ ಸೆಪ್ಟಂಬರ್ 9ರಂದೇ ವರ್ಗಾವಣೆ ಮಾಡಲಾಗಿದ್ದು, ಅದರಂತೆ ತಾವು ಸ್ಥಳ ನಿಯುಕ್ತಿಗಾಗಿ ನಗರಾಭಿವೃದ್ಧಿ ಇಲಾಖೆಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.
ಜೊತೆಗೆ ಗುಲ್ಬರ್ಗ ಪಾಲಿಕೆ ಆಯುಕ್ತರ ಹುದ್ದೆಯ ಪ್ರಭಾರವನ್ನು ಕೆಎಂಎಸ್ ಹಿರಿಯ ಅಧಿಕಾರಿ ಎ.ಎಸ್. ರಾಯ್ಕರ್ ಅವರಿಗೆ ಹಸ್ತಾಂತರಿಸಿ ಎಂದು ಗೀತಮಾಲಾ ಫೆ.6ರಂದು ತುರ್ತಾಗಿ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ನಾಗಯ್ಯ ದಾರಿ ಸರಿಯೇ: ರಾಯ್ಕರ್ ಪ್ರಶ್ನೆ ಜಿಲ್ಲಾಡಳಿತಕ್ಕೆ ಬಂದಿರುವ ಈ ಪತ್ರವನ್ನು ಎ.ಎಸ್. ರಾಯ್ಕರ್ ಅವರು ಪಡೆದು ಅದರ ಪ್ರತಿಯನ್ನು ಡಾ. ನಾಗಯ್ಯ ಅವರಿಗೆ ನೀಡಿದ್ದಾಗಿ ರಾಯ್ಕರ್ ಹೇಳಿದ್ದಾರೆ. ಸರ್ಕಾರದಿಂದ ಬಂದಿರುವ ತುರ್ತು ಪತ್ರದಂತೆ ಡಾ. ನಾಗಯ್ಯ ತಮಗೆ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಅದ್ಯಾವುದನ್ನು ಮಾಡದೆ ಅನಧಿಕೃತವಾಗಿ ಕಮಿಷನರ್ ಕುರ್ಚಿ ಹತ್ತಿದ್ದು ತಪ್ಪಲ್ಲವೇ ಎಂಬುದು ರಾಯ್ಕರ್ ಪ್ರಶ್ನೆ. ಕಳೆದ ಜ.31ರಂದು ತಾವು ಕಮಿಷನರ್ ಹುದ್ದೆ ಅಧಿಕಾರ ವಹಿಸಿಕೊಂಡರೂ ತಮಗೆ ಅಧಿಕಾರ ನೀಡಲು 3 ದಿನ ಕಾಯಿಸಿದ್ದಾರೆ. ಇದಾದ ನಂತರ ಚೆಕ್ ಬುಕ್ ನೀಡಿದ್ದಾರೆ.
ಆದರೆ ಚೆಕ್ ರಿಜಿಸ್ಟರ್ ನೀಡಿಲ್ಲ. ಚೆಕ್ ರಿಜಿಸ್ಟರ್ ಮಹತ್ವದ ಕಡತವಾದರೂ ಅದು ತಮ್ಮ ಕೈ ಸೇರಿಲ್ಲ. ಸರ್ಕಾರಿ ವಾಹನ ನೀಡಿಲ್ಲ. ಕಾರ್ ಕೊಡಿ ಎಂದರೆ ಅವರೇ ಹತ್ತಿಕೊಂಡು ಹೋಗಿದ್ದಾರೆ. ಇವೆಲ್ಲ ಬೆಳವಣಿಗೆಗಳನ್ನು ತಾವು ಜಿಲ್ಲಾಧಿಕಾರಿ ಗಮನಕ್ಕೂ ತಂದಿರುವುದಾಗಿ ಎ.ಎಸ್. ರಾಯ್ಕರ್ 'ಕನ್ನಡಪ್ರಭ' ಜೊತೆ ಮಾತನಾಡುತ್ತ ಹೇಳಿದ್ದಾರೆ.
ಕೆಎಟಿ ತೀರ್ಪು ಡಾ. ನಾಗಯ್ಯ ಪರ
ಕಮಿಷನರ್ ಹುದ್ದೆ ವರ್ಗಾವಣೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಕೆಎಟಿ ಮೊರೆ ಹೋಗಿರುವ ಡಾ. ನಾಗಯ್ಯ ಅವರ ಪ್ರಕರಣದ ವಿಚಾರಣೆ ಬುಧವಾರ ನಡೆದಿದ್ದು ತೀರ್ಪು ಡಾ. ನಾಗಯ್ಯ ಪರವಾಗಿದೆ. ಇನ್ನೂ 4 ತಿಂಗಳು ಡಾ. ನಾಗಯ್ಯ ಅವರೇ ಗುಲ್ಬರ್ಗ ಪಾಲಿಕೆ ಕಮಿಷನರ್ ಆಗಿರುತ್ತಾರೆ. ಕೆಎಟಿ ಆದೇಶ ಸಂಖ್ಯೆ. 864/2013 ಈ ತೀರ್ಪು ಹೊರಬಿದ್ದಿದೆ. 2012ರ ಸೆಪ್ಟೆಂಬರ್ನಲ್ಲಿನ ವರ್ಗಾವಣೆ ಆದೇಶವೂ ಕ್ರಮಬದ್ಧವಲ್ಲ ಎಂದು ಕೆಎಟಿ ಅಭಿಪ್ರಾಯಪಟ್ಟಿದೆ. ಆದೇಶ ಪ್ರತಿ ಸರ್ಕಾರಕ್ಕೆ ರವಾನೆಯಾಗಿದೆ. ವಿಷಯ ಹೀಗಿದ್ದರೂ ಈಗ ವರ್ಗಾವಣೆಯಾಗಿ ಬಂದಿರುವ ಅಧಿಕಾರಿ ರಾಯ್ಕರ್ ಪಟ್ಟು ಬಿಡದಂತೆ ವರ್ತಿಸುತ್ತಿದ್ದಾರೆ.
- ಭೀಮರೆಡ್ಡಿ ಪಾಟೀಲ್ ಕುರಕುಂದಾ
ಕರ-ಹಣಕಾಸು ಸ್ಥಾಯಿ ಸಮಿತಿ, ಗುಲ್ಬರ್ಗ ಮಹಾನಗರ ಪಾಲಿಕೆ
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

