ಫಲಾನುಭವಿಗಳಿಗೆ ಕಂಪ್ಯೂಟರ್ ವಿತರಣೆ
ಶಹಾಪುರ: ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳಿಗೆ ಪುರಸಭೆಯ 2009- 10 ಹಾಗೂ 2011- 12ನೇ ಸಾಲಿನ ಶೇ.22.5ರ ಅನುದಾನದಡಿಯಲ್ಲಿ ಕಂಪ್ಯೂಟರ್ ಮತ್ತು ಹೊಲಿಗೆ ಯಂತ್ರಗಳನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ವಿತರಿಸಿದರು. ಪುರಸಭೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸೌಲಭ್ಯ ವಿತರಿಸಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಾರ್ಥಕಪಡಿಸಿಕೊಂಡು ಹೊಲಿಗೆ ಯಂತ್ರದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಪ್ರಸ್ತತ ದಿನಗಳಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯವಾಗಿದ್ದು ಫಲಾನುಭವಿಗಳು ಹೆಚ್ಚು ಮಾಹಿತಿ ಪಡೆಯುವ ಮೂಲಕ ಅವಕಾಶಗಳ ಸದುಪಯೋಗ ಪಡೆಯಬೇಕು ಎಂದರು. ಒಟ್ಟು 20 ಮಹಿಳೆಯರಿಗೆ ಹೊಲಿಗೆ ಮಶಿನ್‌ಗಳು ಮತ್ತು 10 ಜನರಿಗೆ ಕಂಪ್ಯೂಟರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಸಣ್ಣ ನಿಂಗಣ್ಣಾ ನಾಯ್ಕೋಡಿ, ಉಪಾಧ್ಯಕ್ಷ ಗೋಪಾಲ ಸುರಪುರ, ಸದಸ್ಯರಾದ ಸುರೇಶ ದೇಸಾಯಿ, ನಾನಾಸಾಹೇಬ ಇತರರು ಇದ್ದರು.
ಶಿಕ್ಷಕರ ನೇಮಕ
ತಡೆಗೆ ಒತ್ತಾಯ
ಯಾದಗಿರಿ: ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ಕಲಂ ಸಂಪೂರ್ಣ ಜಾರಿಯಾಗುವವರೆಗೆ ಯಾವುದೇ ನೇಮಕಾತಿ ಮಾಡಬಾರದು. ಆದ್ದರಿಂದ ರಾಜ್ಯ ಸರ್ಕಾರ 4 ಸಾವಿರ ಶಿಕ್ಷಕರ ನೇಮಕಾತಿ ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ರದ್ದುಪಡಿಸಬೇಕೆಂದು ಜೈಕರವೇ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಕಾಂತ ಭೀಮನಳ್ಳಿ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದುಳಿದ ಹೈ-ಕ ಪ್ರದೇಶದಲ್ಲಿ ಅರ್ಧ ಶತಮಾನದ ಹೋರಾಟದ ನಂತರ ಈಗ 371(ಜೆ) ಕಲಂ ತಿದ್ದುಪಡಿ ಅಂಗೀಕೃತಗೊಂಡಿದೆ. ಇನ್ನೂ ಅದು ಕಾಯ್ದೆಯಾಗಿ ಅನುಷ್ಠಾನಗೊಂಡಿಲ್ಲ. ಆದ್ದರಿಂದ ಈಗ ರಾಜ್ಯ ಸರ್ಕಾರ ತರಾತುರಿಯಲ್ಲಿ ಈ ಅಧಿಸೂಚನೆ ಹೊರಡಿಸಿರುವುದರಿಂದ ಈ ಭಾಗದ ನಿರುದ್ಯೋಗಿ ಯುವಕರಿಗೆ ಅನ್ಯಾಯವಾಗಲಿದೆ. ಆದ್ದರಿಂದ ತಕ್ಷಣ ನೇಮಕಾತಿ ತಡೆಹಿಡಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಾದಿಗರ ನೂತನ ಶಾಖೆ ಉದ್ಘಾಟನೆ
ಯಾದಗಿರಿ: ಶಹಾಪುರ ತಾಲೂಕಿನ ಸೂಗೂರಲ್ಲಿ ಶಿವಶರಣ ಮಾದರ ಚನ್ನಯ್ಯ ನಾಮಫಲಕ, ಕರ್ನಾಟಕ ಪ್ರದೇಶ ಮಾದಿಗರ ಸಂಘದ ನೂತನ ಶಾಖೆಯನ್ನು ಉದ್ಘಾಟಿಸಲಾಯಿತು. ಕಾಂಗ್ರೆಸ್ ಮುಖಂಡ ಮಲ್ಲರಡ್ಡಿಗೌಡ ಅರಕೇರಿ ಮಾತನಾಡಿ, ಮಾದಿಗ ಸಮಾಜವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪ್ರದೇಶ ಮಾದಿಗರ ಸಂಘದ ರಾಜ್ಯ ಉಪಾಧ್ಯಕ್ಷಬಸವರಾಜ ನಾಯ್ಕಲಕರ್ ಮಾತನಾಡಿದರು. ಬಸವರಾಜ ಕಾಮಂನೋರ, ಬಸವರಾಜಪ್ಪ ಕಾಟರ್‌ಪಲ್ಲಿ, ಮರೆಪ್ಪ ಬಿಳ್ಹಾರ, ಬಾಷುಮಿಯ ನಾಯಕೋಡಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

