ಶಾಲೆಯಿಂದ ಗಂಡು ಮಕ್ಕಳೇ ಬಲು ದೂರ!
ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಶಾಲೆಯಿಂದ ಹೊರಗುಳಿಯುವವರಲ್ಲಿ ಹೆಣ್ಮಕ್ಕಳಿಗಿಂತ ಗಂಡು ಮಕ್ಕಳದ್ದೇ ಮೇಲುಗೈ ಎಂಬಂಶ ಇದೀಗ ಬಹಿರಂಗವಾಗಿದೆ.
ಬಾಲ್ಯ ವಿವಾಹ, ಹೆಣ್ಮಗು.. ಓದಿ ಮಾಡೋದೇನಿದೆ ಎಂಬ ಅನೇಕ ಕಾರಣಗಳಿಂದ ಮೊದಲೆಲ್ಲಾ ಹೆಣ್ಮಕ್ಕಳೇ ಶಾಲೆಯಿಂದ ಹೊರಗುಳಿಯುತ್ತಿದ್ದರು. ಆದರೀಗ ಈ ಚಿತ್ರಣ ಬದಲಾಗಿದ್ದು, 2013- 14ನೇ ಸಾಲಿನ ಮಕ್ಕಳ ಸಮೀಕ್ಷೆಯಿಂದ ಸಾಬೀತಾಗಿದೆ. 'ಕನ್ನಡಪ್ರಭ'ಕ್ಕೆ ಲಭ್ಯವಾಗಿರುವ ಮಾಹಿತಿಯಂತೆ- ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು 51,994. ಈ ಪೈಕಿ ಗಂಡು ಮಕ್ಕಳ ಸಂಖ್ಯೆಯೇ 29,616. ಈ ಸಂಗತಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಫಲಿತಾಂಶ, ರ್ಯಾಂಕ್ ಇಲ್ಲೆಲ್ಲಾ ಹೆಣ್ಮಕ್ಕಳದ್ದೇ ಮೇಲುಗೈ. ಆದರೆ ಶಾಲೆಯಿಂದ ಹೊರಗುಳಿದ ಮಕ್ಕಳ ಅಂಕಿ- ಸಂಖ್ಯೆಯಲ್ಲಿ ಮಾತ್ರ ಗಂಡು ಮಕ್ಕಳ ಮೇಲುಗೈಯಾಗಿರುವುದು ಆತಂಕ ಮೂಡುವಂತೆ ಮಾಡಿದೆ.
ಕಾರಣಗಳು ಏನೇ ಇರಲಿ, ಯಾವ ಮಕ್ಕಳು ಶಾಲೆಯಿಂದ ವಿಮುಖವಾಗಬಾರದು ಎಂದು ಸರ್ಕಾರ ಸಾವಿರಾರು ಕೋಟಿ ಹಣ ಚೆಲ್ಲಿ ಹಲವು ಯೋಜನೆಗಳ ಮೂಲಕ ಶಿಕ್ಷಣ ನೀಡುವತ್ತ ಶ್ರಮಿಸುತ್ತಿದ್ದರೂ ಅದ್ಯಾಕೋ ಮಕ್ಕಳು ಶಾಲೆಯ ಗೊಡವೆಯೇ ಬೇಡವೆಂದು ದೂರ ಸರಿಯುತ್ತಿರುವುದು ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಶಾಲೆಯೇ ಬೇಡವೆಂದು ಮುಖ ತಿರುವುವ ಮಕ್ಕಳ ಸಂಖ್ಯೆ ಉತ್ತರ ಕರ್ನಾಟಕದಲ್ಲೇ ಅಧಿಕವಾಗಿರುವುದು ಗಮನಾರ್ಹ. ಇದೂ ಶೈಕ್ಷಣಿಕವಾಗಿ ಹಲವು ಸಮಸ್ಯೆಗಳಿಗೆ ಮೂಲವಾಗುವ ಆತಂಕ ಕಾಡಲಾರಂಭಿಸಿದೆ. ಇತ್ತೀಚಿನ ದಿನಗಳಲ್ಲಂತೂ ಅಪರಾಧ ಪ್ರಕರಣಗಳು, ಲೈಂಗಿಕ ಪ್ರಕರಣಗಳಲ್ಲಿ ಬಂಧಿಸಲ್ಪಡುವವರಲ್ಲಿ ಚಿಕ್ಕ ವಯಸ್ಸಿನವರೇ ಅಧಿಕ. ಶಾಲೆಯಿಂದ ದೂರ ಉಳಿಯುವ ಮಕ್ಕಳು ಸಮಾಜ ವಿದ್ರೋಹಿ ಕೆಲಸಗಳಿಗೆ ಹತ್ತಿರವಾಗುತ್ತಿದ್ದಾರೆಯೇ ಎಂಬ ಆತಂಕದ ಪ್ರಶ್ನೆಯೂ ಹೊರಹೊಮ್ಮಿದೆ. ಬಾಲ ಕಾರ್ಮಿಕತೆ ನಿರ್ಮೂಲನೆಗೆ ರಾಜ್ಯದಲ್ಲಿ ಅನೇಕ ಕಾರ್ಯಕ್ರಮಗಳು ಜಾರಿಗೆ ಬಂದಿದ್ದು, ಶಾಲೆ ಬಿಟ್ಟವರೆಲ್ಲ ಬಾಲಕಾರ್ಮಿಕರಾಗಿಯೇ ಬೆಳೆಯುತ್ತಾರೆ ಎಂದು ಹೇಳಲಾಗದು. ಹೀಗಾಗಿ ಶಾಲೆಯಿಂದ ದೂರ ಇರುವ ಮಕ್ಕಳು ಏನೆಲ್ಲ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂಬುದು ಆತಂಕಕ್ಕೆ ಕಾರಣವಾಗಿದೆ.
ಫಲ ನೀಡದ ಯೋಜನೆಗಳು: ಸರ್ಕಾರ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಮುಖ್ಯವಾಹಿನಿಗೆ ತರಲು ವಸತಿ ರಹಿತ, ಸಹಿತ ಶಾಲೆಗಳು, ಶಾಲಾಧಾರಿತ ವಿಶೇಷ ತರಬೇತಿ, ಟೆಂಟ್ ಶಾಲೆಗಳು, ಬಾಲ ಕಾರ್ಮಿಕ ಮಕ್ಕಳಿಗಾಗಿ ಕೇಂದ್ರಗಳು, ನಗರದಲ್ಲಿನ ಶಿಕ್ಷಣ ವಂಚಿತರಿಗೆ ಯುಡಿಸಿ ಕೇಂದ್ರಗಳು, ಮದರಸಗಳು ಸೇರಿದಂತೆ ಹಲವು ರೂಪದಲ್ಲಿ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತಿದೆ. ಆದರೆ ಇದ್ಯಾವ ಯೋಜನೆಯೂ ಶೇ. 100 ಗುರಿ ಸಾಧಿಸಿಲ್ಲ. ಇದರಿಂದ ಶಾಲೆಯಿಂದ ಮಕ್ಕಳು ಹೊರಗುಳಿಯುತ್ತಿರುವ ಸಂಖ್ಯೆ ಸಮೀಕ್ಷೆಯಿಂದ ಸಮೀಕ್ಷೆಗೆ ಹೆಚ್ಚುತ್ತಲೇ ಹೊರಟಿದ್ದು ಆತಂಕದ ಸಂಗತಿ. ಸರ್ಕಾರದ ಈ ಯೋಜನೆಗಳು ನಿರೀಕ್ಷಿತ ಫಲ ಏಕೆ ನೀಡುತ್ತಿಲ್ಲ, ಅನುಷ್ಠಾನ ದಾರಿಯಲ್ಲಿ ಏನಾಗುತ್ತಿದೆ ಎಂಬಿತ್ಯಾದಿ ಪ್ರಶ್ನೆಗಳನ್ನಿಟ್ಟುಕೊಂಡು ಚಿಂತನೆ ನಡೆಯುವುದು ಅಗತ್ಯ.
ಜಿಲ್ಲಾವಾರು ನೋಟ
ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ- ಗಂಡು, ಹೆಣ್ಣು ಮಕ್ಕಳ ಮಾಹಿತಿ.
ಬೆಂಗಳೂರು ದಕ್ಷಿಣ 2,736(ಗಂ.) 2,538 (ಹೆ.)
ಕೊಪ್ಪಳ 2,427(ಗಂ) 2,236 (ಹೆ)
ರಾಯಚೂರು 1,696(ಗಂ) 1,771(ಹೆ)
ಬೆಂಗಳೂರು ಉತ್ತರ 2,205(ಗಂ) 1,295(ಹೆ)
ಗುಲ್ಬರ್ಗ 1,953(ಗಂ) 1,487(ಹೆ)
ಬಾಗಲಕೋಟೆ 453(ಗಂ) 352(ಹೆ)
ಬೆಂ. ಗ್ರಾಮಾಂತರ 227(ಗಂ) 1,161(ಹೆ)
ರಾಮನಗರ 230(ಗಂ) 1,251(ಹೆ)
ಬೆಳಗಾವಿ 721(ಗಂ) 441(ಹೆ)
ಚಿಕ್ಕೋಡಿ 1,679(ಗಂ) 1,269 (ಹೆ)
ಚಾಮರಾಜನಗರ 825(ಗಂ) 557(ಹೆ)
ಚಿಕ್ಕಮಗಳೂರು 217(ಗಂ) 170(ಹೆ)
ಚಿತ್ರದುರ್ಗ 415(ಗಂ) 353(ಹೆ)
ದಕ್ಷಿಣ ಕನ್ನಡ 89(ಗಂ) 48(ಹೆ)
ದಾವಣಗೇರೆ 612(ಗಂ) 503(ಹೆ)
ಧಾರವಾಡ 952(ಗಂ) 568(ಹೆ)
ಗದಗ 1,130(ಗಂ) 1,087(ಹೆ)
ಯಾದಗಿರಿ 1,348(ಗಂ) 1,400(ಹೆ)
ಹಾಸನ 172(ಗಂ) 86(ಹೆ)
ಹಾವೇರಿ 1,013(ಗಂ) 612(ಹೆ)
ಕೊಡಗು 130(ಗಂ) 96(ಹೆ)
ಕೋಲಾರ 450(ಗಂ) 308(ಹೆ)
ಚಿಕ್ಕಬಳ್ಳಾಪುರ 311(ಗಂ) 262(ಹೆ)
ಮಂಡ್ಯ 269(ಗಂ) 107(ಹೆ)
ಮೈಸೂರು 1,886(ಗಂ) 620(ಹೆ)
ಶಿವಮೊಗ್ಗ 438(ಗಂ) 317(ಹೆ)
ತುಮಕೂರು 838(ಗಂ) 317(ಹೆ)
ಮಧುಗಿರಿ 260(ಗಂ) 185(ಹೆ)
ಉಡುಪಿ 43(ಗಂ) 43(ಹೆ)
ಉತ್ತರ ಕನ್ನಡ 182(ಗಂ) 128(ಹೆ)
ಬಳ್ಳಾರಿ 1,679(ಗಂ) 1,289(ಹೆ)
ಬೀದರ್ 1,457(ಗಂ) 1,152(ಹೆ)
ಹೈ- ಕ ನೋಟ
ಹೊರಗುಳಿದ ಮಕ್ಕಳು- 19,895
ಒಟ್ಟು ಗಂಡುಮಕ್ಕಳ ಸಂಖ್ಯೆ - 10,500
ಒಟ್ಟು ಹೆಣ್ಣುಮಕ್ಕಳು- 9,333
ರಾಜ್ಯ ನೋಟ
ಹೊರಗುಳಿದ ಮಕ್ಕಳು- 51,994
ಒಟ್ಟು ಗಂಡುಮಕ್ಕಳ ಸಂಖ್ಯೆ - 29,616
ಒಟ್ಟು ಹೆಣ್ಣುಮಕ್ಕಳು- 22,378
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

