ಗುಲ್ಬರ್ಗಾ

ಜಡ್ಡುಗಟ್ಟಿದ ಸಂಪ್ರದಾಯ ಕಿತ್ತೆಸೆಯಿರಿ: ಸ್ವಾಮೀಜಿ

Published On :

ಶಹಾಪುರ: ಅಂಬಿಗ ಎಂದರೆ ಅದು ಸಾಮಾನ್ಯ ಪದವಲ್ಲ. ಅವನೊಬ್ಬ ನಾಯಕ. ಪ್ರಸ್ತುತ ಸಂದರ್ಭದಲ್ಲಿ ಶಾಸನ ಸಭೆಗಳಲ್ಲಿ ಸ್ಥಾನಮಾನ ಹೊಂದಿ ನಾಯಕರಾದಾಗ ಅಂಬಿಗರ ಮತ್ತು ಶೋಷಿತ ವರ್ಗಗಳಿಗೆ ಸಮಾನವಾದ ನ್ಯಾಯ ಸಿಕ್ಕಂತಾಗುತ್ತದೆ. ಎಂದು ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.
  ನಿಜಶರಣ ಅಂಬಿಗರ ಚೌಡಯ್ಯನವರು ತಾಲೂಕಾ ಮಟ್ಟದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಂಘಟನೆ ಅಗತ್ಯ: ಇಲ್ಲಿಯವರೆಗೆ ಹಿಂದುಳಿದ ಸಮಾಜವನ್ನು  ಮತ ಬ್ಯಾಂಕಾಗಿ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿರುವವರಿಗೆ ಸಂಘಟನೆಯ ಮೂಲಕ ಸಂದೇಶ ನೀಡಬೇಕು. ಜಡ್ಡುಗಟ್ಟಿದ ಸಂಪ್ರದಾಯಗಳನ್ನು ಕಿತ್ತೆಸೆದು ನಿಜಶರಣನ ವಚನಗಳ ಮೂಲಕ ಬದುಕು ರೂಪಿಸಿಕೊಳ್ಳುವತ್ತ ಚಿಂತನೆ ಮಾಡಬೇಕು.
ಮುನ್ನಡೆ: ಹಿಂದುಳಿದ ಸಮಾಜಗಳ ಪ್ರಮುಖರು ಶಾಸನಬದ್ಧ ಅಧಿಕಾರ ಪಡೆಯುವುದಿಲ್ಲವೋ, ಅಲ್ಲಿಯವರೆಗೆ ಶೋಷಣೆ ತಪ್ಪಿದ್ದಲ್ಲ. ಹಿಂದುಳಿದ ಸಮಾಜಗಳ ಒಗ್ಗಟ್ಟು ಸಮಾನತೆಯ ಸಂಕೇತ ಇಲ್ಲಿಯವರೆಗೆ ಪಟ್ಟಭದ್ರರು ಹಿಂದುಳಿದವರನ್ನು ಮನಬಂದಂತೆ ಬಳಸಿಕೊಂಡು ಧ್ವನಿ ಎತ್ತದಂತೆ ಮಾಡಿದ್ದಾರೆ. ಇತ್ತೀಚಿಗಷ್ಟೆ ಕಬ್ಬಲಿಗ ಸಮಾಜ ಇನ್ನಿತರ ಹಿಂದುಳಿದ ಸಮಾಜ ಜಾಗೃತಿಯತ್ತ ಮುನ್ನಡೆಯುತ್ತಿರುವುದಕ್ಕೆ ಈ ಸಮಾವೇಶವೇ ಸಾಕ್ಷಿ ಎಂದರು.
ಕೈಲಾಸ ಆಶ್ರಮದ ಶಿವಲಿಂಗ ಶರಣರು, ಅಲ್ಲಮಪ್ರಭು ಪೀಠದ ಮಲ್ಲಣ್ಣಾ ಮುತ್ಯಾ ಮಾತನಾಡಿ, ಕಬ್ಬಲಿಗ ಸಮಾಜ ಹಲವಾರು ಹಕ್ಕುಗಳಿಂದ ವಂಚಿತರಾಗಿದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಹಲವು ಮೂಢ ಕಂದಾಚಾರಗಳನ್ನು ತೆಗೆದು ಹಾಕಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ 800 ವರ್ಷಗಳ ಹಿಂದೆ ಅಂಬಿಗರ ಚೌಡಯ್ಯನವರ ವಚನಗಳು ಸಾಕ್ಷಿಯಾಗಿವೆ ಎಂದರು.
ಸಹಕಾರ ಇದೆ: ಶಾಸಕ ಬಾಬುರಾವ ಚಿಂಚನ್ಸೂರ್ ಮಾತನಾಡಿದರು. ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಸದಾಕಾಲ ಕಬ್ಬಲಿಗ ಸಮಾಜ ತಾಲೂಕಿನಲ್ಲಿ ಸಂಘಟನಾತ್ಮಕವಾಗಿ ಗಟ್ಟಿಯಾಗುತ್ತಿದ್ದು, ಪ್ರತಿಯೊಬ್ಬರೂ ಶೈಕ್ಷಣಿಕ ಕಾಳಜಿಯತ್ತ ಹೆಚ್ಚು ಗಮನ ನೀಡುವುದರ ಜೊತೆಗ ರಾಜಕೀಯ ಸ್ಥಾನಮಾನಗಳು ಹೊಂದಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರು ಮುಂದೆ ಬರಲು ಅವಕಾಶಗಳಿವೆ ಎಂದರು.
ಮುಖಂಡರಾದ ಗುರು ಪಾಟೀಲ ಶಿರವಾಳ, ಅಯ್ಯಣ್ಣ ಕನ್ಯಾಕೋಳೂರ, ಶರಣಪ್ಪ ಸಲಾದಪುರ, ಡಾ.ಚಂದ್ರಶೇಖರ ಸುಬೇದಾರ, ಚನಬಸ್ಸು ವಂದುರ್ಗ ಕಬ್ಬಲಿಗ ಜಿಲ್ಲಾ ಅಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಣ್ಣನಿಂಗಣ್ಣಾ ನಾಯ್ಕೋಡಿ, ಗೋಪಾಲ ಸುರಪುರ, ಸಂಗಮ್ಮ ನಾಗಪ್ಪ, ಸಾವಿತ್ರಿ ಬಗವಂತ್ರಾಯ, ಯಮನಪ್ಪ ಚಿಗರಿ, ನೀಲಮ್ಮ ಭೀಮರಾಯ ನಾಯ್ಕೋಡಿ, ಶರಣಬಸಮ್ಮ ಶಾಂತಪ್ಪ, ಮಲ್ಲಿಕಾರ್ಜುನ ನಾಯ್ಕೋಡಿ, ನೀಲಮ್ಮ ಹಳೆಪ್ಪ, ಪಾರ್ವತಿ ದುರ್ಗಪ್ಪಗೌಡ, ಶರಣಪ್ಪ ಹವಣ್ಣೋರ, ಮಲ್ಲಪ್ಪ ಬಗಲಿ ಇವರಿಗೆ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ಡಾ. ಎಂ.ಎಸ್. ಶಿರವಾಳ ನಿರ್ವಹಿಸಿದರು. ಮರೆಪ್ಪ ಹೈಯಾಳಕರ ಸ್ವಾಗತಿಸಿದರು. ಬಸವರಾಜ ಕಂದಳ್ಳಿ ವಂದಿಸಿದರು. ಕೋಲಿ ಸಮಾಜದ ಅಧ್ಯಕ್ಷ ಮಹಾದೇವಪ್ಪ ಸಾಲಿಮನಿ, ಕಾರ್ಯದರ್ಶಿ ನಾಗೇಂದ್ರಪ್ಪ ಇಟಿಗಿ, ಗೌರವಾಧ್ಯಕ್ಷ ಭೀಮರಾಯ ಮಂದಾಪುರ, ಉಪಾಧ್ಯಕ್ಷ ಶಿವಪ್ಪ ಹಳಕಟ್ಟಿ, ಮಾನಪ್ಪ ಹಾವಿನಾಳ, ರಾಮಾಂಜನೇಯ, ಗೋವಿಂದಪ್ಪ ಕಟ್ಟಿಮನಿ, ಪಾಂಡುರಂಗ ಮಾಸ್ಟರ ಕೋನೇರ, ರಾಮಣ್ಣ ನಾಯ್ಕೋಡಿ, ಮಲ್ಲಣ್ಣ ದೊಡ್ಡಮನಿ, ಮಲ್ಲೇಶಿ ಮಮದಾಪುರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.