ಬಿಪಿಎಲ್ ಕಾರ್ಡ್ಗಾಗಿ ಯುವ ಕಾಂಗ್ರೆಸ್ ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ
ಸಿಂಧನೂರು: ಸರ್ಕಾರ ಬಡವರಿಗಾಗಿ ಮಾಡಿರುವ ಎಲ್ಲಾ ಯೋಜನೆಗಳು ಶ್ರೀಮಂತರ ಐಶಾರಾಮಿ ಬಂಗಲೆಗಳನ್ನು ಸೇರಿವೆ. ಸರ್ಕಾರ ಇದರ ಬಗ್ಗೆ ತಲೆ ಕೆಡಸಿಕೊಳ್ಳುತ್ತಿಲ್ಲ. ಕಡು ಬಡವರಿಗೆ ಸರಕಾರದಿಂದ ಕೊಡುವ ಬಿಪಿಎಲ್ ಕಾರ್ಡ್ಗಳು ಸಿಗದೆ, ಅವು ಉಳ್ಳವರ ಪಾಲಾಗಿವೆ, ಅಧಿಕಾರಿಗಳು ಸರಿಯಾಗಿ ಸರ್ವೆ ಮಾಡಿ ಅರ್ಹ ವ್ಯಕ್ತಿಗಳಿಗೆ ಬಿಪಿಎಲ್ ಕಾರ್ಡ್ಗಳನ್ನು ಕೊಡುವ ಮೂಲಕ ಬಡವರು ಅನ್ನಕ್ಕಾಗಿ ಹಾಹಾಕಾರ ಪಡುವುದನ್ನು ತಪ್ಪಿಸಬೇಕೆಂದು ಯುವ ಕಾಂಗ್ರೆಸ್ ಮುಖಂಡ ಬಸವರಾಜ ಹಿರೇಗೌಡರ್ ಹೇಳಿದರು.
ಕಾಳಸಂತೆ ಮಾರಾಟ: ಅವರು ಶುಕ್ರವಾರ ತಾಲೂಕ ಯುವ ಘಟಕ ವತಿಯಿಂದ ಅರ್ಹ ಫನಾನುಭವಿಗಳಿಗೆ ಶೀಘ್ರದಲ್ಲಿ ಬಿಪಿಎಲ್ ಕಾರ್ಡ್ ವಿತರಿಸಬೇಕೆಂದು ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ನೀಡಿ ಮಾತನಾಡುತ್ತಿದ್ದರು. ಪ್ರತಿ ತಿಂಗಳು ಬಡವರಿಗೆ ಸಿಗಬೇಕಾದ ಆಹಾರ ಧಾನ್ಯಗಳು ಮತ್ತು ಸಕ್ಕರೆ, ಸೀಮೆಎಣ್ಣೆ, ಮುಂತಾದವುಗಳು ಸಿಗದೆ, ಬಡವ ಬಡವನಾಗಿಯೇ ಉಳಿಯುತ್ತಿದ್ದಾನೆ. ಇವರಿಗೆ ಸಿಗಬೇಕಾದ ಪಡಿತರ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಇದನ್ನು ಅಧಿಕಾರಿಗಳ ತಡೆದು ಬಡವರ ಬದುಕಿಗೆ ಆಶ್ರಯವಾಗಬೇಕು. ಮುಖ್ಯ ಮಂತ್ರಿಗಳು ಬಡವರ ಕಣ್ಣೀರೊಸುವ ಕೆಲಸ ಮಾಡದೆ, ಮನ ಬಂದಂತೆ ಬಜೆಟ್ಟನ್ನು ಮಂಡಿಸಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಜೆಟ್ನ್ನು ಸಿಂಧನೂರಿನ ಯುವ ಘಟಕವೂ ಸಹ ಖಂಡಿಸುತ್ತದೆ ಎಂದರು.
ಪುರಸ್ಕೃತ-ತಿರಸ್ಕೃತ: ತಾಲೂಕಿನ ಗ್ರಾಮೀಣ ಪ್ರದೇಶ ಅರ್ಜಿದಾರರು, 10,972 ಇದ್ದು, ಇದರಲ್ಲಿ 7602 ಅರ್ಜಿಗಳು ತಿರಸ್ಕೃತಗೊಂಡಿವೆ. ಪೋಟೋ ಕಾರಣ ಕೇಳಿ 5 ಅರ್ಜಿಗಳು, 14 ಅರ್ಜಿಗಳು ತಿದ್ದುಪಡಿಗೆ, 10 ಅರ್ಜಿಗಳು ಅನುಮೋದನೆಗಾಗಿ ಇವೆ. 1,497 ಅರ್ಜಿಗಳು ಅನುಮೋದನೆ ಹಂತದಲ್ಲಿವೆ. ಬಿಪಿಎಲ್ ಕಾರ್ಡ್ ಕಾಯಂಗಾಗಿ 6926 ಅಜಿಗಳು ಬಂದಿದ್ದು, ಅವುಗಳಲ್ಲಿ 31 ಅರ್ಜಿಗಳು ತಿರಸ್ಕೃತಗೊಂಡಿವೆ. 6895 ಅರ್ಜಿಗಳು ಪುರಸ್ಕೃತಗೊಂಡಿವೆ. 4941 ಕಾರ್ಡ್ಗಳು ವಿತರಣೆಗೊಂಡಿರುತ್ತವೆ.
ನಗರದಲ್ಲಿ 14,346 ಅರ್ಜಿ ಬಂದಿದ್ದು, ಇವುಗಳಲ್ಲಿ 11321 ತಿರಸ್ಕೃತಗೊಂಡಿದ್ದು, 23 ಪೋಟೋಕ್ಕಾಗಿ, 6 ಅರ್ಜಿಗಳು ತಿದ್ದುಪಡೆಗಾಗಿ ತಡೆ ಹಿಡಿಯಲಾಗಿದೆ. 255 ಅರ್ಜಿಗಳು ಅನುಮೋದನೆ ಹಂತದಲ್ಲಿದ್ದು, 2737 ಕಾರ್ಡ್ದಾರರಿಗೆ ಕಾರ್ಡ್ಗಳನ್ನು ವಿತರಿಸಲಾಗಿದೆ. ಬಿಪಿಎಲ್, ಕಾಯಂಯತಿಗಾಗಿ ಒಟ್ಟು 6926 ಅರ್ಜಿಗಳು ಬಂದಿವೆ. ಅವುಗಳಲ್ಲಿ 31 ಅರ್ಜಿಗಳು ತಿರಸ್ಕೃತಗೊಂಡಿವೆ. 6895 ಅರ್ಜಿಗಳೂ ಪುರಸ್ಕೃತಗೊಂಡಿವೆ. ಇವುಗಳಲ್ಲಿ 4941 ಕಾರ್ಡ್ಗಳನ್ನು ಕಾರ್ಡ್ದಾರರಿಗೆ ವಿತರಿಸಲಾಗಿದೆ. ಇನ್ನು ಗ್ರಾಮೀಣ ಪ್ರದೇಶದ ಅರ್ಹ ಜನರಿಗೆ 7732 ಕಾರ್ಡ್ಗಳು ವಿತರಣೆಯಾಗಬೇಕಿದೆ. 1954 ಕಾಯಂ ಕಾರ್ಡ್ಗಳು ಅರ್ಹರಿಗೆ ತಲುಪಬೇಕಿದೆ.
ಸಲ್ಲದ ನೆಪಗಳು: ನಗರ ಪ್ರದೇಶದಲ್ಲಿ 12109 ಅರ್ಜಿದಾರರು ಬಿಪಿಎಲ್ ಕಾರ್ಡ್ನಿಂದ ವಂಚಿತರಾಗಿದ್ದಾರೆ. 1985 ಕಾಯಂ ಕಾರ್ಡ್ಗಳನ್ನು ಅರ್ಹರಿಗೆ ವಿತರಿಸಲಾಗಿದೆ. ಈ ಸಮಸ್ಯೆ ನಮ್ಮ ತಾಲೂಕಿಗಷ್ಟೇ ಅಲ್ಲ, ರಾಜ್ಯದ ಎಲ್ಲಾ ತಾಲೂಕಗಳಲ್ಲಿದೆ. ಅಧಿಕಾರಿಗಳು ಇಲ್ಲಸಲ್ಲದ ನೆಪ ಹೇಳುತ್ತಾ ಕಾಲದೂಡುತ್ತಿದ್ದು, ಪೋಟೋ ಸರಿ ಇಲ್ಲ, ನೀವು ಈ ಮೊದಲೇ ಬರಬೇಕಿತ್ತು ಮೊದಲಾದ ಸಂಬಂಧವಿಲ್ಲದ ಕಾರಣ ವೇಳಿ ಬಡವರನ್ನು ತಿಂಗಳು ಗಟ್ಟಲೆ ತಹಸೀ ಲ್ದಾರರ ಕಾರ್ಯಾಲಯಕ್ಕೆ ಅಲೆದಾಡಿಸುತ್ತಿದ್ದಾರೆ. ಕೊನೆಗೆ ಅವರೇ ಬೇಸತ್ತು ನಮಗೆ ಇದರ ಗೊಡವೇ ಬೇಡಪ್ಪವೆನ್ನುವ ವಾತಾವರಣವನ್ನು ಇಲ್ಲಿಯ ಅಧಿಕಾರಿಗಳು ಮಾಡುತ್ತಾರೆ.
ಬಡವರ ತಾಳ್ಮೆಯನ್ನು ಯಾವ ಅಧಿಕಾರಗಳೂ ಪರೀಕ್ಷಿಸಬಾರದು. ಸರ್ಕಾರ ನಿಮಗೆ ಕೊಡುವ ಸಂಬಳಕ್ಕಾಗಿಯಾದರೂ, ಸರಿಯಾಗಿ ಕೆಲಸ ಮಾಡಬೇಕು. ರೈತ ಒಂದು ಪಹಣಿಗಾಗಿ ವಾರಗಟ್ಟಲೆ ಅಲೆಯುವದನ್ನು ಅಧಿಕಾರಿಗಳು ತಪ್ಪಿಸಬೇಕು ಎಂದು ಖಾರವಾಗಿ ನುಡಿದರು. ತಾಲೂಕಿನಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಕಾಂಗ್ರೆಸ್ ಯುವ ಘಟಕ ಪ್ರತಿಭಟನೆ ಮುಂದಾಗುವುದು ಎಂದು ಸರ್ಕಾರವನ್ನು ಅಧಿಕಾರಿ ವರ್ಗದವರನ್ನು ಎಚ್ಚರಿಸಿದರು. ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಜಿಪಂ ಸದಸ್ಯ ಚಂದೂಸಾಬ ಮುಳ್ಳೂರು, ಜಿ.ಪಂ. ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಕೊಪ್ಪಳ ಲೋಕಸಭಾ ಯುವ ಘಟಕ ಅಧ್ಯಕ್ಷ ಬಸವರಾಜ ಬಾದರ್ಲಿ, ಗ್ರಾಮೀಣ ಘಟಕ ಅಧ್ಯಕ್ಷ ಜಾಫರ್ ಜಾಗೀರದಾರ್, ನಗರ ಘಟಕ ಅಧ್ಯಕ್ಷ ಮುರ್ತುಜಾ ಸಾಬ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

