ಗುಲ್ಬರ್ಗಾ

ಮತದಾರರೇ, ಎಚ್ಚರಿಕೆ ಹೆಜ್ಜೆ ಇಡಿ

Published On :

ಯಾದಗಿರಿ: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿಗೆ ಒಮ್ಮೆ ಅಧಿಕಾರ ಕೊಟ್ಟು ನೋಡಿದ್ದೀರಿ. ಮತ್ತೆ ಮೋಸ ಹೋಗದೆ ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕಾರ್ಯಕರ್ತರಿಗೆ ಸಲಹೆ ನೀಡಿದರು.
ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬುಧವಾರ 371ನೇ ಕಲಂ ಜಾರಿಗೆ ಕಾರಣರಾದ ಖರ್ಗೆ ಹಾಗೂ ಧರ್ಮಸಿಂಗ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಉತ್ತಮ ಅಭ್ಯರ್ಥಿಗಳ ಆಯ್ಕೆ ಮಾಡಿ: ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ಕಲಂ ಜಾರಿಗೊಳಿಸಲಾಗಿದೆ. ಕೇವಲ 3 ದಿನಗಳಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರವಾಗುವಂತೆ ನೋಡಿಕೊಳ್ಳಲಾಗಿದೆ. ಈಗ ಅದು ಕಾನೂನಾಗಿ ಜಾರಿಯಾದ ಮೇಲೆಯೂ ಅದರ ಅನುಷ್ಠಾನಕ್ಕೆ ವಿಶೇಷ ಪ್ರಯತ್ನ ಬೇಕಿದೆ.
ಆದ್ದರಿಂದ ಈ ಭಾಗದಿಂದ ಉತ್ತಮ ಅಭ್ಯರ್ಥಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಇಲ್ಲದಿದ್ದರೆ ಎಷ್ಟೇ ಅನುದಾನ ಬಂದರೂ ಲೂಟಿಯಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಈ ಭಾಗವನ್ನು ರಕ್ಷಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ಚುನಾವಣೆಯಲ್ಲಿ ನಿಮ್ಮ ಆಯ್ಕೆ ಸರಿಯಾಗಿರಲಿ ಎಂದು ಹೇಳಿದರು.
3 ದಶಕದ ಹೋರಾಟದ ಫಲ: ಸಂವಿಧಾನದ 371ನೇ ಕಲಂ ತಿದ್ದುಪಡಿಯಾಗಿರುವುದು ಐತಿಹಾಸಿಕ ನಿರ್ಣಯವಾಗಿದೆ. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ದೊರೆಯುವುದರ ಜತೆಗೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗಲಿದೆ. ಆದರೆ ಈ ಮಸೂದೆ ಜಾರಿಗೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದಕ್ಕೆ ಸುಮಾರು 3 ದಶಕಗಳ ಹೋರಾಟವಿದೆ. ಸಂವಿಧಾನದ ತಿದ್ದುಪಡಿ ಮೂಲಕ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಕೂಗು ಹಿಂದಿನಿಂದಲೇ ಇತ್ತು. ಅದಕ್ಕಾಗಿ ಪಕ್ಷ ಹಿಂದಿನಿಂದಲೂ ಪ್ರಯತ್ನಿಸುತ್ತಿತ್ತು.
ಗುಂಡೂರಾವ್ ಸರ್ಕಾರದಲ್ಲಿ ಧರ್ಮಸಿಂಗ್ ಸಚಿವರಾಗಿದ್ದಾಗ ಈ ಭಾಗಕ್ಕೆ ವಿಶೇಷ ಅನುದಾನ ನೀಡುವ ನಿರ್ಣಯ ಕೈಗೊಳ್ಳಲಾಗಿತ್ತು. ನಂತರ ಹೈಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. ಆದರೂ 371ನೇ ಕಲಂ ತಿದ್ದುಪಡಿ ಸಾಧ್ಯವಾಗಿರಲಿಲ್ಲ. ಈ ಭಾಗದ ಅಭಿವೃದ್ಧಿ ಸಹಕಾರ ನೀಡಬೇಕೆಂಬ ಭಾವನೆ ಕೇಂದ್ರ ಹಾಗೂ ರಾಜ್ಯದಿಂದಲೂ ವ್ಯಕ್ತವಾಗಲಿಲ್ಲ. ಆದ್ದರಿಂದ ಇಷ್ಟು ವರ್ಷ ಕಾಯಬೇಕಾಯಿತು ಎಂದು ಹೇಳಿದರು.
ಆಡ್ವಾಣಿ ಸ್ಪಂದಿಸಲಿಲ್ಲ: ಎನ್‌ಡಿಎ ಸರ್ಕಾರದ ಅವಧಿಯಲ್ಲಿ ರಾಜ್ಯದಿಂದ ಈ ಬಗ್ಗೆ ಒತ್ತಡ ಹಾಕಿದರೂ ಮನ್ನಣೆ ಸಿಗಲಿಲ್ಲ. ಎಲ್.ಕೆ. ಆಡ್ವಾಣಿ ಅವರು ರಾಜ್ಯಕ್ಕೆ ಪತ್ರ ಬರೆದು, ತಿದ್ದುಪಡಿ ಮಾಡಿದರೆ ದೇಶದ ಉಳಿದ ಭಾಗದಲ್ಲಿ ಜನ ದಂಗೆ ಏಳುತ್ತಾರೆ ಎಂದು ಹೇಳಿ ಎಸ್.ಎಂ. ಕೃಷ್ಣ ಅವರಿಗೆ ಪತ್ರ ಬರೆದರು. ಹೈಕ ಅಭಿವೃದ್ಧಿಗೆ ಬಿಜೆಪಿಗೆ ಕಾಳಜಿಯೇ ಇರಲಿಲ್ಲ. ನಾನು ಮತ್ತು ಧರ್ಮಸಿಂಗ್ ಸಂಸತ್ ಮೆಟ್ಟಿಲೇರಿದ ಮೇಲೆ ಮತ್ತೆ ಈ ಬಗ್ಗೆ ಹೋರಾಟ ಆರಂಭಿಸಿದೆವು. ಸೋನಿಯಾ ಗಾಂಧಿಯವರಿಗೆ ಮನವರಿಕೆ ಮಾಡಿಕೊಟ್ಟು ಮಸೂದೆ ತಿದ್ದುಪಡಿ ಪ್ರಕ್ರಿಯೆ ಆರಂಭಿಸಲಾಯಿತು.
ಇನ್ನೇನು ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗಬೇಕು ಎನ್ನುವಷ್ಟರಲ್ಲಿ ರಾಜಕೀಯ ಕಾರಣಕ್ಕಾಗಿ ರಾಜ್ಯದಿಂದಲೇ 3 ಬಾರಿ ಆಯ್ಕೆಯಾದ ವೆಂಕಯ್ಯ ನಾಯ್ಡು ಅವರು ತೊಡಕು ಎದುರಾಗುವಂತೆ ಮಾಡಿದರು. ಆದರೆ ಜನ ದಂಗೆ ಏಳಲು ಆರಂಭಿಸಿದಾಗ ಅನಿವಾರ್ಯವಾಗಿ ಬಿಜೆಪಿ ಸರ್ಕಾರ ತಿದ್ದುಪಡಿಗೆ ಒಪ್ಪಿಗೆ ನೀಡಿತು. ಎರಡೂ ಸದನಗಳಲ್ಲಿ ಬಹುಮತದಿಂದ ತಿದ್ದುಪಡಿ ಅಂಗೀಕಾರವಾಯಿತು. ಇದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ದೊಡ್ಡ ಯಶಸ್ಸು: ಬೀದರ್ ಸಂಸದ ಧರ್ಮಸಿಂಗ್ ಮಾತನಾಡಿ, 371ನೇ ಕಲಂ ತಿದ್ದುಪಡಿಯಿಂದ ಈ ಭಾಗದ ಅಭಿವೃದ್ಧಿಗೆ ನೆರವಾಗಲಿದೆ. ಇಲ್ಲಿಯ ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪ್ರಾತಿನಿಧ್ಯ ದೊರೆಯಲಿದ್ದು, ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯಲಿದೆ. ಇದು ಈ ಭಾಗದ ಜನರಿಗೆ ಸಿಕ್ಕ ದೊಡ್ಡ ಯಶಸ್ಸು. ಆದ್ದರಿಂದಲೇ ಇಂದು ನಾವು ಈ ಐತಿಹಾಸಿಕ ಕ್ಷಣವನ್ನು ಎಲ್ಲ ಹಬ್ಬಗಳಿಗಿಂತ ಹೆಚ್ಚು ಸಂಭ್ರಮದಿಂದ ಆಚರಿಸುವಂತಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಇದಕ್ಕೂ ನಗರದ ಮೈಲಾಪುರ ಅಗಸಿಯಿಂದ ವೇದಿಕೆವರೆಗೂ ಖರ್ಗೆ, ಧರ್ಮಸಿಂಗ್ ಹಾಗೂ ಇತರ ನಾಯಕರನ್ನು ವೇದಿಕೆವರೆಗೂ ಅದ್ಧೂರಿ ಮೆರವಣಿಗೆಯಲ್ಲಿ ಕರೆತರಲಾಯಿತು. ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ, ಬಾಬುರಾವ ಚಿಂಚನಸೂರ, ಕಮರುಲ್ ಇಸ್ಲಾಂ, ಮಾಜಿ ಎಂಎಲ್‌ಸಿ ಚೆನ್ನಾರೆಡ್ಡಿ ತುನ್ನೂರ, ರಾಜಾ ವೆಂಕಟಪ್ಪ ನಾಯಕ, ಮರೆಮ್ಮ ಶಾಣ್ಯಾನೋರ, ಶರಣಿಕಕುಮಾರ ದೋಖಾ, ಲಾಯಕ ಹುಸೇನ್ ಬಾದಲ್, ಶಂಶುಜ್ಜಮಾ, ಸಾಯಬಣ್ಣಾ ಬೋರಬಂಡಾ, ಮರೆಪ್ಪ ಬಿಳ್ಹಾರ, ಶ್ರೀನಿವಾಸರೆಡ್‌ಡಿ ಕಂದಕೂರ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಪದಾಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.