ಖಾಸಗೀಕರಣಕ್ಕೆ ಕೇಂದ್ರ ಹುನ್ನಾರ: ಚಂದ್ರಕಾಂತ (ಸುದ್ದಿ ಸಂಕ್ಷೇಪ)
ಗುಲ್ಬರ್ಗ: ಸಾರ್ವಜನಿಕ ಸಂಸ್ಥೆಗಳ ಸಾರಿಗೆ ಬಸ್ಗಳಿಗೆ ಪ್ರತಿ ಲೀಟರ್ಗೆ 11.95ರಷ್ಟು ಇಂಧನ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಹುನ್ನಾರ ನಡೆಸಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳ ಈಶಾನ್ಯ ವಲಯ ಗುಲ್ಬರ್ಗದ ಅಧ್ಯಕ್ಷ ಚಂದ್ರಕಾಂತ ಗದಗಿ ಮತ್ತು ಪ್ರಧಾನ ಕಾರ್ಯದರ್ಶಿ ರಶೀದ್ ಜಾವಿದ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 18ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ಇಂಧನ ಬೆಲೆಯನ್ನು ಹೆಚ್ಚಿಸಿ ಸಗಟು ಮಾರಾಟ ದರವನ್ನು ಪ್ರತಿ ಲೀಟರ್ಗೆ 11.95 ರಷ್ಟು ಮತ್ತು ಚಿಲ್ಲರೆ ಮಾರಾಟ ದರವನ್ನು 0.50 ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ ಎಂದರು.
ಹಣಕಾಸಿನ ತೊಂದರೆ: ಈ ರೀತಿಯಾದ ಅವೈಜ್ಞಾನಿಕ ಹೆಚ್ಚಳವು ಸಂಸ್ಥೆಯ ಆರ್ಥಿಕ ಸ್ಥಿತಿಗತಿಯ ಮೇಲೆ ಮಾರಣಾಂತಿಕ ಆಘಾತ ನೀಡಿ ಹಣಕಾಸಿನ ತೊಂದರೆಯಿಂದ ಕಾರ್ಮಿಕರಿಗೆ ಸಂಬಳವನ್ನು ಪಾವತಿಸಲು ಸಾಧ್ಯವಾಗದೇ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಾರುಕಟ್ಟೆ ಆಗ್ರಹಿಸಿ ಸಿಎಂಗೆ ಮನವಿ
ಜೇವರ್ಗಿ: ಪಟ್ಟಣದ ಹಳೆಯ ಬಸ್ ನಿಲ್ದಾಣದ ಸ್ಥಳವನ್ನು ಹಣ್ಣು ಮತ್ತು ತರಕಾರಿ ಮಾರಾಟ ಮಾಡುವುದಕ್ಕೆ ಮಾರುಕಟ್ಟೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ತಾಲೂಕು ಭಾಗವಾನ ಸಮಾಜ ಸೇವಾ ಸಂಘದ ವತಿಯಿಂದ ಬುಧವಾರ ಜೇವರ್ಗಿಗೆ ಭೇಟಿ ನೀಡಿದ್ದ ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಸಣ್ಣ ವ್ಯಾಪಾರಸ್ಥರು ದಿನನಿತ್ಯ ವ್ಯಾಪಾರ ಮಾಡಲು ಸ್ಥಳಾವಕಾಶಕ್ಕಾಗಿ ಪರದಾಡುವಂತಾಗಿದೆ. ತಾಲೂಕು ಪಂಚಾಯತಿ ಅಧೀನದಲ್ಲಿರುವ ಹಳೆಯ ಬಸ್ ನಿಲ್ದಾಣವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಮಾರುಕಟ್ಟೆಗೆ ವರ್ಗಾವಣೆ ಮಾಡಬೇಕು. ಆ ಸ್ಥಳವನ್ನು ಪಟ್ಟಣ ಪಂಚಾಯತಿಗೆ ಹಸ್ತಾಂತರಿಸಿ ಮಾರುಕಟ್ಟೆ ನಿರ್ಮಿಸಲು ಸೂಚಿಸಬೇಕೆಂದು ಭಾಗವಾನ ಸಮಾಜದಿಂದ ಮನವಿ ಪತ್ರ ಸಲ್ಲಿಸಲಾಯಿತು.
ರಾಷ್ಟ್ರೀಯ ಮತದಾರರ ದಿನಾಚರಣೆ
ಗುಲ್ಬರ್ಗ: ಭಾರತದ ಚುನಾವಣಾ ಆಯೋಗವು ಗುಲ್ಬರ್ಗದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜ.25 ರಂದು ಬೆಳಗ್ಗೆ 11ಕ್ಕೆ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಏರ್ಪಡಿಸಿದೆ. ಗುಲ್ಬರ್ಗ ಜಿಪಂ ಕಾರ್ಯನಿರ್ವಹಣಾ ಅಧಿಕಾರಿ ಪಲ್ಲವಿ ಆಕುರಾತಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಎನ್. ಸತೀಶಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಅವರು ಅಧ್ಯಕ್ಷತೆ ವಹಿಸುವರು.
ಆರೋಪಿಗೆ ಸಾದಾ ಶಿಕ್ಷೆ
ಗುಲ್ಬರ್ಗ: ನಗರದ ರೆಹಮತನಗರದ ಆರೋಪಿ ಸುಭಾಷ ತಂದೆ ಶರಣಪ್ಪ ಪೂಜಾರಿ ಮಾಡಿರುವ ಆರೋಪ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಜಿಎಂಎಫ್ಸಿ ಪ್ರಧಾನ ನ್ಯಾಯಾಧೀಶ ಪೃಥ್ವಿರಾಜ ವರ್ಣಿಕರ ಇವರು ಆರೋಪಿಗೆ ಒಂದು ವರ್ಷದ ಸಾದಾ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಜ.22 ರಂದು ಆದೇಶ ಹೊರಡಿಸಿದ್ದಾರೆ.
ಆರೋಪಿ ಸುಭಾಷ ತಂದೆ ಶರಣಪ್ಪ ಪೂಜಾರಿ ಈತನು ಕೋಠಾರಿ ಭವನದ ಎದುರುಗಡೆ ರಸ್ತೆಯ ಪಕ್ಕದಲ್ಲಿ ವಿಶ್ವರಾಧ್ಯ ತಂದೆ ಗುರಪ್ಪ ಸತ್ಯಂಪೇಟ್ ಇವರು ನಡೆದುಕೊಂಡು ಹೋಗುವಾಗ ಅವರ ತಲೆಗೆ ರಾಡಿನಿಂದ ಹೊಡೆದು ಭಾರಿ ಗಾಯ ಮಾಡಿ, ಚಿನ್ನಾಭರಣ ಲಪಟಾಯಿಸಿ ಓಡಿ ಹೋಗಿದ್ದು, ತನಿಖೆಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕಲಂ 394 ಭಾದಂಸ ಅಡಿಯಲ್ಲಿ ಮೇಲಿನಂತೆ ನ್ಯಾಯಾಲಯ ತೀರ್ಪು ನೀಡಿದೆ. ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ಸರ್ಕಾರದ ಪರ ವಾದ ಮಂಡಿಸಿದ್ದರು.
ಗುವಿವಿ; ನೂತನ ಕುಲಸಚಿವರ ಆಯ್ಕೆ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಪ್ರೊ. ಎ. ದಯಾನಂದ ಬುಧವಾರ ಅಧಿಕಾರ ಸ್ವೀಕರಿಸಿದರು.
ಸದ್ಯ ಕುಲಸಚಿವರಾಗಿ ಸೇವೆ ಸಲ್ಲುಸುತ್ತಿದ್ದ ಪ್ರೊ. ಎಸ್.ಎಲ್. ಹಿರೇಮಠ ಅವರು ದಯಾನಂದ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಪ್ರೊ. ಎಸ್.ಎಲ್. ಹಿರೇಮಠ ಅವರು ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಬುಧವಾರ ಉನ್ನತ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯವರಿಂದ ಈ ಆದೇಶ ಬಂದ ಹಿನ್ನೆಲೆಯಲ್ಲಿ ದಯಾನಂದ ಅವರು ಅಧಿಕಾರ ಸ್ವೀಕರಿಸಿದರು.
ಮೂಲ ಸೌಕರ್ಯ ಒದಗಿಸಲು ಒತ್ತಾಯ
ಚಿತ್ತಾಪುರ: ಇಲ್ಲಿನ ಸರ್ಕಾರಿ ಆಸ್ಪತ್ರೆ ಹಿಂದೆ ಇರುವ ರುದ್ರಭೂಮಿಯನ್ನು ಬ್ರಾಹ್ಮಣ, ಕ್ಷತ್ರಿಯ, ಮಾರ್ವಾಡಿ, ಮರಾಠಾ, ರಜಪೂತ, ವಿಶ್ವಕರ್ಮ, ಆರ್ಯ, ನೇಕಾರ ಸೇರಿದಂತೆ 19 ಜಾತಿ ಜನಾಂಗದವರು ಬಳಕೆ ಮಾಡುತ್ತಿದ್ದು, ಮೂಲ ಸೌಲಭ್ಯ ಪೂರೈಸಲು ಒತ್ತಾಯಿಸಿ ಉದ್ಯಮಿ ಸತ್ಯನಾರಾಯಣ ಬಜಾಜ್ ನೇತೃತ್ವದಲ್ಲಿ ಶಾಸಕ ವಾಲ್ಮೀಕಿ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು. ವಿಷ್ಣು ಜಿತುರೆ, ರವಿಂದ್ರ ತೇಲಕರ್, ಶ್ರೀರಾಮ ಜೆಇ, ಚಂದು ಜಿತುರೆ, ರಾಜು ಸುಗಂಧಿ, ರಾಜು ಘಾವರಿಯಾ, ಗುಂಡಪ್ಪ ಮರಾಠ, ಅಶ್ವಿನ್ ಗುಜರಾತಿ, ರವಿಂದ್ರ ಎಚ್, ಅಶೋಕ ಪವಾರ ಇತರರು ಹಾಜರಿದ್ದರು.
ನಾಳೆ ಸಾಂಸ್ಕೃತಿಕ ಕಾರ್ಯಕ್ರಮ
ಗುಲ್ಬರ್ಗ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜ.26ರಂದು ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಗುರು ಪುಟ್ಟರಾಜ ಸಂಗೀತ ವಿದ್ಯಾಲಯದವರಿಂದ ದೇಶಭಕ್ತಿ ಗೀತೆಗಳು. ಶಹಬಾದ್ನ ಸುನೀತಾ ಗಣೇಶ ಉಪಾಧ್ಯಾಯ ಮತ್ತು ತಂಡದವರಿಂದ ಸಮೂಹ ನೃತ್ಯ ಮತ್ತು ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆಗಳು ಮತ್ತು ಸಮೂಹ ನೃತ್ಯ ಜರುಗಲಿವೆ.
ಅರ್ಜಿ ಆಹ್ವಾನ
ಗುಲ್ಬರ್ಗ: ಪ್ರಥಮ ವರ್ಷ ಬಿಎಸ್ಸಿ ನರ್ಸಿಂಗ್, ಜಿಎನ್ಎಂ ನರ್ಸಿಂಗ್, ಪ್ಯಾರಾ ಮೆಡಿಕಲ್ ಕೋರ್ಸುಗಳಲ್ಲಿ 2012-13ನೇ ಸಾಲಿಗೆ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ಅಭ್ಯರ್ಥಿಳಿಗೆ 12 ಸಾವಿರದಿಂದ 15 ಸಾವಿರವರೆಗು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆರ್ಥಿಕ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ. ಜ.30ರೊಳಗಾಗಿ ಪ್ರಾಂಶುಪಾಲರ ಮುಖಾಂತರ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗುಲ್ಬರ್ಗ ಇವರಿಗೆ ಸಲ್ಲಿಸಬೇಕು. ಪ್ರಾಂಶುಪಾಲರು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಪಡೆದು ದಾಖಲಾತಿಗಳೊಂದಿಗೆ 30ರೊಳಗಾಗಿ ಕಚೇರಿಗೆ ಸಲ್ಲಿಸಬೇಕು.
'ಪರೀಕ್ಷೆಗೆ ಸಿದ್ಧರಾಗಿ'
ಗುಲ್ಬರ್ಗ: ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದ ಡಾ. ಅಂಬೇಡ್ಕರ್ ಸಮುದಾಯ ಭವನದಲ್ಲಿ ಇತ್ತೀಚಿಗೆ ನಡೆದ 'ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ' ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ಈ ಕಾರ್ಯಕ್ರಮವನ್ನು ಅರಳಗುಂಡಗಿ ತಾಪಂ ಸದಸ್ಯ ರೇವಣಸಿದ್ದಪ್ಪ ಕಮಾನಮನಿ ಉದ್ಘಾಟಿಸಿದರು. ಮಕ್ಕಳಲ್ಲಿರುವ ಭಯದ ವಾತಾವರಣವನ್ನು ಹೋಗಲಾಡಿಸಲು ಪೂರ್ವಭಾವಿಯಾಗಿ ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ ಕಾರ್ಯಕ್ರಮ ಯಶಸ್ವಿಯಾಯಿತು.
ಗಣರಾಜ್ಯೋತ್ಸವ
ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ಜ.26ರಂದು ಬೆಳಗ್ಗೆ 7.50ಕ್ಕೆ 64ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗುವುದು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಶರಣಪ್ಪ ವಿ.ಪೊಲೀಸ್ ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

