ಕ್ರೀಡಾಂಗಣ ಸೌಲಭ್ಯ ಕಲ್ಪಿಸಲು ಮನವಿ
ಯಾದಗಿರಿ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಟದ ಮೈದಾನದ ಕೊರತೆಯಿದ್ದು ಮಂಜೂರಾತಿ ಮಾಡುವಂತೆ ಒತ್ತಾಯಿಸಿ ಕನಕ ಯುವ ಸೇನೆ ಕಾರ್ಯಕರ್ತರು ಕ್ರೀಡಾ ಇಲಾಖೆ ಸಚಿವ ಅಭಯಚಂದ್ರ ಜೈನ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಭೇಟಿಯಾಗಿ ಮನವಿ ಸಲ್ಲಿಸಿರುವ ಕಾರ್ಯಕರ್ತರು, ಕ್ರೀಡಾಂಗಣದ ತೊಂದರೆ ಪರಿಣಾಮ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭೆಗಳು ಇವೆ. ಆದರೆ ಅವುಗಳಿಗೆ ಸೂಕ್ತ ವೇದಿಕೆ ದೊರೆಯದ ಹಿನ್ನೆಲೆಯಲ್ಲಿ ಅವರ ಪ್ರತಿಭೆಗೆ ಬೆಲೆ ಇಲ್ಲದಂತಾಗಿದೆ. ಇದರಿಂದಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎನ್ನುವ ಮಕ್ಕಳ ಆಕಾಂಕ್ಷೆ ಈಡೇರುತ್ತಿಲ್ಲ. ಒಂದೆಡೆ ಆಟದ ಮೈದಾನ ಸಮಸ್ಯೆ ಇದ್ದರೆ ಮತ್ತೊಂದೆಡೆ ಕೆಲವರು ಕ್ರೀಡಾಂಗಣಗಳನ್ನು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಜಾನುವಾರುಗಳನ್ನು ಕಟ್ಟುತ್ತಿದ್ದಾರೆ. ಕೂಡಲೇ ತೆರವುಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಉತ್ತರ ಕರ್ನಾಟಕ ಕನಕ ಯುವಸೇನೆ ಅಧ್ಯಕ್ಷ ರಂಗನಗೌಡ ಪಾಟೀಲ ದೇವಿಕೇರಿ, ವರ್ತೂರ ಯುವ ಸೇನೆ ಜಿಲ್ಲಾ ಪ್ರ.ಕಾರ್ಯದರ್ಶಿ ರವಿ ರಾಜಾಪುರ, ನಿಂಗಣ್ಣ ಜಡಿ, ಯಂಕಣ್ಣ ಇತರರಿದ್ದರು.
'ಎಸ್ಸಿ ಪಟ್ಟಿಯಿಂದ
ಕೈಬಿಟ್ಟರೆ ಹೋರಾಟ'
ಯಾದಗಿರಿ: ಸರ್ಕಾರದಿಂದ ಸಮುದಾಯಕ್ಕೆ ಸಿಗಬಹುದಾದ ಸೌಲಭ್ಯಗಳನ್ನು ನ್ಯಾಯಯುತವಾಗಿ ಪಡೆದುಕೊಳ್ಳಬೇಕಾದರೆ ಸಂಘಟನೆ ಅವಶ್ಯ. ಅಲ್ಲದೇ ಒಳಮೀಸಲಾತಿ ಪಟ್ಟಿಯಿಂದ ಸಮಾಜವನ್ನು ಕೈಬಿಟ್ಟರೆ ಉಗ್ರ ಹೋರಾಟ ಅನಿವಾರ್ಯ ಎಂದು ಬಂಜಾರ ಸಮಾಜದ ಮುಖಂಡ ಕಿಶನ್ ರಾಠೋಡ್ ಹೇಳಿದರು. ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಭೋವಿ, ಬಂಜಾರ, ಕೊರಮ ಸಮುದಾಯಗಳ ಚಿಂತನ ಸಭೆಯಲ್ಲಿ ಮಾತನಾಡಿ, ಸರ್ಕಾರ ಒಳ ಮೀಸಲಾತಿ ಪಟ್ಟಿಯಿಂದ ಬಂಜಾರ, ಭೋವಿ, ಕೊರಮ ಸೇರಿದಂತೆ ಇನ್ನಿತರ ಸಮುದಾಯಗಳನ್ನು ಕೈಬಿಡುವ ಚಿಂತನೆ ನಡೆಸಿದ್ದು ಅವೈಜ್ಞಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿಗೂ ಸೌಲಭ್ಯ ವಂಚಿತ: ಇಂದಿಗೂ ಬಂಜಾರ ಸಮುದಾಯದವರು ಗ್ರಾಮೀಣ ಭಾಗದಲ್ಲಿ ವಾಸಿಸಲು ಆಗುತ್ತಿಲ್ಲ. ತಾಂಡಾಗಳಲ್ಲಿ ವಾಸ ಮಾಡುತ್ತಿರುವ ನಮ್ಮ ಸಮುದಾಯಕ್ಕೆ ಸರ್ಕಾರ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ. ಪರಿಸ್ಥಿತಿ ಹೀಗಿದ್ದರೂ ನಮ್ಮ ಸಮುದಾಯವನ್ನು ಒಳಮೀಸಲಾತಿಯಿಂದ ಕೈಬಿಟ್ಟರೆ ನಮ್ಮ ಗತಿ ಏನು ಎಂದು ಅವರು ಪ್ರಶ್ನಿಸಿದರು. ಭೋವಿ ಸಮಾಜದ ಮುಖಂಡ ಲಗಮಣ್ಣಾ ಮುಂಡರಗಿ ಮಾತನಾಡಿ, ಭೋವಿ ಸಮಾಜ ಇನ್ನೂ ಆರ್ಥಿಕವಾಗಿ ಮುಂದೆ ಬಂದಿಲ್ಲ. ನಮ್ಮ ಸಮಾಜದಲ್ಲಿನ ಯುವಕರಿಗೆ ಇನ್ನೂ ಉನ್ನತ ಶಿಕ್ಷಣ ಮರೀಚಿಕೆಯಾಗಿ ಉಳಿದಿದೆ ಎಂದರು. ಜನಾರ್ಧನ ರಾಠೋಡ್ ಮಾತನಾಡಿದರು. ದೇವರಾಜ ನಾಯಕ್, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಮಾನಸಿಂಗ್ ಚವ್ಹಾಣ, ಅಂಬ್ರೀಶ, ನಾಗಪ್ಪ ಬೆನಕಲ್, ಸುರೇಶ ಅಲ್ಲಿಪುರ, ರವಿ ಮುದ್ನಾಳ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

