ಬೋಧಗಯಾ ಪ್ರಕರಣ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಆಳಂದ, ಜು.8
ಶಾಂತಿದೂತನ ನೆಲವೆಂದೇ ಹೆಸರುವಾಸಿಯಾದ ಬೌದ್ಧರ ಪವಿತ್ರ ಕ್ಷೇತ್ರ ಬೋಧಗಯಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣವನ್ನು ಖಂಡಿಸಿ ಇಲ್ಲಿನ ದಲಿತ ನೌಕರರ ಸಂಘ ಹಾಗೂ ದಲಿತ ಒಕ್ಕೂಟದ ಆಶ್ರಯದಲ್ಲಿ ಸೋಮವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಒಕ್ಕೂಟದ ಅಧ್ಯಕ್ಷ ದಯಾನಂದ ಶೇರಿಕಾರ್ ಮತ್ತು ನೌಕರರ ಸಂಘದ ಮುಖಂಡ ರಮೇಶ ಮಾಡಿಯಾಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಇಡೀ ಜಗತ್ತಿಗೆ ಶಾಂತಿ ಸಂದೇಶ ಬೋಧಿಸಿದ ಬೌದ್ಧಧರ್ಮದ ಅತ್ಯಂತ ವೈಜ್ಞಾನಿಕ ಮತ್ತು ಮಾನವೀಯ ಧರ್ಮವಾಗಿದೆ. ಮಾನವೀಯ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಸಾಮರಸ್ಯಕ್ಕೆ ಬೆಲೆ ಕೊಟ್ಟ ಧರ್ಮವಾಗಿದೆ. ವಿಶ್ವ ಮಾನವೀಯತೆಗೆ ಬೆಲೆ ಕೊಟ್ಟ ಬುದ್ಧನ ತತ್ವಸಿದ್ಧಾಂತಗಳನ್ನು ನಾಶಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಇದೊಂದು ಹೇಯ ಕೃತ್ಯ: ಇದು ವಿಶ್ವಮಾನವತೆಗೆ, ಸಮಾನತೆಗೆ ಮಾಡಿದ ಅವಮಾನ ಮತ್ತು ಹೇಯವಾದ ಕೃತ್ಯವಾಗಿದೆ. ಕಾರಣ ಈ ಕೃತ್ಯದ ಹಿಂದೆ ಯಾರೇ ಇದ್ದರೂ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿರುವ ಬೌದ್ಧ ವಿಹಾರಗಳಿಗೆ ಮತ್ತು ಸ್ತೂಪಗಳಿಗೆ ಇಂತಹ ಅವಘಡ ಸಂಭವಿಸದಂತೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರವನ್ನು ತಹಸೀಲ್ದಾರ್ ಪರ ಶಿರಸ್ತೇದಾರ ಶರಣಪ್ಪ ಅವರಿಗೆ ಮುಖಂಡರು ಸಲ್ಲಿಸಿದರು.
ನ್ಯಾಯವಾದಿ ದಿಲೀಪ ಕ್ಷಿರಸಾಗರ, ತುಕಾರಾಮ ಹೆಬಳಿ, ರಾಮಚಂದ್ರ ಮಾಳಗೆ, ದತ್ತಪ್ಪ ಹೊನ್ನಳ್ಳಿ, ಬಾಬುರಾವ ಅರುಣೋದಯ, ಭೋಜರಾಜ ಜುಭ್ರೆ, ಕೃಷ್ಣಾ ಸಾಲೇಗಾಂವ, ಆನಂದ ನಡಗೇರಿ, ದಶರತ ವಾಡೇಕರ್, ಸಂತೋಷ ಶಿಂಧೆ, ಪಾಂಡುರಂಗ ಮೊದಲೆ, ತುಕಾರಾಮ ಸಸ್ತಾಪುರೆ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಖಂಡನೆ(ಜೇವರ್ಗಿ ವರದಿ): ಬುದ್ಧಗಯಾದಲ್ಲಿ ನಡೆದ ಬಾಂಬ್ ಸ್ಫೋಟ ಕ್ರಮವನ್ನು ಖಂಡಿಸಿರುವ ಜೇವರ್ಗಿ ತಾಲೂಕು ಕಾಂಗ್ರೆಸ್ ಪಕ್ಷದ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಶ್ರೀಮಂತ ಧನ್ನಕರ್ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಾನಿಯಾದ ದೇಗುಲವನ್ನು ಪುನರ್ ನಿರ್ಮಾಣಗೊಳಿಸಬೇಕು ಎಂದು ಧನ್ನಕರ್ ಮನವಿ ಮಾಡಿದ್ದಾರೆ.
ಕೆಎಸ್ಎಸ್ಡಿ ಜಿಲ್ಲಾ ಘಟಕ ಖಂಡನೆ
ಗುಲ್ಬರ್ಗ: ಬಿಹಾರದ ಬೋಧಗಯಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟ ಪ್ರಕರಣವನ್ನು ಕೆಎಸ್ಎಸ್ಡಿ ಜಿಲ್ಲಾ ಘಟಕ ಖಂಡಿಸಿದೆ.
ಬೌದ್ಧ ಧರ್ಮದ ಬುದ್ಧರ ಧಾರ್ಮಿಕ ಕೇಂದ್ರ ಬೋಧಗಯಾದ ಮಹಾಬೋಧಿ ಬುದ್ಧ ವಿಹಾರದಲ್ಲಿ ಸರಣಿ ಬಾಂಬ್ ಸ್ಪೋಟ ನಡೆಸಿದವರನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪತ್ತೆ ಹಚ್ಚಬೇಕು ಮತ್ತು ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿಲಿಂದ ಕಣಮುಸ ಒತ್ತಾಯಿಸಿದ್ದಾರೆ.
ಬುದ್ಧ ವಿಹಾರಕ್ಕೆ ಬಿಗಿ ಭದ್ರತೆ
ಗುಲ್ಬರ್ಗ: ನಗರದ ಹೊರ ವಲಯದಲ್ಲಿರುವ ಬುದ್ಧ ವಿಹಾರಕ್ಕೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಭದ್ರತೆಗಾಗಿ 2 ಸಿಪಿಐ, 8 ಪಿಎಸ್ಐ, 10 ಎಎಸ್ಐ, 70 ಜನ ಮುಖ್ಯಪೇದೆ ಮತ್ತು ಪೇದೆ, 12 ಮಹಿಳಾ ಸಿಬ್ಬಂದಿ, 2 ಡಿಆರ್ ಮತ್ತು ಕೆಎಸ್ಆರ್ಪಿ ತುಕ್ಕಡಿಯನ್ನು ನಿಯೋಜಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರೀಯದಳ ವಿಹಾರ ಮತ್ತು ವಿಹಾರದ ಸುತ್ತಮುತ್ತ ತಪಾಸಣೆ ನಡೆಸಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

