ಅಂಗನವಾಡಿ ನೌಕರರಿಗೆ ಸೌಲಭ್ಯ: ಸ್ವಾಗತ
ಯಾದಗಿರಿ: ಅಂಗನವಾಡಿ ನೌಕರರ ಗೌರವಧನ ಹೆಚ್ಚಳ, ಮಕ್ಕಳಿಗೆ ಹಾಲು ಮತ್ತು ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದಾಗಿ ರಾಜ್ಯ ಬಜೆಟ್ನಲ್ಲಿ ಪ್ರಕಟಿಸಿರುವ ಸರ್ಕಾರದ ಕ್ರಮವನ್ನು ಆಲ್ ಇಂಡಿಯಾ ಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿಯು ಸ್ವಾಗತಿಸಿದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಉಮಾಶ್ರೀ ಅವರನ್ನು ಸಂಘವು ಅಭಿನಂದಿಸಿದೆ.
ಸಕರಾತ್ಮಕ ಸ್ಪಂದನೆ: ಈ ಕುರಿತು ಹೇಳಿಕೆ ನೀಡಿರುವ ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ, ರಾಜ್ಯ ಬಜೆಟ್ಗೆ ಕೆಲವು ದಿನಗಳ ಮುನ್ನ ಸಂಘದ ರಾಜ್ಯ ಪದಾಧಿಕಾರಿಗಳ ನಿಯೋಗವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಉಮಾಶ್ರೀ ಅವರನ್ನು ವಿಧಾನಸೌಧದ ಅವರ ಕಚೇರಿಯಲ್ಲಿ ಭೇಟಿ ಮಾಡಿ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿತ್ತು. ಸಕರಾತ್ಮಕವಾಗಿ ಸ್ಪಂದಿಸಿದ್ದ ಅವರು ಹಂತಹಂತವಾಗಿ ನೌಕರರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಅಂದು ನಿಯೋಗಕ್ಕೆ ಭರವಸೆ ನೀಡಿದ್ದರು.
ಸ್ವಾಗತ: ಅದರಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕ್ರಮವಾಗಿ ರು. 500 ಮತ್ತು ರು. 250 ಗೌರವಧನವನ್ನು ಹೆಚ್ಚಿಸಲಾಗಿದೆ. ಅಲ್ಲದೇ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಕೂಡಲೇ ಶುದ್ಧವಾದ ಕುಡಿವ ನೀರು ಒದಗಿಸುವುದಾಗಿ ಮತ್ತು ಅಂಗನವಾಡಿ ಕೇಂದ್ರಗಳ ಎಲ್ಲಾ ಮಕ್ಕಳಿಗೆ ಪೌಷ್ಟಿಕ ಆಹಾರದ ಜತೆಗೆ ಹಾಲು ವಿತರಿಸುವುದಾಗಿ ಪ್ರಕಟಿಸಿದ್ದು, ಇದನ್ನು ಸಂಘ ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ. ಅಂಗನವಾಡಿ ನೌಕರರು, ಅಂಗನವಾಡಿ ಕೇಂದ್ರಗಳು ಮತ್ತು ಅಂಗನವಾಡಿ ಮಕ್ಕಳ ಕುರಿತು ಸರ್ಕಾರವು ಕೈಗೊಂಡಿರುವ ಈ ಕ್ರಮವು ಸ್ವಾಗತಾರ್ಹ. ಅಂಗನವಾಡಿ ಕೇಂದ್ರಗಳಿಗೆ ಉತ್ತಮ ಸೌಕರ್ಯಗಳು, ಮಕ್ಕಳಿಗೆ ಸಮವಸ್ತ್ರ ಸಹಿತ ಇನ್ನೂ ಉತ್ತಮ ಆಹಾರ ಮತ್ತು ಆಟೋಟ ಸಾಮಗ್ರಿಗಳು , ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ನೌಕರರಿಗೆ ಪಾಂಡಿಚೇರಿ ಮಾದರಿಯಲ್ಲಿ ರು. 15 ಸಾವಿರ ಹಾಗೂ ರು. 12 ಸಾವಿರ ಮಾಸಿಕ ಗೌರವಧನ, ಆರೋಗ್ಯ ನೆರವು ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಸೋಮಶೇಖರ್ ಆಗ್ರಹಿಸಿದ್ದಾರೆ.
ಚಿಮೂ ಹೇಳಿಕೆಗೆ
ಕಸಾಪ ಬೆಂಬಲ
ಯಾದಗಿರಿ: ದಾಸ್ಯದ ಸಂಕೇತವಾಗಿರುವ ಹೈ-ಕ ಹೆಸರನ್ನು ಬದಲಿಸಿ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಬೇಕೆಂಬ ಸಂಶೋಧಕ ಡಾ.ಚಿದಾನಂದಮೂರ್ತಿ ಅವರ ಹೇಳಿಕೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕ ಬೆಂಬಲಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಹೆಸರು ಸೂಕ್ತವಾದದ್ದು. ಶೀಘ್ರದಲ್ಲಿ ಕಲ್ಯಾಣ ಕರ್ನಾಟಕ ಹೆಸರನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

