ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಪದ್ಧತಿ ಉಲ್ಲಂಘನೆ; ಸಮಿತಿ ರಚನೆಗೆ ಆಗ್ರಹ
ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಬೆಳೆ ಪದ್ಧತಿ ಉಲ್ಲಂಘನೆಯಾಗುತ್ತಿದ್ದು, ಶೇ.80ರಷ್ಟು ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಉಳುಮೆಗೆ ಯೋಗ್ಯವಾದ ಭೂಮಿ ಉಳಿಯದಂಥ ಪರಿಸ್ಥಿತಿ ನಿರ್ಮಾಣವಾಗುವ ಭೀತಿಯುಂಟಾಗಿದೆ. ಆದ್ದರಿಂದ ಕೃಷಿ ತಜ್ಞರ ಸಮಿತಿ ರಚಿಸಿ ಭೂಮಿ ಉಳಿಸಬೇಕೆಂದು ಮುಖ್ಯಮಂತ್ರಿಗಳಿಗೆ ರೈತಮುಖಂಡ ಅಶೋಕರಾವ್ ಮೂಡಬೂಳ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಹಿಂದಿನ ಸರ್ಕಾರದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಎ. ಪಾಟೀಲ ಅವರ ನೇತೃತ್ವದಲ್ಲಿ ಕೃಷಿ ಅಚ್ಚುಕಟ್ಟು ಪ್ರದೇಶದ ಬೆಳೆ ಪದ್ಧತಿ ನಿಯಮಗಳನ್ನು ಪಾಲಿಸಲು ಮತ್ತು ಈ ಭಾಗದಲ್ಲಿ ಬತ್ತದ ಬೆಳೆಗಳನ್ನು ಬಿಟ್ಟು ಬೇರೆ ಅಲ್ಪಾವಧಿ ಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ರೈತರಿಗೆ ಮನವರಿಕೆ ಮಾಡಲು ಆಯೋಗ ನೇಮಿಸಿತ್ತು.
ಆ ನಿಯೋಗವು ನೀಡಿದ ವರದಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಭೂಮಿ ಹಾಳಾಗುವ ಮೊದಲೇ ಸರ್ಕಾರ ತುರ್ತು ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವರದಿ ಮಂಡನೆ: ಡಾ.ಎಸ್.ಎ. ಪಾಟೀಲ ಅವರ ವರದಿಯಲ್ಲಿ ಈ ಭಾಗದಲ್ಲಿ ಬತ್ತದ ಬೆಳೆಯಿಂದ ಭೂಮಿಯ ಫಲಪತ್ತತೆ ಕಡಿಮೆಯಾಗುತ್ತಿರುವ ಬಗ್ಗೆ ರೈತರೊಂದಿಗೆ ಚರ್ಚಿ ಮಾಡಿ ತಮ್ಮ ವರದಿಯಲ್ಲಿ ಮಂಡಿಸಿದ್ದಾರೆ. ಈ ಭಾಗದಲ್ಲಿ ಬತ್ತ ನಿಷೇಧಿತ ಬೆಳೆಯಾಗಿದ್ದು, ಬಹುತೇಕ ರಾಜಕಾರಣಿಗಳ ಬೆಂಬಲದಿಂದ ಬತ್ತದ ಬೆಳೆಗಾರರಿಗೆ ಅಷ್ಟೇ ಅಲ್ಲದೆ ಈ ಭಾಗದ ಭೂಮಾಲೀಕರು ತಮ್ಮ ಭೂಮಿಯನ್ನು ಆಂಧ್ರ ರೈತರಿಗೆ ಲೀಜಿಗೆ ಕೊಟ್ಟು ಬತ್ತ ಬೆಳೆದು ಆದಾಯ ಗಳಿಸುತ್ತಿದ್ದಾರೆ. ಇದರಿಂದ ಮುಂದೆ ಭೂಮಿ ಬಂಜರಾಗುವ ಸ್ಥಿತಿಯಿದ್ದು, ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಕಪ್ಪು ಎರೆ ಮಣ್ಣು ಇರುವುದರಿಂದ ಬತ್ತದ ಬೆಳೆಯಿಂದ ಭೂಮಿ ಜಿಗಿ ಮತ್ತು ಉಪ್ಪು ಹರಡುವುದರಲ್ಲಿ ಸಂಶಯವಿಲ್ಲ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.
ಲಾಭ ಆಂಧ್ರದ ಪಾಲು: ಜಲಾಶಯದ ವ್ಯಾಪ್ತಿಯ 6 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಈಗಾಗಲೇ 6233 ಹೆಕ್ಟೇರ್ ಭೂಮಿ ಸವಳಾಗಿದ್ದು, ಆಂಧ್ರದಿಂದ ವಲಸೆ ಬಂದ ರೈತರಿಂದ ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ಇಲ್ಲಿ ಬೆಳೆದ ಬತ್ತದ ಲಾಭ ರಾಜ್ಯ ಸರ್ಕಾರಕ್ಕೆ ತಿಳಿಯುತ್ತಿಲ್ಲ. ಇಲ್ಲಿಯ ಎಪಿಎಂಸಿಗಳಲ್ಲಿ ಬತ್ತದ ಮಾರಾಟ ಮಾಡುವುದಿಲ್ಲ.
ಇದರ ಲಾಭವೆಲ್ಲ ನೆರೆಯ ಆಂಧ್ರ ಪ್ರದೇಶದ ಪಾಲಾಗುತ್ತಿದೆ. ಈಗಾಗಲೇ ಪ್ರತಿಯೊಂದು ಕಾಲುವೆಗಳ ಮೇಲ್ಭಾಗದ ರೈತರು ಕೆಳ ಭಾಗದ ರೈತರು ಎಂದು ವಿಂಗಡಣೆ ಆಗಿದ್ದು, ನೀರಾವರಿ ಕಚೇರಿಗಳ ಮೇಲೆ ದಾಳಿ ಮಾಡಿ ಗೇಟುಗಳನ್ನು ಮುರಿದು ಮೆಲ್ಭಾಗದ ರೈತರು ಬತ್ತದ ಬೆಳೆಗೆ ನೀರು ಪಡೆಯುತ್ತಿದ್ದಾರೆ.
ಅಧಿಕಾರಿಗಳ ಕಣ್ಣು ಮುಂದೆಯೇ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಆಕ್ರಮವಾಗಿ ಬತ್ತ ನಾಟಿ ಮಾಡಲಾಗುತ್ತಿದೆ. ಅದರೂ ಅಧಿಕಾರಿಗಳು ಏನೂ ಮಾಡದ ಪರಸ್ಥಿತಿಯಲ್ಲಿ ಅಸಹಾಯಕರಾಗಿದ್ದಾರೆ ಎಂದು ಅಶೋಕರಾವ್ ಮೂಡಬೂಳ ತಿಳಿಸಿದ್ದಾರೆ.
ಉಲ್ಲಂಘನೆ: ನಾರಾಯಣಪುರ ಎಡದಂಡೆ ಮುಖ್ಯಕಾಲುವೆಯಲ್ಲಿ ಸರಾಸರಿ 6 ಸಾವಿರದಿಂದ 7 ಸಾವಿರ ಕ್ಯೂಸೆಕ್ ನೀರು ಹರಿಯುತ್ತದೆ. ಇದರಲ್ಲಿ ಶೇ.80ರಷ್ಟು ನೀರು ಬತ್ತದ ಬೆಳೆಗೆ ಹೋಗುತ್ತದೆ. ಈ ಪ್ರದೇಶದಲ್ಲಿ ಬತ್ತದ ಬೆಳೆ ನಿಷೇಧವಿದ್ದು, ಆದರೂ ವ್ಯಾಪಕ ಉಲ್ಲಂಘನೆ ನಡೆದಿದೆ.
ನಾರಾಯಣಪುರ, ಆಲಮಟ್ಟಿ ಕಾಲುವೆಗಳಿಂದ ಹರಿಯುವ ನೀರನಲ್ಲಿ ಶೇ.80ರಷ್ಟು ಬತ್ತದ ಬೆಳೆ ಪಾಲಾಗುವುದರಿಂದ ಉಳಿದ ಬೆಳೆಗಳಾದ ಹತ್ತಿ, ತೊಗರಿ, ಮೆಣಸಿನಕಾಯಿ. ಮೆಕ್ಕೆಜೋಳ, ಬಿಳಿಜೋಳದ ಬೆಳೆಗಳಿಗೆ ಹಾಗೂ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ಸಿಗದಂತಾಗಿದೆ. ಆದ್ದರಿಂದ ಬತ್ತದ ಬೆಳೆಯಿಂದ ಭೂಮಿಯ ಫಲಪತ್ತತೆ ಮೇಲೆ ಆಗುವ ದುಷ್ಪರಿಣಾಮಗಳನ್ನು ಕಂಡುಕೊಳ್ಳಬೇಕು. ಅದಕ್ಕಾಗಿ ತಜ್ಞರ ಸಮತಿ ರಚಿಸಬೇಕು. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಭೂಮಿ ಉಳಿಸಲು ಪರಿಹಾರ ಕಂಡುಕೊಳ್ಳಲು ಅದನ್ನು ಜಾರಿಗೊಳಿಸಬೇಕು ಎಂದು ಮಲ್ಲಾಬಾದಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

