ನಿರಾವರಿ ಸಲಹಾ ಸಮಿತಿ; ಪ್ರಾತಿನಿಧ್ಯಕ್ಕೆ ರೈತ ಸಂಘ ಮನವಿ
ಯಾದಗಿರಿ: ಸರ್ಕಾರ ನೀರಾವರಿಗೊಳಪಟ್ಟಿರುವ ಪ್ರದೇಶದ ರೈತರ ಹಿತ ಕಾಯಲು ನೀರಾವರಿ ಸಲಹಾ ಸಮಿತಿ ರಚಿಸಿದ್ದರೂ ಜಿಲ್ಲೆಯ ಯಾವೊಬ್ಬ ರೈತಪರ ಹೋರಾಟಗಾರರನ್ನು ಅದರಲ್ಲಿ ಸೇರ್ಪಡೆಗೊಳಿಸಿಲ್ಲ. ಆದ್ದರಿಂದ ಸಮಿತಿಯಲ್ಲಿ ರೈತರಿಗೆ ಪ್ರಾತಿನಿಧ್ಯ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ನೀರಾವರಿ ಸಚಿವರಿಗೆ ಗುರುವಾರ ಮನವಿ ಸಲ್ಲಿಸಿದರು. ಸಮಿತಿಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಗುಲ್ಬರ್ಗ, ಯಾದಗಿರಿ, ರಾಯಚೂರು, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳ ರೈತರ ಅನುಕೂಲಕ್ಕಾಗಿ ರಚಿಸಿರುವ ನೀರಾವರಿ ಸಲಹಾ ಸಮಿತಿ ನೆಪಮಾತ್ರಕ್ಕೆ ಸೀಮಿತವಾಗಿದೆ. ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ. ಈ ಜಿಲ್ಲೆಗಳ ಕಾಲುವೆ ಕೊನೆಯಂಚಿನ ರೈತರಿಗೆ ಇನ್ನೂ ನೀರು ಮುಟ್ಟಿಲ್ಲ. ಗುಣಮಟ್ಟದ ಕಾಮಗಾರಿ ಇಲ್ಲದೆ ಮಾಡಿದ ಕಾಲುವೆಗಳಿಂದ ರೈತರ ಜಮೀನಿಗೆ ನೀರು ಮುಟ್ಟುವ ಮೊದಲೇ ಒಡೆದು ಹೋಗಿವೆ. ಕಾಲುವೆ ಹೂಳು ತುಂಬಿ ತೆಗೆಯುವವರಿಲ್ಲದೆ ಮುಳ್ಳು ಕಂಟಿ ಬೆಳೆದು ನೀರು ಹಳ್ಳಕ್ಕೆ ಸೇರಿ ಪೋಲಾಗುತ್ತಿದೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಕೊನೆ ಭಾಗದ ರೈತರಿಗೆ ನೀರು ದೊರಕುವಂತಾಗಬೇಕು. ಎಲ್ಲ ಜಮೀನಿಗೆ ಬತ್ತ, ಹತ್ತಿ ಎಂದು ತಾರತಮ್ಯ ಮಾಡದೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಸಮಗ್ರ ನೀರು ಸದ್ಬಳಕೆಯಾಗಿ ಆಂಧ್ರಕ್ಕೆ ಪೋಲಾಗದಂತೆ ಕ್ರಮ ಜರುಗಿಸಬೇಕು. ಜಿಲ್ಲೆಯ ಶಹಾಪುರ, ಸುರಪುರ ಶಾಸಕರನ್ನು ಹಾಗೂ ಜಿಲ್ಲಾಧಿಕಾರಿಗಳನ್ನು, ರೈತಪರ ಹೋರಾಟಗಾರರನ್ನು ಹಾಗೂ ರೈತ ಪ್ರತಿನಿಧಿಗಳನ್ನು ನೀರಾವರಿ ಸಲಹಾ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂಬ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ಸಮಿತಿಯ ಶರಣಭೂಪಾಲರಡ್ಡಿ, ವಿಶ್ವನಾಥರಡ್ಡಿ ಗೊಂದಡಗಿ, ಬಸವರಾಜಪ್ಪಗೌಡ ಹೆಮ್ಮಡಗಿ, ಶರಣಪ್ಪಗೌಡ ಬಿರಾದಾರ, ಚೆನ್ನಾರಡ್ಡಿ ಪಾಟೀಲ, ಅಯ್ಯಣ್ಣ ಹಾಲಬಾವಿ, ಶಿವರಾಜ ಯಳವಾರ ಇದ್ದರು.
50ಕ್ಕೂ ಹೆಚ್ಚು ಜನ ಶ್ರೀಶೈಲ ಪಾದಯಾತ್ರೆ
ಸುರಪುರ: ಇಲ್ಲಿಯ ವೀರಶೈವ ಸಮಾಜದವರು ಸುರಪುರದಿಂದ ಶ್ರೀಶೈಲಕ್ಕೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಇಲ್ಲಿಯ ನಿಷ್ಠೆ ಕಡ್ಲೆಪ್ಪನವರ ವಿರಕ್ತ ಮಠದ ಪ್ರಭುಲಿಂಗ ಸ್ವಾಮಿಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ, ಮನುಷ್ಯ ನಿತ್ಯವೂ ಸಂಸಾರದ ಜಂಜಾಟದಲ್ಲಿದ್ದು, ಹಲವಾರು ಒತ್ತಡಗಳಿಂದ ಮಾನಸಿಕ ನೆಮ್ಮದಿ ಇಲ್ಲದೆ ಬಳಲುತ್ತಿದ್ದಾನೆ. ಈ ಪಾದಯಾತ್ರೆಯಿಂದ ಕೆಲ ಮಟ್ಟಿಗೆ ಸಂಸಾರದ ಚಿಂತೆ ಮರೆತು ಧಾರ್ಮಿಕ ಚಿಂತನೆಯಲ್ಲಿ ತೊಡಗುವ ಅವಕಾಶ ಸಿಗುತ್ತದೆ. ಇದರಿಂದ ಮಾನಸಿಕ ನೆಮ್ಮದಿಯೂ ದೊರಕಿದಂತ್ತಾಗುತ್ತದೆ ಎಂದರು. ಪುರಸಭೆ ಸದಸ್ಯ ದೇವಿಂದ್ರಪ್ಪ ಕಳ್ಳಿಮನಿ, ಸಮಾಜದ ಚಂದ್ರಶೇಖರ ಪಂಚಾಂಗಮಠ, ಕೊಟ್ರಯ್ಯಸ್ವಾಮಿ ಮಠ, ಮಹಾದೇವಪ್ಪ ಕಳ್ಳಿಮನಿ ಸೇರಿದಂತೆ 50ಕ್ಕೂ ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

