ಗುಲ್ಬರ್ಗಾ

ಸಾಹಿತ್ಯ ಜಾತ್ರೆ ಲೆಕ್ಕ ಬಿಡುಗಡೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.21
ಯಾವುದೇ ಕಾರ್ಯಕ್ರಮಗಳಾಗಲಿ, ಅವು ತುಂಬ ಯಶಸ್ವಿಯಾದ ನಂತರದ ದಿನಗಳಲ್ಲಿ ಖರ್ಚು-ವೆಚ್ಚ ಎಷ್ಟಾಯ್ತು, ಲೆಕ್ಕವೇ ಸಿಕ್ಕಿಲ್ಲ... ಎಂದು ವಿವಾದಗಳು ಹುಟ್ಟಿಕೊಳ್ಳುವುದು ಸಾಮಾನ್ಯ.
ಆದರೆ ಇಲ್ಲಿನ ಕಸಾಪ ಜಿಲ್ಲಾ ಘಟಕ ಮಾತ್ರ ಕನ್ನಡದ ಲೆಕ್ಕ ಪಕ್ಕಾ ಇಡೋಣ, ವಿವಾದಗಳನ್ಯಾಕೆ ಮೇಲೆ ಎಳೆದುಕೊಳ್ಳೋಣ... ಎಂದು ತಾನು ಇತ್ತೀಚೆಗೆ ನಡೆಸಿದ್ದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು-ವೆಚ್ಚವನ್ನೆಲ್ಲ ಚಿಕ್ಕದಾದ ಹಾಗೂ ಚೊಕ್ಕವಾಗಿ ಕೂಡಿ ಕಳೆದು ಮಾಹಿತಿಯನ್ನೆಲ್ಲ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತಮ್ಮ ಕಸಾಪ ಬಳಗವಾದ ಸುರೇಶ ಬಡಿಗೇರ್, ಬಿ.ಎಚ್. ನೀರಗುಡಿ ಅವರನ್ನೊಳಗೊಂಡು ಸುದ್ದಿಗೋಷ್ಠಿಯನ್ನೇ ಕರೆದು ಕನ್ನಡದ ಲೆಕ್ಕ ತೋಗೋರಿ ಎಂದು ಎಲ್ಲವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಸಮ್ಮೇಳನಕ್ಕೆಂದು ನಾನಾ ಮೂಲಗಳಿಂದ ಸಂಗ್ರಹವಾದ ಹಣ 5.86 ಲಕ್ಷ, ವೆಚ್ಚವಾಗಿದ್ದು 5.38 ಲಕ್ಷ. 47,762 ಉಳಿತಾಯ ಮಾಡಿದ್ದೇವೆ ಎಂದು ಮಹಿಪಾಲರೆಡ್ಡಿ ಮಾಹಿತಿ ನೀಡಿದ್ದಾರೆ. ಆ ಮೂಲಕ ಲೆಕ್ಕಪತ್ರಕ್ಕಾಗಿ ಎದುರು ನೋಡುತ್ತಿದ್ದ ಹತ್ತು ಹಲವು ಹಂತಗಳಲ್ಲಿ ಮಾಹಿತಿಯನ್ನೂ ರವಾನಿಸಿದ್ದಾರೆ.
ಕಸಾಪ ಕೇಂದ್ರ ಕಚೇರಿ ಜಿಲ್ಲಾ ಸಮ್ಮೇಳನಕ್ಕೆ 4.90 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ಇದರೊಂದಿಗೆ ಸ್ಥಳೀಯವಾಗಿಯೂ ಹಣ ಸಂಗ್ರಹವಾಗಿತ್ತು. ಅನೇಕರು ವಸ್ತುಗಳ ರೂಪದಲ್ಲಿ ದೇಣಿಗೆ ಸಹ ನೀಡಿದ್ದರು. ಅದೆಲ್ಲವೂ ಸೇರಿದಂತೆ 5.86 ಲಕ್ಷ ಸಂಗ್ರಹವಾಗಿತ್ತು. ಸ್ಥಳೀಯ ಶಿಕ್ಷಣ ಸಂಸ್ಥೆಗಳವರು ಭೋಜನಕ್ಕೂ ಸಹಾಯ ಮಾಡಿದ್ದಾರೆ. ಇದನ್ನೆಲ್ಲ ಸೇರಿಸಿಕೊಂಡು ಸಮ್ಮೇಳನದ ಖರ್ಚು-ವೆಚ್ಚ ಮಾಡಲಾಗಿದೆ. ಇದರಲ್ಲಿ ಸಂದೇಹವೇ ಮೂಡದಂತೆ ಕೆಲಸ ಮಾಡಲಾಗಿದೆ. ಲೆಕ್ಕ ಪಕ್ಕಾ ಇದ್ದರೇನೆ ಎಲ್ಲವೂ ಪಕ್ಕಾ ಇರುತ್ತದೆ ಎಂದು ರೆಡ್ಡಿ ಹೇಳಿದ್ದಾರೆ.
ವೆಚ್ಚದ ಬಾಬ್ತುಗಳು: 5.38 ಲಕ್ಷ ಹಣದಲ್ಲಿ 5 ಸಾವಿರ ಆಮಂತ್ರಣ ಪತ್ರಿಕೆಗಳಿಗೆ 61 ಸಾವಿರ, ಶಾಮಿಯಾನ್, ಪ್ರಚಾರಕ್ಕೆ 62 ಸಾವಿರ, ದೇಸೀ ಮಾದರಿಯ ವೇದಿಕೆಗೆ 40 ಸಾವಿರ, ಸ್ಮರಣಿಕೆಗಳಿಗೆ 50 ಸಾವಿರ, ಬ್ಯಾನರ್, ಊಟ- ಉಪಹಾರಕ್ಕೆ 24 ಸಾವಿರ, ಕಸಾಪ ವೆಬ್‌ಸೈಟ್‌ಗೆ 30 ಸಾವಿರ, ಅಂಚೆ ವೆಚ್ಚಕ್ಕೆ 20 ಸಾವಿರ, ನಾಟಕ ತಂಡ ಸಂಭಾವನೆ- 12 ಸಾವಿರ, ಎಲ್‌ಸಿಡಿ(ಡಿವಿಡಿ ಕೊಡುಗೆ ಸಹಿತ) 18 ಸಾವಿರ, ರಂಗಮಂದಿರ ಫ್ಯಾನ್ ಅಳವಡಿಕೆ- 32 ಸಾವಿರ, ಅತಿಥಿಗಳ ಸಂಭಾವನೆ, ದಾರಿ ವೆಚ್ಚ ಇತ್ಯಾದಿ ಎಲ್ಲವೂ ಸೇರಿಕೊಂಡಿದೆ ಎಂದು ಮಹಿಪಾಲರೆಡ್ಡಿ ಮುನ್ನೂರ್ ಬಿಡುಗಡೆ ಮಾಡಿರುವ ವೆಚ್ಚ ಯಾದಿಯಲ್ಲಿ ನಮೂದಾಗಿದೆ.
ಹಮ್ಮಿಣಿಗೆ ಮಾಧ್ಯಮ ಮಿತ್ರರು ಕಾರಣ: ಜಿಲ್ಲಾ ಕಸಾಪ ತಾನು ಮಾಡಿರುವ ಯಾವ ಸಮ್ಮೇಳನದಲ್ಲಿಯೂ ಅಧ್ಯಕ್ಷರಿಗೆ ಹಮ್ಮಿಣಿ(ದೇಣಿಗೆ) ಕೊಟ್ಟಿರಲಿಲ್ಲ. ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ 13ನೇ ಸಮ್ಮೇಳನಾಧ್ಯಕ್ಷ ಅಲ್ದಾಳರೊಂದಿಗೆ ಮಾಧ್ಯಮ ಮಿತ್ರರ ಸಂವಾದ ನಡೆಸಿದಾಗ, ಅಲ್ಲಿ ಮಾಧ್ಯಮ ಗೆಳೆಯರು ಅಲ್ದಾಳರ ಬವಣೆಯ ಬದುಕಿಗೆ ಮಮ್ಮಲ ಮರುಗಿದರಲ್ಲದೆ ಹಮ್ಮಿಣಿ ವಿಚಾರ ಪಸ್ತಾಪಿಸಿದರು.
ಅಲ್ಲಿ ಚರ್ಚೆಗೆ ಬಂದ ಈ ವಿಚಾರ ಕೊನೆಗೂ ಫಲನೀಡಿತು. ರಂಗಕರ್ಮಿ ಅಲ್ದಾಳರಿಗೆ ಹಮ್ಮಿಣಿ ನೆರವಿಗೆ ಬಂದಿದ್ದು, ಮಾಧ್ಯಮದವರ ಪ್ರಗತಿಪರ ಚಿಂತನೆಯಿಂದ ಎಂದು ಮಹಿಪಾಲರೆಡ್ಡಿ ಹೆಮ್ಮೆಯಿಂದ ಹೇಳಿದರು.
13ನೇ ಸಮ್ಮೇಳನ ಯಶ ಕಂಡಿದೆ. ಇದರಿಂದಾಗಿ ತಮಗೆ ಬರುವ ವರ್ಷಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗುಲ್ಬರ್ಗಕ್ಕೆ ಕೇಳುವ ಧೈರ್ಯ ಬಂದಿದೆ ಎಂದು ಮಹಿಪಾಲರೆಡ್ಡಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.