ಗುಲ್ಬರ್ಗಾ

ಗುಲ್ಬರ್ಗ ಕೇಂದ್ರವಾಗಿರುವಂತೆ ಪ್ರತ್ಯೇಕ ರೇಲ್ವೆ ವಿಭಾಗ ಸುಳಿವು

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.23
ರೇಲ್ವೆ ಸಚಿವರಾಗಿ ಮೊದಲ ಬಾರಿ ತವರಿಗೆ ಬಂದಿದ್ದ ಮಲ್ಲಿಕಾರ್ಜುನ ಖರ್ಗೆಯವರು ಗುಲ್ಬರ್ಗ ವಿಭಾಗೀಯ ಕಚೇರಿ ರಚನೆ ಕಷ್ಟ. ಆದಾಗ್ಯೂ ಅಧ್ಯಯನ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ ಎಂದಿದ್ದರು. ಆದರೆ 3ನೇ ಭೇಟಿಯಲ್ಲಿ ಪ್ರತ್ಯೇಕ ವಿಭಾಗ ಗುಲ್ಬರ್ಗದ ತುರ್ತು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಗುಂತಕಲ್, ಸಿಕಂದರಾಬಾದ್ ಹಾಗೂ ಮಧ್ಯ ರೇಲ್ವೆ ಮುಂಬೈ ಮಧ್ಯೆ ಹರಿದು ಹಂಚಿ ಹೋಗಿರುವ ಗುಲ್ಬರ್ಗ, ರಾಯಚೂರು, ಬೀದರ್, ಯಾದಗಿರಿ ಜಿಲ್ಲೆಗಳ ರೇಲ್ವೆ ಜಾಲವನ್ನೆಲ್ಲ ಒಂದೇ ಸೂರಿನಡಿ ತರುವ ಚಿಂತನೆ ಸಾಗಿದೆ ಎನ್ನುವ ಮೂಲಕ ಗುಲ್ಬರ್ಗ ಕೇಂದ್ರವಾಗಿರುವಂತೆ ಪ್ರತ್ಯೇಕ ರೇಲ್ವೆ ವಿಭಾಗ ರಚಿಸುವ ಸೂಚನೆ ನೀಡಿದ್ದಾರೆ. ಗುಲ್ಬರ್ಗದಲ್ಲಿ ಸೋಮವಾರ ನಡೆದ ಹೊಟಗಿ- ಗುಲ್ಬರ್ಗ ಜೋಡಿಹಳಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಹೆಣ್ಣೋ- ಗಂಡೋ ಗೊತ್ತಿಲ್ರಿ: ಸುದ್ದಿಗೋಷ್ಠಿಯಲ್ಲಿಯೂ ಖರ್ಗೆಯವರು ರೇಲ್ವೆ ವಿಭಾಗೀಯ ಕಚೇರಿ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸದೆ ಹುಟ್ಟೋ ಮಗು ಗಂಡೋ- ಹೆಣ್ಣೋ ಗೊತ್ತಿಲ್ರಿ... ಎಂದು ನಗುತ್ತ ಹೇಳಿದರು.
ಗದಗ- ವಾಡಿ ಮಾರ್ಗ: ಉತ್ತರ ಕರ್ನಾಟಕದಲ್ಲೇ ಇರುವ ಮುಂಬೈ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರಾಂತಗಳ ನಡುವೆ ರೈಲು ಸಂಪರ್ಕ ಇಲ್ಲದಂತಾಗಿದೆ. ಗದಗ- ವಾಡಿ ರೈಲು ಮಾರ್ಗವಾದಲ್ಲಿ ಈ ಕೊರತೆ ತುಂಬಲು ಸಾಧ್ಯವಾಗಲಿದೆ. ಈ ಹೊಸ ರೈಲು ಮಾರ್ಗದ ಪಕ್ಕಾ ಸಮೀಕ್ಷೆಗೆ ಆದೇಶಿಸಿದ್ದು ವರದಿ ಕೈಸೇರಿದ ನಂತರ ಯೋಜನಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಲು ಯತ್ನಿಸಲಾಗುವುದು ಎಂದು ಹೇಳಿದರು.
ಹೆಚ್ಚಿನ ರೈಲು ಸೌಕರ್ಯಕ್ಕೆ ಕ್ರಮ: ತಮಗೆ ರೇಲ್ವೆ ಸಚಿವಗಿರಿ ಅಲ್ಪ ಅವಧಿಗೆ ಸಿಕ್ಕಿದೆ, ಹಾಗಂತ ಬೇಸರವಿಲ್ಲ. ಆದಾಗ್ಯೂ ಲಭ್ಯ ಅವಧಿಯಲ್ಲಿ ರಾಜ್ಯಕ್ಕೆ ಅಗತ್ಯವಿರುವ ಯೋಜನೆಗಳನ್ನು ಪಟ್ಟಿ ಮಾಡಿ ಆದ್ಯತೆ ಮೇರೆಗೆ ಕೈಗೊಳ್ಳುವುದಾಗಿ ಹೇಳಿದರು.
ರೇಲ್ವೆ ಯೋಜನೆಯ ಕೊಡುಗೆಗಳಲ್ಲಿ ಹೈ-ಕ ಪ್ರದೇಶ ಅತ್ಯಂತ ಹಿಂದುಳಿದಿದೆ. ಪ್ರತಿ 1 ಸಾವಿರ ಸ್ಕ್ವಯರ್ ಕಿಮೀ.ಗೆ ನೆರೆಯ ಆಂಧ್ರದಲ್ಲಿ ಶೇ.19.14ರಷ್ಟು ರೈಲು ಮಾರ್ಗವಿದ್ದರೆ, ಅಸ್ಸಾಂ ಶೇ.31, ಬಿಹಾರ ಶೇ.38ರಷ್ಟು, ಹರಿಯಾಣ ಶೇ. 34, ಮಹಾರಾಷ್ಟ್ರ ಶೇ.18.20ರಷ್ಟು ಮಾರ್ಗಗಳನ್ನು ಹೊಂದಿದ್ದರೆ ಕರ್ನಾಟಕ ಶೇ.16ರಷ್ಟು ರೈಲು ಮಾರ್ಗ ಹೊಂದಿದೆ. ರಾಜ್ಯದಲ್ಲೂ ಹೆಚ್ಚು ರೇಲ್ವೆ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.