ಗುಲ್ಬರ್ಗಾ

ಕಲ್ಲಿದ್ದಲು ಸಾಗಣೆ; ಶಾಶ್ವತ ಪರಿಹಾರಕ್ಕೆ ಎಸಿ ತಾಕೀತು

Published On :

ಕನ್ನಡಪ್ರಭ ವಾರ್ತೆ, ಸೇಡಂ, ಜು.24
ತಾಲೂಕಿನ ಕುರಕುಂಟಾ ಗ್ರಾಮದಿಂದ ಸಾಗಾಣಿಕೆ ಮಾಡುತ್ತಿರುವ ಕಲ್ಲಿದ್ದಲಿನಿಂದ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಹಾಯಕ ಆಯುಕ್ತ ಹಷಾಶೆಟ್ಟಿ ತಾಕೀತು ಮಾಡಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಕರೆದಿದ್ದ ಗ್ರಾಮಸ್ಥರ ಮತ್ತು ಕಂಪನಿಯ ಸಭೆಯಲ್ಲಿ ಮಾತನಾಡಿ, ಇಲ್ಲಿನ ರೇಲ್ವೆ ನಿಲ್ದಾಣದಿಂದ ಚಿಂಚೋಳಿ ತಾಲೂಕಿನ ಛತ್ರಸಾಲ, ಕರ್ಚಖೇಡದಲ್ಲಿನ ಚೆಟ್ಟಿನಾಡ ಹಾಗೂ ವಿಕಾಟ್ ಸಾಗರ ಕಂಪನಿಗಳಿಗೆ ಲಾರಿಗಳ ಮೂಲಕ ಕಲ್ಲಿದ್ದಲನ್ನು ಸಾಗಣೆ ಮಾಡಲಾಗುತ್ತಿದೆ. ಇದರಿಂದ ತಾಲೂಕು ಕೇಂದ್ರಕ್ಕೆ ಆಗಮಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಅಲ್ಲದೆ ಗ್ರಾಮಸ್ಥರಿಂದ ಸಾಕಷ್ಟು ದೂರುಗಳು ಬಂದಿರುವುದರಿಂದ ಈ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಹೇಳಿದಂತೆ ನಡೆಯುತ್ತಿಲ್ಲ: ಸಭೆಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಅಕ್ರಂ, ಈ ಮೊದಲು ಇದೇ ಕಾರ್ಯಾಲಯದಲ್ಲಿ ಇದೇ ರೀತಿ ಸಭೆಯೊಂದನ್ನು ನಡೆಸಲಾಗಿತ್ತು. ಅಂದು ಕಂಪನಿಯವರು ಹೇಳಿದಂತೆ ಯಾವುದೇ ಕೆಲಸ ಮಾಡಿಲ್ಲ. ರಸ್ತೆಗೆ ನೀರೊಂದನ್ನು ಸಿಂಪಡಿಸುವುದು ಬಿಟ್ಟರೆ ಇನ್ನಾವುದೇ ಕಾರ್ಯಗಳು ಇಲ್ಲಿ ನಡೆಯುತ್ತಿಲ್ಲ. ಲಾರಿಗಳು ಹೋಗುವಾಗ ಹಿಂದಿನಿಂದ ಕಲ್ಲಿದ್ದಲು ರಸ್ತೆಯಲ್ಲಿ ಬೀಳುತ್ತವೆ. ಇದರಿಂದ ಧೂಳು ತುಂಬಿದೆ ಎಂದರು.
ಚಟ್ಟಿನಾಡ್ ಕಂಪನಿಯ ಅಧಿಕಾರಿ ಬಸವರಾಜ ಪಾಟೀಲ್ ಮಾತನಾಡಿ, ನಮ್ಮ ಕಂಪನಿಗೆ ಇನ್ನು ಒಂದು ವರ್ಷದವರೆಗೆ ಮಾತ್ರ ಇಲ್ಲಿಂದ ಕಲ್ಲಿದ್ದಲು ಸಾಗಾಣಿಕೆ ನಡೆಯುತ್ತದೆ. ನಂತರ ಕಂಪನಿಯವರೆಗೆ ಹಳಿ ಹಾಕಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಆಯುಕ್ತರ ಸೂಚನೆ: ಅಂತಿಮವಾಗಿ ಮಾತನಾಡಿದ ಆಯುಕ್ತ ಹರ್ಷಾಶೆಟ್ಟಿ, ಸದ್ಯದ ಮಟ್ಟಿಗೆ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ತಗ್ಗು- ಗುಂಡಿಗಳನ್ನು ಮುಚ್ಚಬೇಕು. ನಂತರದ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ ಅಂದಾಜು ಪಟ್ಟಿಯಂತೆ ಎರಡು ಕಂಪನಿಯವರು ಸೇರಿ ಪಕ್ಕಾ ರಸ್ತೆ ನಿರ್ಮಿಸಬೇಕು ಎಂದು ಸೂಚಿಸಿದರು.
ಈ ವೇಳೆ ಪರಿಸರ ಮಾಲಿನ್ಯ ಅಧಿಕಾರಿ ಶಿವಪ್ಪನಾಯ್ಕ, ತಹಸೀಲ್ದಾರ್ ಪ್ರಕಾಶ ಕುದರಿ, ದಯಾನಂದ ಪಾಟೀಲ್, ಮಾಜಿ ಜಿಪಂ ಸದಸ್ಯ ಭೀಮಯ್ಯ ಶಹಾಬಾದಕರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಕ್ರಂಖಾನ್, ಗ್ರಾಪಂ ಸದಸ್ಯ ಸಂತೋಷ ಗುತ್ತೇದಾರ, ಗ್ರಾಮದ ಮುಖಂಡರಾದ ವಿಶ್ವನಾಥರೆಡ್ಡಿ ಪಾಟೀಲ್, ವಿನೋದ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.