ಪ್ರಕೃತಿ ವೈರುಧ್ಯ
ಕನ್ನಡಪ್ರಭ ವಾರ್ತೆ ಯಾದಗಿರಿ ಜು.29
ಮಹಾರಾಷ್ಟ್ರ ಭಾಗದಲ್ಲಿ ವ್ಯಾಪಕ ಮಳೆಯಾಗಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಎದುರಾಗಿದೆ. ಆದರೆ ಜಿಲ್ಲೆಯ ಇನ್ನೊಂದು ನದಿ ಭೀಮಾ ನೀರಿನ ಕೊರತೆಯಿಂದ ಭಣಗುಡುತ್ತಿರುವುದು ಪ್ರಕೃತಿಯ ವೈರುಧ್ಯಕ್ಕೆ ಸಾಕ್ಷಿಯಾಗಿದೆ. ಇದು ಎರಡೂ ನದಿ ತೀರದ ರೈತರ ಕೃಷಿ ಚಟುವಟಿಕೆಯನ್ನೇ ವಿಭಿನ್ನಗೊಳಿಸಿದೆ.
ಇಷ್ಟೇ ಅಲ್ಲ, ಕೃಷ್ಣಾ ನದಿ ಪ್ರವಾಹದಿಂದ ನದಿ ತೀರದ ಹೊಲಗಳು ಜಲಾವೃತಗೊಂಡಿದ್ದರೆ, ಜಿಲ್ಲೆಯ ನೂರಾರು ಕೆರೆಗಳು ಮಳೆಯ ಅಭಾವದಿಂದ ಬಾಯ್ದೆರೆದುಕೊಂಡಿವೆ. ಜುಲೈ ಅಂತ್ಯದವರೆಗೆ ಬೀಳಬೇಕಿದ್ದ ವಾಡಿಕೆ ಮಳೆಗಿಂತ 85 ಮಿಮೀ ಮಳೆ ಕಡಿಮೆಯಾಗಿದೆ.
ಆದರೆ ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿ ಕಣಿವೆ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿರುವುದರಿಂದ ಕೃಷ್ಣಾ ಮತ್ತು ಅದರ ಉಪನದಿಗಳು ಉಕ್ಕಿಹರಿಯುತ್ತಿವೆ. ಇದರಿಂದಾಗಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ಭರ್ತಿಯಾಗಿವೆ. ಎರಡೂ ಜಲಾಶಯಗಳಿಂದ ಪ್ರತಿದಿನ ಸುಮಾರು 2.50 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಇದರಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.
ಭೀಮೆಗೆ ನೀರಿಲ್ಲ: ಆದರೆ ಮಹಾರಾಷ್ಟ್ರದ ಪುಣೆ ಮತ್ತು ಸೊಲ್ಲಾಪುರ ಪ್ರದೇಶದಲ್ಲಿ ಮಳೆಯಾಗದ ಕಾರಣ ಉಜನಿ ಜಲಾಶಯಕ್ಕೆ ಇನ್ನೂ ನೀರು ಬಂದಿಲ್ಲ. ಹೀಗಾಗಿ ಆ ಜಲಾಶಯದಿಂದ ನೀರು ಬಿಡದ ಕಾರಣ ಭೀಮಾ ನದಿ ಭಣಗುಡುತ್ತಿದೆ. ನದಿ ಪಾತ್ರದ ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಇನ್ನೂ ಪರದಾಡುವಂಥ ಸ್ಥಿತಿಯಿದೆ. ಆದ್ದರಿಂದ ಭೀಮಾ ತೀರದ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು ಬರದ ಛಾಯೆ ಆವರಿಸಿದೆ. ಯಾದಗಿರಿ ನಗರದಿಂದ ಕಣ್ಣಳತೆ ದೂರದಲ್ಲಿ ಹರಿದಿರುವ ಭೀಮಾ ನದಿಯಲ್ಲಿ ನೀರಿಲ್ಲದೇ ತಳ ಕಾಣುತ್ತಿದೆ.
ಕಡಿವಾಣ ಅಗತ್ಯ: ಜಿಲ್ಲೆಯಲ್ಲಿ ಭೀಮಾ ನದಿಗೆ ಕೆಲ ಬ್ಯಾರೇಜು ನಿರ್ಮಿಸಿದ್ದರಿಂದ ಸಂಗ್ರಹವಾದ ನೀರನ್ನು ಯಾದಗಿರಿ ಪಟ್ಟಣ ಸೇರಿ ಇತರ ಗ್ರಾಮಗಳಿಗೆ ಪೂರೈಸಲಾಗುತ್ತದೆ. ಪಕ್ಕದ ಕೃಷ್ಣಾ ನದಿಯಲ್ಲಿ ನೀರು ಬಂದಿದ್ದನ್ನು ಕಂಡ ಭೀಮಾ ದಡದ ರೈತರು ಬತ್ತದ ನಾಟಿ ನಡೆಸಿದ್ದಾರೆ. ಆದರೆ ಮಳೆಯ ಕೊರತೆಯಿಂದ ನೀರು ಬಾರದೇ ಇದ್ದಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡಬೇಕಾಗುತ್ತದೆ.
ಇದೇ ರೀತಿ ಬಿತ್ತನೆ ಮಾಡಿ ಇರುವ ನೀರನ್ನು ಬಳಕೆ ಮಾಡಿಕೊಂಡಲ್ಲಿ ಬರುವ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸಿದರೂ ಅಚ್ಚರಿಯಿಲ್ಲ. ಆದ್ದರಿಂದ ಜಿಲ್ಲಾಡಳಿತ ನದಿ ಪಾತ್ರದಲ್ಲಿ ಬತ್ತ ನಾಟಿ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಗುರಿ ಸಾಧನೆಯಾಗಿಲ್ಲ: ಜಿಲ್ಲೆಯಲ್ಲಿ 2.68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮಳೆ ಕೊರತೆಯಿಂದ ಸುಮಾರು 99 ಸಾವಿರ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ ಎಂದು ಜಿಲ್ಲಾಡಳಿತದ ಹೇಳುತ್ತದೆ. ಸುರಪುರ ಮತ್ತು ಶಹಾಪುರ ತಾಲೂಕಿನ ಕೆಲ ಗ್ರಾಮಗಳಿಗೆ ಕೃಷ್ಣಾ ನೀರು ಕಾಲುವೆಯಲ್ಲಿ ಹರಿಸುತ್ತಿದ್ದರಿಂದ ಅಲ್ಲಿ ಬಿತ್ತನೆ ಕಾರ್ಯ ನಡೆದಿದೆ.
ಆದರೆ ಯಾದಗಿರಿ ಮತ್ತು ಗುರುಮಠಕಲ್ ಭಾಗದ ಗ್ರಾಮಗಳಲ್ಲಿ ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯ ಮಂದಗತಿಯಲ್ಲಿ ನಡೆದಿದೆ. ಕೃಷ್ಣಾ ನದಿ ಪ್ರವಾಹದಲ್ಲಿ ಸುರಪುರ ತಾಲೂಕಿನ ಕೆಲ ಗ್ರಾಮಗಳ ಜಮೀನು ಜಲಾವೃತಗೊಂಡು ಬತ್ತ, ಸೂರ್ಯಕಾಂತಿ ಮತ್ತು ಕಬ್ಬು ಬೆಳೆಗಳು ಹಾನಿಯಾಗಿವೆ. ಇನ್ನು ಕೆಲ ರೈತರ ಪಂಪ್ಸೆಟ್ಗಳು ನೀರಲ್ಲಿ ಮುಳಗಿ ಹಾನಿಯಾಗಿದೆ.
ನೆಲ ಕಾಣುತ್ತಿರುವ ಕೆರೆಗಳು: ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಬೃಹತ್ ಕೆರೆಗಳಿವೆ. ಆದರೆ ಯಾವ ಕೆರೆಗಳೂ ಇನ್ನೂ ಭರ್ತಿಯಾಗಿಲ್ಲ. ಬಿದ್ದ ಅಲ್ಪಸ್ವಲ್ಪ ಮಳೆಯ ನೀರು ಬೇಸಿಗೆಯಲ್ಲಿ ಬಿರುಕು ಬಿಟ್ಟ ಕೆರೆಗಳ ದಾಹ ತೀರಿಸುತ್ತಿಲ್ಲ. ಇದರಿಂದ ಒಣ ಬೇಸಾಯ ಪ್ರದೇಶದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮುಂಗಾರು ಆರಂಭವಾಗಿ ಎರಡು ತಿಂಗಳಾದರೂ ಕೆರೆಕಟ್ಟೆಗಳು ತುಂಬಿಲ್ಲ. ಪುಟ್ಟ ಜಿಲ್ಲೆಯಲ್ಲಿನ ಎರಡು ನದಿಗಳ ಸ್ಥಿತಿ ಸಂಪೂರ್ಣ ವಿಭಿನ್ನವಾಗಿದ್ದು, ರೈತರ ಸ್ಥಿತಿಯೂ ಇದೇ ರೀತಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

