ಮುಖ್ಯ ನ್ಯಾಯಮೂರ್ತಿಗೆ ಬೇಗ ಪತ್ರ ಬರೀರಿ: ಸಿಎಂಗೆ ಖರ್ಗೆ ಆಗ್ರಹ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.30
ರಾಜ್ಯದಲ್ಲಿರುವ ಗುಲ್ಬರ್ಗ ಹಾಗೂ ಧಾರವಾಡ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂ ಪೀಠಗಳನ್ನಾಗಿ ಪರಿವರ್ತಿಸುವ ವಿಚಾರದಲ್ಲಿ ಕೇಂದ್ರ ನಿರ್ಣಯ ಕೈಗೊಂಡಿದ್ದು, ಅದು ಗೆಜೆಟ್ ನೋಟಿಫಿಕೇಷನ್ ರೂಪ ಪಡೆಯುವ ಮುನ್ನ ರಾಜ್ಯದ ಮುಖ್ಯಮಂತ್ರಿಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಕಾಯಂ ಪೀಠಗಳನ್ನಾಗಿ ಪರಿವರ್ತಿಸಲು ಕೋರಬೇಕು. ಈ ಕೆಲಸ ಸಿದ್ದರಾಮಯ್ಯ ಆದಷ್ಟು ಬೇಗ ಮಾಡಲಿ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಪತ್ರದ ವಿಳಂಬವೇ ಕಾರಣ: ಕೇಂದ್ರ ಸಂಚಾರಿ ಪೀಠಗಳಿಗೆ ಕಾಯಂ ಪೀಠ ಸ್ವರೂಪ ನೀಡುವ ದಿಶೆಯಲ್ಲಿ ಸ್ಪಷ್ಟವಾದಂತಹ ನಿರ್ಣಯ ಪ್ರಕಟಿಸಿ ತಿಂಗಳಾದರೂ ಈ ನಿರ್ಣಯ ಗೆಜೆಟ್ ನೋಟಿಫಿಕೇಷನ್ ರೂಪದಲ್ಲಿ ಹೊರಬಿದ್ದಿಲ್ಲ. ಇದಕ್ಕೆ ಪತ್ರ ಬರೆಯುವಲ್ಲಿನ ವಿಳಂಬವೇ ಕಾರಣ. ಮುಖ್ಯಮಂತ್ರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಕೇಂದ್ರದ ನಿರ್ಣಯದಂತೆ ಸಂಚಾರಿ ಪೀಠಗಳನ್ನು ಕಾಯಂ ಪೀಠಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದರು.
ಸಿಎಂರಿಂದ ಪತ್ರ ಸ್ವೀಕರಿಸಿದ ನಂತರವಷ್ಟೇ ಮುಖ್ಯ ನ್ಯಾಯಮೂರ್ತಿಗಳು ಮುಂದಡಿ ಇಡುತ್ತಾರೆ. ಗೆಜೆಟ್ ನೋಟಿಫಿಕೇಷನ್ ಹೊರಬಿದ್ದ 15 ದಿನದಲ್ಲೇ ಪೀಠಗಳು ಕಾರ್ಯನಿರ್ವಹಿಸಬೇಕೆಂಬ ನಿಯಮವಿದೆ. ಈ ಕೆಲಸ ಬೇಗ ಆಗಲೆಂದು ಖರ್ಗೆ ಹೊಸ ರಾಷ್ಟ್ರೀಯ ಹೆದ್ದಾರಿ 150 ರ ಶಿಲಾನ್ಯಾಸ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು.
ಕಲಂ 371 ನಿಯಮಗಳೂ ಬೇಗ ರಚನೆಯಾಗಲಿ: ಕಲಂ 371 (ಜೆ) ವಿಧಿಗೆ ಕೇಂದ್ರ ಮಸೂದೆ ರೂಪ ನೀಡಿ ತಿಂಗಳು 8 ಆದರೂ ಇನ್ನೂ ನಿಯಮಗಳ ರಚನೆ ವಿಳಂಬವಾಗುತ್ತಿದೆ. ಹಿಂದಿನ ಸರ್ಕಾರವಂತೂ ಈ ಬಗ್ಗೆ ಅಷ್ಟಾಗಿ ಲಕ್ಷ ವಹಿಸಲೇಇಲ್ಲ. ಅಸೆಂಬ್ಲಿ ಚುನಾವಣೆಗಳು ಬಂದವು. ನಮ್ಮ ಸರ್ಕಾರ ಬಂದು 2 ತಿಂಗಳಾಗಿದೆಯಷ್ಟೆ. ನಿಯಮಗಳ ರಚನೆಗೂ ಮುನ್ನ ಸಂಪುಟ ಉಪ ಸಮಿತಿ ರಚಿಸಿ ನಿಯಮಗಳಿಗೆ ಅಂತಿಮ ರೂಪ ನೀಡಿದ್ದು ಸ್ವಾಗತಾರ್ಹ. 371 (ಜೆ) ನಿಯಮಗಳ ಅನುಷ್ಠಾನಕ್ಕೆ ಪ್ರತ್ಯೇಕ ಅಧಿಕಾರಿಯೊಬ್ಬರಿಗೆ ನಿಯೋಜಿಸಬೇಕು. ಇನ್ನಾದರೂ ಅವುಗಳನ್ನು ಬೇಗ ಜಾರಿಗೆ ತರುವಂತಗಾಲಿ ಎಂದರು.
ರಾಜ್ಯ ಸರ್ಕಾರ ಕಲಂ 371 (ಜೆ) ಮಸೂದೆ ಅನ್ವಯ ನಿಯಮಗಳನ್ನು ರೂಪಿಸಿ ಕೇಂದ್ರದ ಗೃಹ ಮಂತ್ರಾಲಯಕ್ಕೆ ಕಳುಹಿಸಬೇಕು. ಇದಾದ ನಂತರ ಅಲ್ಲಿ ಇನ್ನೂ ಕೆಲಸವಿದೆ, ಅವರು ಅಲ್ಲಿ ತಮ್ಮ ಪಾಲಿನ ಕೆಲಸಗಳನ್ನು ಪೂರೈಸಲು ಸಮಯಬೇಕು. ರಾಜ್ಯ ಸರ್ಕಾರ ಬೇಗ ನಿಯಮಗಳನ್ನು ಕೇಂದ್ರಕ್ಕೆ ರವಾನಿಸಿ ಹಿಂದುಳಿದ ಜನರಿಗೆ ಮಸೂದೆಯ ಲಾಭಗಳು ತಲುಪುವಂತೆ ಮಾಡಲಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

