ಗುಲ್ಬರ್ಗಾ

ಸೇತುವೆ ಮೇಲ್ದರ್ಜೆಗಿದು ಸಕಾಲ

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ  ಜು.30
ಕೃಷ್ಣಾ ನದಿಯಲ್ಲಿ ಪ್ರವಾಹ ಉಕ್ಕಿದರೆ ಸಾಕು, ಶಹಾಪುರತಾಲೂಕಿನ ಕೊಳ್ಳೂರು ಸೇತುವೆ ಮುಳುಗಡೆಯಾಗಿ ರಾಯಚೂರು-ಗುಲ್ಬರ್ಗ ಹೆದ್ದಾರಿ ಸಂಪರ್ಕ ಕಡಿತಗೊಳ್ಳುತ್ತದೆ. ಆದ್ದರಿಂದ ಸೇತುವೆ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲು ಇದು ಸಕಾಲವಾಗಿದೆ.
  ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ಯಾದಗಿರಿ ಜಿಲ್ಲೆಯ ಶಹಾಪುರಗಳ ಮಧ್ಯ ಇರುವ ಕೃಷ್ಣಾ ನದಿಗೆ ಕೊಳ್ಳೂರಿನಲ್ಲಿ ನಿರ್ಮಿಸಿರುವ ಸೇತುವೆ ಎರಡು ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿದೆ. ಈ ಸೇತುವೆ ಕೆಳ ಮಟ್ಟದಲ್ಲಿ ಇರುವುದರಿಂದ ಕೃಷ್ಣಾ ನದಿಯಲ್ಲಿ ಪ್ರವಾಹ ಬಂದಾಗ ಸೇತುವೆ ನೀರಲ್ಲಿ ಮುಳಗಿ ದಿನಗಟ್ಟಲೆ ಸಂಚಾರವೇ ಸ್ಥಗಿತಗೊಳ್ಳುತ್ತಿದೆ. ಇದರಿಂದಾಗಿ ಗುಲ್ಬರ್ಗದಿಂದ ರಾಯಚೂರಿಗೆ ಹೋಗಲು ಸುರಪುರ ಮತ್ತು ಲಿಂಗಸ್ಗೂರು ಮೂಲಕ ಸುತ್ತುವರಿದು ಸಂಚರಿಸಬೇಕಾಗುತ್ತದೆ. ಇದರಿಂದ ಸಮಯ ವ್ಯರ್ಥವಾಗುವ ಜತೆಗೆ ಹೆಚ್ಚಿನ ಹಣ ತೆರಬೇಕಾಗುತ್ತದೆ.
ನಿರ್ಧಾರ ವಿಳಂಬ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕೆಲವು ಸೇತುವೆಗಳು ಕೃಷ್ಣಾ ನದಿ ಪ್ರವಾಹದಲ್ಲಿ ಮುಳುಗಡೆಯಾಗಿದ್ದರಿಂದ ಸರ್ಕಾರ ಕೆಲ ಸೇತುವೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ. ಆದರೆ ಕೊಳ್ಳೂರು ಸೇತುವೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಇರುವುದು ಜಿಲ್ಲೆಯ ಜನರಲ್ಲಿ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.  
  ಪ್ರತಿ ಬಾರಿ ಅಗಸ್ಟ್ನಲ್ಲಿ ನಾರಾಯಣಪುರ ಮತ್ತು ಆಲಮಟ್ಟಿ ಜಲಾಶಯಗಳು ಭರ್ತಿಯಾಗುತ್ತಿದ್ದವು. ಆದರೆ ಈ ಸಲ ಜುಲೈ ತಿಂಗಳಲ್ಲಿ ಮಹಾರಾಷ್ಟ್ರ ಮತ್ತು ಕೃಷ್ಣಾ ಕಣಿವೆ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬಿದ್ದ ಪ್ರಯುಕ್ತ ಕೃಷ್ಣ ನದಿ ಸೇರಿ ಎಲ್ಲಾ ಉಪನದಿಗಳು ತುಂಬಿ ಪ್ರವಾಹ ಸೃಷ್ಟಿ ಮಾಡಿವೆ.
  ಇದರಿಂದಾಗಿ ಈ ವಾರದಲ್ಲಿ ನಾರಾಯಣಪುರ ಜಲಾಶಯದಿಂದ 2.50 ಲಕ್ಷದಿಂದ 2.70 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಸೋಮವಾರ ರಾತ್ರಿಯಿಂದ ಕೌಳೂರು ಸೇತುವೆಯ ಮೇಲೆ ಸುಮಾರು ಎರಡು ಅಡಿ ನೀರು ಬಂದ ಪ್ರಯುಕ್ತ 24 ಗಂಟೆಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.
ಸಿಕ್ಕದ ಮನ್ನಣೆ: ಈ ಸೇತುವೆಯು ರಾಯಚೂರು ಜಿಲ್ಲೆ ಮತ್ತು ಇನ್ನೊಂದು ಬದಿಯಲ್ಲಿ ಯಾದಗಿರಿ ಜಿಲ್ಲೆಯ ಅಡಳಿತಕ್ಕೆ ಬರುವುದರಿಂದ ಎರಡೂ ಜಿಲ್ಲೆಯ ಅಧಿಕಾರಗಳು ಈ ಸೇತುವೆಯ ಮೇಲ್ದರ್ಜೆಗೇರಿಸುವ ಕುರಿತು ಚಿಂತನೆ ನಡೆಸಿಲ್ಲ. ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನೂ ಕಳಿಸಿಲ್ಲ ಎಂಬ ಮಾತುಗಳು ಸೇತುವೆ ಅಕ್ಕಪಕ್ಕದ ಗ್ರಾಮಸ್ಥರ ಆರೋಪವಾಗಿದೆ.
  ಇದು ಪ್ರತಿ ವರ್ಷ ಮಳೆಗಾಲದಲ್ಲಿ ಈ ಪರಿಸ್ಥಿತಿ ಉಂಟಾಗುತ್ತಿದ್ದು, ಸೇತುವೆಯನ್ನು ಎತ್ತರಿಸಿ ಸುಗಮ ಸಂಚಾರಕ್ಕೆ ಅನಕೂಲ ಮಾಡಿಕೊಡಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.
5 ಲಕ್ಷಕ್ಕೂ ಹೆಚ್ಚು ಹಾನಿ:  ಸೇತುವೆ ಮುಳುಗಡೆಯಿಂದ ಸ್ಥಗಿತಗೊಳ್ಳುವ ಸಾರಿಗೆ ಸಂಚಾರದಿಂದ ಪ್ರತಿ ನಿತ್ಯ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚಿ ಹಾನಿಯಾಗುತ್ತಿದೆ ಎಂದು ಇಲಾಖೆಯ ಮೂಲದಿಂದ ತಿಳಿದು ಬಂದಿದೆ.
  ಯಾದಗಿರಿ ವಿಭಾಗಕ್ಕೆ ಸುಮಾರು 1 ಲಕ್ಷ ನಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಖಾಸಗಿ ವಾಹನ ಸಂಚಾರವೂ ಸ್ಥಗಿತಗೊಂಡು ಅವರೂ ಹಾನಿ ಅನುಭವಿಸುವಂತಾಗಿದೆ.
ಅನುದಾನ: ಸೇತುವೆಯನ್ನು ಮೇಲ್ದರ್ಜೆಗೇರಿಸಲು ಸುಮಾರು 40-45 ಕೋಟಿ ಅನುದಾನ ಬೇಕಾಗುತ್ತದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸಾರ್ವಜನಿಕರೂ ಬೇಡಿಕೆಯನ್ನು ಮುಂದಿಟ್ಟಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಹೇಳುತ್ತಾರೆ.
   ಒಟ್ಟಾರೆ ಎರಡು ಜಿಲ್ಲೆಗಳ ಮಧ್ಯೆ ಸಿಲುಕಿಕೊಂಡಿರುವ ಈ ಸೇತುವೆ ಕೃಷ್ಣಾ ನದಿ ಪ್ರವಾಹಕ್ಕೆ ಆಗಾಗ ಮುಳುಗುತ್ತಲೇ ಇದೆ. ಇದಕ್ಕೆ ಮುಕ್ತಿ ಸಿಕ್ಕು ಸುಗಮ ಸಂಚಾರಕ್ಕೆ ಅನಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ. ಎರಡೂ ಜಿಲ್ಲೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.