ನ್ಯಾಯಪೀಠದ ಪ್ರವೇಶ ದ್ವಾರಕ್ಕೆ ನ್ಯಾಯಮೂರ್ತಿಗಳ ಕಾರು ಡಿಕ್ಕಿ
ಗುಲ್ಬರ್ಗ: ಇಲ್ಲಿನ ವರ್ತುಲ ರಸ್ತೆಯಲ್ಲಿರುವ ಹೈಕೋರ್ಟ್ ಸಂಚಾರಿ ಪೀಠದ ಆವರಣದ ಕಬ್ಬಿಣದ ಮಹಾದ್ವಾರಕ್ಕೆ ನ್ಯಾಯಮೂರ್ತಿಗಳ ಕಾರ್ ಡಿಕ್ಕಿ ಹೊಡೆದು ನುಜ್ಜುಗುಜ್ಜಾಗಿದೆ. ಈ ಕಾರು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಕಾರಿನ ಮುಂಭಾಗ ಸಂಪೂರ್ಣ ಜಜ್ಜಿ ಹೋಗಿದೆ. ಕಾರು ವೇಗದಲ್ಲಿತ್ತು. ಕಬ್ಬಿಣದ ಗೇಟಿಗೆ ಕಾರು ಗುದ್ದಿದ್ದರಿಂದ ಭಾರಿ ಪ್ರಮಾಣದಲ್ಲಿ ಜಖಂ ಆಗಿದೆ. ಕಾರಿನಲ್ಲಿದ್ದ ಚಾಲಕ ಹಾಗೂ ಗನಮ್ಯಾನ್ಗಳಾದ ಸಿದ್ದರಾಜ ರೇವಣಸಿದ್ದಪ್ಪಹಾಗೂ ಶಿವಕುಮಾರ ಬಸಯ್ಯ ಇವರು ತೀವ್ರ ಗಾಯಗಳನ್ನು ಅನುಭವಿಸಿದ್ದು ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಮನೆಗೇ ಕನ್ನ
ಗುಲ್ಬರ್ಗ: ಇಲ್ಲಿನ ಪೊಲೀಸ್ ಕ್ವಾಟ್ರಸ್ನಲ್ಲಿರುವ ಮಹಿಳಾ ಪೇದೆ ಆಶಾ ಇವರ ಮನೆಗೆ ಕನ್ನ ಹಾಕಿರುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ 1 ಸಾವಿರ ದೋಚಿದ್ದಾರೆ. ಈ ಸಂಬಂಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಸೀಲ್ದಾರ್ ಕಚೇರಿ ಕಮಲಾಪುರಕ್ಕೆ ಸ್ಥಳಾಂತರಿಸುವಂತೆ ಒತ್ತಾಯ
ಗುಲ್ಬರ್ಗ: ಗುಲ್ಬರ್ಗ ಉತ್ತರ ವಲಯದ ವಿಶೇಷ ತಹಸೀಲ್ದಾರ್ ಕಚೇರಿಯನ್ನು ಕಮಲಾಪುರಕ್ಕೆ ಸ್ಥಳಾಂತರಿಸಬೇಕು ಎಂದು ಕಮಲಾಪುರ ತಾಲೂಕು ನಿರ್ಮಾಣ ಹೋರಾಟ ಸಮಿತಿ ಒತ್ತಾಯಿಸಿದರು. ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅವರು, 27 ಡಿಸೆಂಬರ್ 2012ರಂದು ಗುಲ್ಬರ್ಗದ ಉತ್ತರ ವಲಯದ ತಹಸೀಲ್ದಾರ್ ಕಚೇರಿಯನ್ನು ಆಡಳಿತ ಸಿಬ್ಬಂದಿಯೊಂದಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಭಾಗದ ಜನರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರ ಆದೇಶ ಹೊರಡಿಸಿತ್ತು. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಹಿಂದಿನ ಸರ್ಕಾರದ ಆದೇಶ ಉಲ್ಲಂಘನೆ ಮಾಡದೆ ವಿಶೇಷ ತಹಸೀಲ್ದಾರ್ ಕಚೇರಿ ಕಮಲಾಪುರಕ್ಕೆ ಸ್ಥಳಾಂತರಿಸಬೇಕು ಎಂದು ರಾಜಶೇಖರ ಬಿ. ರಾಜೇಶ್ವರ ಒತ್ತಾಯಿಸಿದ್ದಾರೆ.
ವೇದಿಕೆಗೆ ಭೀಮಳ್ಳಿ ನೇಮಕ
ಗುಲ್ಬರ್ಗ: ತಾಲೂಕಿನ ಭೀಮಳ್ಳಿ ಗ್ರಾಮದ ಸಮಾಜ ಸೇವಕ ಮದರ್ಸಾಬ್ ಎನ್. ಭೀಮಳ್ಳಿ ಅವರನ್ನು ಬಹುಜನ ಜಾಗೃತಿಯ ವೇದಿಕೆ ಸಂಘಟನೆಯ ತಾಲೂಕು ಮಹಾಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಬಹುಜನ ಜಾಗೃತಿ ವೇದಿಕೆ ಗುಲ್ಬರ್ಗ ತಾಲೂಕು ಅಧ್ಯಕ್ಷ ರವಿ ಆರ್. ಕೋರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಗ್ರಾಹಕರ ಸೇವೆಯೇ ಬ್ಯಾಂಕಿನ ಜೀವಾಳ'
ಜೇವರ್ಗಿ: ಇಲ್ಲಿನ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಇತ್ತೀಚೆಗೆ ಗ್ರಾಹಕರ ಸಮಾವೇಶ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಖಾ ವ್ಯವಸ್ಥಾಪಕ ಎ.ಆರ್. ಶ್ರೀಧರನ್ ಮಾತನಾಡಿ, ಸಿಂಡಿಕೇಟ್ ಬ್ಯಾಂಕಿನ ಸೇವೆಗಳಾದ ಉಳಿತಾಯ ಖಾತೆ, ಚಾಲ್ತಿಖಾತೆ, ಕ್ಯಾಶ್, ಆರ್.ಟಿ.ಜಿ.ಎಸ್, ಎನ್.ಇ.ಇ.ಟಿ ಇಂಟರ್ನೆಟ್ ಬ್ಯಾಂಕಿಂಗ್, ಎಸ್ಎಂಎಸ್ ಅಲ್ಹಾರ್ಟ್ ಮೊಬೈಲ್ ಬ್ಯಾಂಕಿಂಗ್, ಎಟಿಎಂ ಕಾರ್ಡ್ಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಗ್ರಾಹಕರಿಗೆ ಗುಣಮಟ್ಟದ ಹಾಗೂ ತ್ವರಿತ ಸೇವೆ ಒದಗಿಸುವುದೇ ಬ್ಯಾಂಕಿನ ಗುರಿಯಾಗಿದ್ದು, ಗ್ರಾಹಕರ ಸೇವೆಯೇ ಬ್ಯಾಂಕಿನ ಜೀವಾಳವಾಗಿದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಬಸವಲಿಂಗ ಸಾಗರ ಆಗಮಿಸಿದ್ದರು. ಬ್ಯಾಂಕಿನ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಂಜುನಾಥ ಹೊಸಮನಿ, ಮಹಾದೇವಪ್ಪ , ಚಂದ್ರಾಮಪ್ಪ ಗಾಳೆ, ವಿಶ್ವನಾಥರೆಡ್ಡಿ ರಾಜಳ್ಳಿ, ಮಲ್ಲಣ್ಣ ಗೊಳೇದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಆನಂದ ಶಹಾಬಾದಿ ಅವರು ಕಾರ್ಯಕ್ರಮ ನಿರೂಪಿಸಿ ಗ್ರಾಹಕರನ್ನು ಸ್ವಾಗತಿಸಿದರು ಎಂದು ಜೇವರ್ಗಿ ಸಿಂಡಿಕೇಟ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಉದ್ಯೋಗ ಪತ್ರ ವಿತರಣೆ
ಗುಲ್ಬರ್ಗ: ಇಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿರುವ ಕರ್ನಾಟಕ ಜರ್ಮನ್ ತಂತ್ರಜ್ಞಾನ ತರಬೇತಿ ಸಂಸ್ಥೆ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಕ್ಯಾಡ್(ಕಂಪ್ಯೂಟರ್ ಏಡೆಡ್ ಡಿಸೈನಿಂಗ್) ಕ್ಯಾಮ್ (ಕಂಪ್ಯೂಟರ್ ಏಡೆಡ್ ಮೆಕ್ಯಾನಿಕ್ಸ್) ಹಾಗೂ ಕಂಪ್ಯೂಟರ್ ನೆಟ್ವರ್ಕಿಂಗ್ ವಿಭಾಗದಲ್ಲಿ ಉತ್ತಮ ತರಬೇತಿ ಪಡೆದು ಯಶಸ್ವಿಯಾಗಿ ಕೋರ್ಸ್ ಪೂರೈಸಿರುವ ಹಾಗೂ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗವನ್ನು ಪಡೆದಿರುವ 100 ಕ್ಕೂ ಅಧಿಕ ಪ್ರತಿಭೆಗಳಿಗೆ ಪ್ರಮಾಣಪತ್ರ, ಉದ್ಯೋಗ ಪತ್ರ ವಿತರಣೆ ಕಾರ್ಯಕ್ರಮ ಜೂ.3ರ ಬೆ.11 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಕೋಟಯ್ಯ ಹೇಳಿದ್ದಾರೆ.
ಎನ್ನೆಸ್ಸೆಸ್ ಶಿಬಿರದ ಸಮಾರೋಪ
ಗುಲ್ಬರ್ಗ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಕಮಲಾಪುರ ವತಿಯಿಂದ ಕಿಣ್ಣಿ ಸಡಕ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಅತಿಥಿಗಳಾಗಿ ಅಮೃತಗೌಡ ಮಾತನಾಡಿ, ಯುವಕರು ದೇಶದ ಸಂಪತ್ತು, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅಗತ್ಯ. ಸಮೃದ್ಧವಾದ ಭಾರತ ದೇಶವನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು. ಶರಣ ಬಸಪ್ಪ ವಡ್ಡಣಕೇರಿ, ಎನ್ಎಸ್ಎಸ್ ಅಧಿಕಾರಿ ಹಾಜಿಮಲಂಗ್ ಕಕ್ಕಳಮೇರಿ ಇದ್ದರು. ಡಯಟ್ ಕಮಲಾಪುರದ ಪ್ರಾಚಾರ್ಯ ಮೇಹರುನ್ನಿಸಾ ಬೇಗಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ದಾಸಿಮಯ್ಯ ಗಣಮುಖಿ ನಿರೂಪಿಸಿದರು.
ಉಭಯ ಶ್ರೀಗಳ ಮಂತ್ರಾಲಯ ಪ್ರವೇಶ
ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ನೂತನ ಉತ್ತರಾಧಿಕಾರಿಗಳಾದ ಸುಬುಧೇಂದ್ರ ತೀರ್ಥರ ಪುರಪ್ರವೇಶದ ಅಂಗವಾಗಿ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು. ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸಂಜೆ ಮಂತ್ರಾಲಯಕ್ಕೆ ಆಗಮಿಸುವ ಮಾರ್ಗದಲ್ಲಿ ಮಾಧವರಂ ನಲ್ಲಿ ಉಭಯ ಶ್ರೀಗಳಾದ ಸುಯತೀಂದ್ರ ತೀರ್ಥರು ಹಾಗೂ ಅವರ ಉತ್ತರಾಧಿಕಾರಿ ಸುಬುಧೇಂದ್ರ ತೀರ್ಥರನ್ನು ಭಕ್ತರು ಬೈಕ್ ರ್ಯಾಲಿ ಮೂಲಕ ಬರಮಮಾಡಿಕೊಂಡರು. ನಂತರ ಮಂತ್ರಾಲಯ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯ ಅನುಯಾಯಿಗಳು ತೆರೆದ ವಾಹನದಲ್ಲಿ ಭಕ್ತಿ- ಭಾವದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಶ್ರೀಗಳನ್ನು ಶ್ರೀಮಠಕ್ಕೆ ಕರೆ ತಂದರು. ಮೆರವಣಿಗೆಯಲ್ಲಿ ವಿವಿಧ ಭಜನಾ ತಂಡಗಳು ಹಾಗೂ ಜಾನಪದ ಕಲಾವಿದರ ತಂಡಗಳು ಪಾಲ್ಗೊಂಡಿದ್ದವು. ನಂತರ ಶ್ರೀಗಳು ರಾಘವೇಂದ್ರ ತೀರ್ಥರ ಮೂಲಬೃಂದಾವನದ ದರ್ಶನ ಪಡೆದರು. ಬಳಿಕ ವಾದೀಂದ್ರ ತೀರ್ಥರು, ಸುಶಮೀಂದ್ರ ತೀರ್ಥರು ಸೇರಿದಂತೆ ವಿವಿಧ ಯತಿಗಳ ಬೃಂದಾವನದ ದರ್ಶನ ಪಡೆದರು. ಈ ವೇಳೆ ಶ್ರೀಮಠದ ಪ್ರಮುಖರಾದ ರಾಜಾ ರಾಜಗೋಪಾಲಾಚಾರ್ಯ, ಸುಯಮೀಂದ್ರಾಚಾರ್ಯ, ಆನಂದರಾವ್, ಶ್ರೀಪತಿ ಸೇರಿದಂತೆ ಅನೇಕರಿದ್ದರು.
'ನೆನಪಿನಂಗಳ' ಲೋಕಾರ್ಪಣೆ ಇಂದು
ಗುಲ್ಬರ್ಗ: ಶಾಂತಾ ಪಸ್ತಾಪುರ ಅವರ ಮೂರನೇ ಕೃತಿ ಹಾಗೂ ಎರಡನೇ ಕವನ ಸಂಕಲನ 'ನೆನಪಿನಂಗಳ' ಲೋಕಾರ್ಪಣೆ ಸಮಾರಂಭವನ್ನು ನಗರದ ಕನ್ನಡ ಭವನದಲ್ಲಿ ಜೂ.2ರಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಡಾ. ಈ.ಟಿ. ಪುಟ್ಟಯ್ಯ ಉದ್ಘಾಟಿಸಲಿದ್ದಾರೆ. ಖ್ಯಾತ ವೈದ್ಯ ಸಾಹಿತಿ ಡಾ. ಪಿ.ಎಸ್. ಶಂಕರ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಜೇವರ್ಗಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಕವಿ ಹಿರೇಮಠ ಜೂಗೂರ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಿವೃತ್ತ ಮುಖ್ಯ ಎಂಜಿನಿಯರ್ ಗುರುಶಾಂತಪ್ಪ ಪಸ್ತಾಪುರ ಪಾಲ್ಗೊಳ್ಳಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಎ.ಕೆ. ರಾಮೇಶ್ವರ ಅಧ್ಯಕ್ಷತೆ ವಹಿಸುವರು. ಕಾವ್ಯಾಶ್ರೀ ಮಹಾಗಾಂವಕರ್ ಪುಸ್ತಕ ಕುರಿತು ಮಾತನಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

