ವರುಣಾಗಮ; ಗರಿಗೆದರಿದ ಕೃಷಿ ಕಾರ್ಯ
ಕನ್ನಡಪ್ರಭ ವಾರ್ತೆ ಸುರಪುರ ಜೂ.1
ಕಳೆದೆರಡು ತಿಂಗಳ ಖಡಕ್ ಬಿಸಿಲಿನಿಂದ ತತ್ತರಿಸಿದ ರೈತಾಪಿ ವರ್ಗಕ್ಕೆ ಈ ಬಾರಿ ಮುಂಗಾರು ಪೂರ್ವದಲ್ಲಿ ರೋಹಿಣಿ ಮಳೆ ಆರಂಭವಾಗಿ ಮಂದಹಾಸ ಮೂಡಿಸಿದೆ. ಮಳೆ ಸುರಿಯುತ್ತಿರುವುದರಿಂದ ಈಗ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಆಗಾಗ ಮಳೆ ಬೀಳುತಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ. ರೋಹಿಣಿ ಮಳೆಯಲ್ಲಿ ಬಿತ್ತನೆ ಮಾಡಿದರೆ ಉತ್ತಮ ಫಸಲು ಬಂದು ಒಳ್ಳೆಯ ಇಳುವರಿ ಬರುತ್ತದೆ ಎಂಬ ನಂಬಿಕೆಯಿಂದ ತಾಲೂಕಿನ ಕೆಲ ಹೋಬಳಿಗಳಲ್ಲಿ ಬಿತ್ತನೆ ಕಾರ್ಯ ಬರದಿಂದ ಸಾಗಿದೆರೆ, ಇನ್ನು ಕೆಲ ಕಡೆ ಬಿತ್ತನೆಗಾಗಿ ಹೊಲ ಹದಮಾಡುವ ಕೆಲಸಗಳು ಚುರುಕುಗೊಂಡಿವೆ.
ಈ ವರ್ಷ ಉತ್ತಮ ಮಳೆ: ಮುಂಗಾರು ಮಳೆ ಕಳೆದ ಎರಡು ವರ್ಷಗಳಿಂದ ಕೈಕೊಟ್ಟಿತ್ತು. ಸತತ ಎರಡು ವರ್ಷಗಳ ಬರಗಾಲದಿಂದ ತತ್ತರಿಸಿದ್ದ ರೈತನಿಗೆ ಈ ಬಾರಿ ಮುಂಗಾರು ಮಳೆ ಆರಂಭವಾಗಿದ್ದು ಆಸೆ ಚಿಗಿರೊಡೆದಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ವರ್ಷ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಮುಂಗಾರು ಬೆಳೆ ಈ ಬಾರಿ ರೈತನ ಕೈ ಹಿಡಿಯುವ ಲಕ್ಷಣ ಗೋಚರಿಸುತ್ತಿದೆ ಎನ್ನಬಹುದು.
ಕಳೆದ ಮೂರು ದಿನಗಳಿಂದ ಸುರಪುರದಲ್ಲಿ 4 ಮಿಮೀ ಮಳೆಯಾದರೆ, ಕಕ್ಕೇರಾ ಹೋಬಳಿಯಲ್ಲಿ 4.7 ಮಿಮೀ, ಕೊಡೇಕಲ್ ಹೋಬಳಿಯಲ್ಲಿ 9.8 ಮಿಮೀ, ನಾರಾಯಣಪುರ ಹೋಬಳಿಯಲ್ಲಿ 19 ಮಿಮೀ, ಹುಣಸಗಿ 22 ಮಿಮೀ, ಕೆಂಭಾವಿಯಲ್ಲಿ 2.2 ಮಿಮೀ ಮಳೆಯಾದ ಬಗ್ಗೆ ವರದಿಯಾಗಿದೆ.
ಬಿತ್ತನೆ ಬೀಜ ವಿತರಣೆ: ರೈತರಿಗೆ ಬಿತ್ತನೆಗಾಗಿ ಬೀಜ ರಸಗೊಬ್ಬರ ವಿತರಣೆ ಮಾಡಲು ಕೃಷಿ ಇಲಾಖೆ ಸಮರ್ಪಕ ದಾಸ್ತಾನು ಮಾಡಿಕೊಳ್ಳುತ್ತಿದೆ. ಸಣ್ಣ ಮತ್ತು ಅತೀ ಸಣ್ಣ ರೈತರಿಗಾಗಿ ಪ್ರತಿ ಎಕರೆಗೆ 1.5 ಕೆ.ಜಿ.ಯಂತೆ ಬೀಜ ವಿತರಣೆ ಮಾಡಲಾಗುತ್ತಿದೆ.
ಈಗಾಗಲೇ ಪ್ರತಿ ಹೋಬಳಿ ಕೇಂದ್ರಗಳಿಗೆ 450 ಕೆಜಿ ತೊಗರಿ, 180 ಕೆಜಿ ಹೆಸರು, 5 ಕ್ವಿಂ. ಸಜ್ಜೆ ಬೀಜಗಳು ಬಂದಿದೆ. ಆದರೆ ಬೇಡಿಕೆಗನುಗುಣವಾಗಿ ಪೂರೈಕೆಯಾಗಿಲ್ಲ. ಮೂರುನಾಲ್ಕು ದಿನಗಳಲ್ಲಿ ಸಂಪೂರ್ಣವಾಗಿ ಬೀಜ ಪೂರೈಕೆಯಾಗುವ ಸಾಧ್ಯತೆ ಇದೆ. ಈ ಬಾರಿ ರಸಗೊಬ್ಬರ ಮತ್ತು ಬೀಜ ವಿತರಣೆಯಲ್ಲಿ ರೈತರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದೆಂದು ಸಹಾಯಕ ಕೃಷಿ ನಿರ್ದೇಶಕ ಕೇಸರಸಿಂಗ್ ಹಜಾರೆ ತಿಳಿಸಿದ್ದಾರೆ.
ಸಹಕಾರಿ ಸಂಘಗಳಿಂದ ವಿತರಣೆ: ರಸಗೊಬ್ಬರವನ್ನು ಸಹಕಾರಿ ಸಂಘಗಳ ಮೂಲಕ ವಿತರಿಸಲಾಗುತ್ತಿದೆ. ಇಲಾಖೆಯಿಂದ ಜಿಂಕ್ ಜಿರಾಕ್, ಜಿಪ್ಸಂ ಮತ್ತು ಸಾವಯವ ಅಗ್ರಿ ಗೋಲ್ಡ್ ಗೊಬ್ಬರ ನೀಡಲಾಗುವುದು. ಬಿತ್ತನೆಗೆ ಅಗತ್ಯ ತೇವಾಂಶ ಇದ್ದಲ್ಲಿ ಹೆಸರು, ಸಜ್ಜೆ, ತೊಗರಿ ಮತ್ತು ಸೂರ್ಯಕಾಂತಿ ಬಿತ್ತುವುದು ಯೋಗ್ಯ. ಈ ರೋಹಿಣಿ ಮಳೆಯಲ್ಲಿ ಬಿತ್ತಿದರೆ ಉತ್ತಮ ಇಳುವರಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

