ಗುಲ್ಬರ್ಗಾ

ಹೈನುಗಾರಿಕೆಗೆ ಪ್ರೋತ್ಸಾಹ ಕ್ಷೀರಕ್ರಾಂತಿಗೆ ಉತ್ಸಾಹ

Published On :

ಕನ್ನಡಪ್ರಭ ವಾರ್ತೆ ,   ಗುಲ್ಬರ್ಗ ,   ಜೂ.1
ಗುಲ್ಬರ್ಗ- ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯ ಗುಲ್ಬರ್ಗ ಹಾಲು ಒಕ್ಕೂಟ ಬರುವ ಸುಗ್ಗಿಯ ದಿನಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸಿ ಹೈನುಗಾರಿಕೆಗೆ ಪ್ರೋತ್ಸಾಹಿಸುವ, ಆ ಮೂಲಕ ಆರ್ಥಿಕ ಪ್ರಗತಿಗಾಗಿ ಹೊಸ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ಮುಂದಾಗಿದೆ.
ಜೂನ್ 1ರ ವಿಶ್ವ ಹಾಲಿನ ದಿನಾಚರಣೆಯಂದೇ ಇಲ್ಲಿನ ಡೈರಿ ಘಟಕದ ಸಿಬ್ಬಂದಿ, ಅಧ್ಯಕ್ಷರಾದಿಯಾಗಿ ಎಲ್ಲರೂ ಈ ಕ್ಷೀರಕ್ರಾಂತಿ ಸಂಕಲ್ಪ ಮಾಡಿದ್ದು, ಬರುವ ಸುಗ್ಗಿ ಕಾಲದ 8 ತಿಂಗಳು ನಿತ್ಯ 1 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಗುರಿ ಹೊಂದಿದ್ದಾರೆ.
ಸದ್ಯ ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿತ್ಯ 40 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಬೇಡಿಕೆ 60ರಿಂದ 70 ಸಾವಿರ ಲೀಟರ್‌ನಷ್ಟಿದೆ. ಹೀಗಾಗಿ ಪಕ್ಕದ ಬಿಜಾಪುರ ಡೈರಿಯಿಂದ ನಿತ್ಯ 25 ಸಾವಿರ ಲೀಟರ್ ಹಾಲು ಖರೀದಿಸಲಾಗುತ್ತಿದೆ. ಬೇಸಿಗೆಯ ಅವಧಿ ಅಲ್ಲದೆ ಹೋದರೂ ಸುಗ್ಗಿಯ 8 ತಿಂಗಳು ಕಾಲ ಹೆಚ್ಚಿನ ಹಾಲು ಉತ್ಪಾದಿಸುವ ಮೂಲಕ 8 ತಿಂಗಳು ಸ್ವಾವಲಂಬನೆ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಗುಲ್ಬರ್ಗ- ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ್, ವ್ಯವಸ್ಥಾಪಕ ನಿರ್ದೇಶಕ ಡಾ. ಬುಕ್ಕಾ ಮಲ್ಲಿಕಾರ್ಜುನ, ಮಾರುಕಟ್ಟೆ ವ್ಯವಸ್ಥಾಪಕ ವಿಜಯೇಂದ್ರ ದೇಶಪಾಂಡೆ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಲು ಉತ್ಪಾದನೆ ಹೆಚ್ಚಿಸುವ, ಹೈನುಗಾರಿಕೆಗೆ ಜನಮನದಲ್ಲಿ ಆಸಕ್ತಿ ಕೆರಳಿಸುವ ದಿಶೆಯಲ್ಲಿ ಡೈರಿ ಹಾಕಿಕೊಂಡಿರುವ ಹಲವು ಯೋಜನೆಗಳ ಮಾಹಿತಿಯನ್ನೂ ಪತ್ರಕರ್ತರಿಗೆ ನೀಡಿದರು. ಅವರು ನೀಡಿರುವ ಮಾಹಿತಿಯ ನೋಟ ಇಲ್ಲಿದೆ.
 ಜಿಲ್ಲಾ ಸಹಕಾರಿ ಬ್ಯಾಂಕ್, ನ್ಯಾಷನಲ್ ಡೈರಿ ಡೆವಲ್ಪ್ಮೆಂಟ್ ಯೋಜನೆ, ನಬಾರ್ಡ್ ಸಹಕಾರದೊಂದಿಗೆ ಗುಲ್ಬರ್ಗ, ಬೀದರ್, ಯಾದಗಿರಿಗಳಲ್ಲಿ ಅರ್ಹ ಫಲಾನುಭವಿಗಳಿಗೆ 25 ಕೋಟಿ ವೆಚ್ಚದಲ್ಲಿ ಕಾಮಧೇನು ಯೋಜನೆ ಅನುಷ್ಠಾನ, ಹಸುಗಳ ವಿತರಣೆ.
 ಈಗಿರುವ 343 ಸಂಘಗಳು, 132 ಹಾಲು ಶೇಖರಣೆ ಘಟಕಗಳನ್ನು ಹೊರತುಪಡಿಸಿ ಇನ್ನೂ 120 ಸಂಘಗಳ ಸ್ಥಾಪನೆಗೆ ಕ್ರಮ.
 ಈಗಿರುವ 60 ಕ್ಷೀರಪಥಗಳ (ಹಾಲು ಸಂಗ್ರಹ ಮಾರ್ಗಗಳು)ನ್ನು ಹೊರತುಪಡಿಸಿ 3 ಜಿಲ್ಲೆಗಳಲ್ಲಿ ಹೊಸ 8 ಹಾಲು ಸಂಗ್ರಹದ ಪಥಗಳ ಆರಂಭ.
 ಒಂದೊಂದು ಕ್ಷೀರಪಥದಲ್ಲಿ 15 ಹಳ್ಳಿಗಳಿಂದ ಹಾಲು ಸಂಗ್ರಹ ಗುರಿ.
 ಯಾದಗಿರಿ ಜಿಲ್ಲೆಯಲ್ಲಿನ ಸುರಪುರ- 2, ಶಹಾಪುರ- 2 ಹಾಲು ಸಂಗ್ರಹ ಪಥಗಳಿಗೆ ಚಾಲನೆ.
 ಗುಲ್ಬರ್ಗ ಜಿಲ್ಲೆಯಲ್ಲಿನ ಚಿಂಚೋಳಿ ಹಾಗೂ ಚಿತ್ತಾಪುರದಲ್ಲಿಯೂ ಹೈನುಗಾರಿಕೆ ಪ್ರೋತ್ಸಾಹಿಸಲು ಕ್ಷೀರಪಥಗಳ ಆರಂಭ.
 ಬೀದರ್ ಜಿಲ್ಲೆಯ ಔರಾದ್ ಹಾಗೂ ಬಸವಕಲ್ಯಾಣ- ಭಾಲ್ಕಿಯಲ್ಲಿ ಹೊಸ ಕ್ಷೀರಪಥಾರಂಭ.
 ಮೂರು ಜಿಲ್ಲೆ ಸೇರಿದಂತಿರುವ 1,960 ಹಳ್ಳಿಗಳ ಪೈಕಿ 500 ಹಳ್ಳಿಗಳಲ್ಲಿ ಹೈನುಗಾರಿಕೆ ಚಟುವಟಿಕೆಗೆ ಯೋಜನೆ.
 ಭೀಮಾ ತೀರದಲ್ಲಿ ಬರುವ 60 ಹಳ್ಳಿಗಳಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು.
 3 ಜಿಲ್ಲೆಗಳ ವ್ಯಾಪ್ತಿಯ ಪ್ರಮುಖ 17 ಬಸ್ ನಿಲ್ದಾಣಗಳಲ್ಲಿ ನಂದಿನಿ ಪಾರ್ಲರ್ ಸ್ಥಾಪನೆ
ರೈತರಿಗೆ ಹೆಚ್ಚಿನ ಪ್ರೋತ್ಸಾಹಧನ: ಗುಲ್ಬರ್ಗ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ನಿತ್ಯ 40 ಸಾವಿರ ಲೀಟರ್ ಹಾಲು ಉತ್ಪಾದಿಸುವ ರೈತರಿಗೆಲ್ಲರಿಗೂ ಮೇ 15ರಿಂದಲೇ ಲೀ.ಗೆ ಹೆಚ್ಚುವರಿಯಾಗಿ 4 ಸಹಾಯಧನ ಪಾವತಿಸಲಾಗುತ್ತಿದೆ. ಇದರಿಂದ ರೈತರು ಸಂತಸದಲ್ಲಿದ್ದಾರೆ.
3.5 ಕೊಬ್ಬಿನಾಂಶವಿರುವ ಪ್ರತಿ ಲೀಟರ್ ಆಕಳ ಹಾಲಿಗೆ ಕನಿಷ್ಠ 21, 5.50 ಕೊಬ್ಬಿನಾಂಶವಿರುವ ಆಕಳ ಹಾಲಿಗೆ ಗರಿಷ್ಠ 30. ಇದಲ್ಲದೆ 9 ಕೊಬ್ಬಿನಾಂಶವಿರುವ ಎಮ್ಮೆ ಹಾಲು ಪ್ರತಿ ಲೀ.ಗೆ ಕನಿಷ್ಠ 27, 10 ಕೊಬ್ಬಿನಾಂಶವಿರುವ ಹಾಲಿಗೆ ಗರಿಷ್ಠ 50 ನೀಡಿ ಖರೀದಿಸಲಾಗುತ್ತಿದೆ. ಸರ್ಕಾರದ ಸಹಾಯಧನ ಸೇರಿದಂತೆ ಹೈನುಗಾರಿಕೆ ರೈತರಿಗೆ ಆಕರ್ಷಕ ಹಣಕಾಸು ನೆರವು ಇದೆ. ರೈತರಿಗೆ ಪ್ರತಿ ವಾರಕ್ಕೊಮ್ಮೆ ಸಹಾಯಧನ ನೀಡಲಾಗುತ್ತಿದೆ ಎಂದು ಅಧ್ಯಕ್ಷ ಬಿರಾದಾರ ಮಲ್ಲಿಕಾರ್ಜುನ ಹೇಳಿದ್ದಾರೆ.
3 ಜಿಲ್ಲೆ ವ್ಯಾಪ್ತಿಯಲ್ಲಿ 250 ಏಜಂಟರಿದ್ದಾರೆ. ಇವರ ಸಂಖ್ಯೆ ಹೆಚ್ಚಿಸಲು ಹಾಗೂ ಹಾಲಿನ ಮಾರುಕಟ್ಟೆ ವಿಸ್ತರಿಸುವ ಕುರಿತು ಜೂ.7ರಂದು ಡೈರಿಯಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ. ಬರುವ ದಿನಗಳಲ್ಲಿ ಮಾರುಕಟ್ಟೆ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವಿಶ್ವ ಹಾಲು ದಿನದ ರ್ಯಾಲಿ: ಗುಲ್ಬರ್ಗ ಡೈರಿ ಅಂಗಳದಿಂದ ಶನಿವಾರದ ವಿಶ್ವ ಹಾಲು ದಿನಾಚರಣೆಯ ಜಾಗೃತಿ ರ್ಯಾಲಿ ಆರಂಭಿಸಲಾಯ್ತು. ಅಧ್ಯಕ್ಷ ಮಲ್ಲಿಕಾರ್ಜುನ, ಎಂಡಿ ಡಾ. ಬುಕ್ಕಾ, ಮಾರುಕಟ್ಟೆ ಅಧಿಕಾರಿ ವಿಜಯೇಂದ್ರ ದೇಶಪಾಂಡೆ ಸೇರಿದಂತೆ ಅನೇಕ ಸಿಬ್ಬಂದಿ, ಏಜಂಟರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.