ನೇಪಾಳಿ ವರನ ವರಿಸಿದ ಲಿಂಗಾಯಿತ ವಧು
ಕ.ಪ್ರ. ವಾರ್ತೆ ಯಾದಗಿರಿ ಜೂ. 3
ಆತ ನೇಪಾಳಿ ಯುವಕ. ಕೆಲಸ ಅರಸಿ ಇಲ್ಲಿಗೆ ಬಂದು ಈಗ ಇಲ್ಲಿಯೇ ತನ್ನ ಬಾಳ ಸಂಗಾತಿಯನ್ನು ವರಿಸಿದ್ದಾನೆ. ಆದರೆ ಇದು ಅಂತರ್ಜಾತಿ ವಿವಾಹವೇ ಹೊರತು ಪ್ರೇಮ ವಿವಾಹ ಪ್ರಕರಣವಲ್ಲ.
ಕಮಲ್ ಭಂಡಾರಿ ಎಂಬ ನೇಪಾಳಿ ಯುವಕ ಕಳೆದ ಮೇ 31ರಂದು ಕಸಬಾ ಲಿಂಗಸ್ಗೂರಿನ ಲಿಂಗಾಯಿತ ಯುವತಿ ವಿಜಯಲಕ್ಷ್ಮಿ ಜೊತೆಗೆ ಸಪ್ತಪದಿ ತುಳಿದಿದ್ದಾನೆ. ಕಮಲ್ ಕಳೆದ 5 ವರ್ಷಗಳ ಹಿಂದೆ ಕೆಲಸ ಅರಸಿ ಯಾದಗಿರಿಗೆ ಬಂದಿದ್ದ. ಇಲ್ಲಿಯ ಗಾಂಧಿ ಚೌಕದಲ್ಲಿನ ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ನಂತರ ಮತ್ತೆ ನೇಪಾಳಕ್ಕೆ ಹೋಗಲು ಮನಸ್ಸು ಮಾಡದ ಈತ ಇಲ್ಲಿಯೇ ತನಗೊಂದು ವಧು ನೋಡುವಂತೆ ತಾನು ಕೆಲಸಕ್ಕಿದ್ದ ಅಂಗಡಿ ಮಾಲೀಕರಲ್ಲಿ ಮನದಾಸೆ ಬಿಚ್ಚಿಟ್ಟ.
ವಧುವಿಗಾಗಿ ಶೋಧ- ಒಪ್ಪಿಗೆ: ಮಾಲೀಕ ಅಮರೇಶ ಹಿರೇಮಠ ಹಾಗೂ ಅವರ ಸ್ನೇಹಿತರು ನೇಪಾಳಿ ಯುವಕನಿಗೆ ವಧುವನ್ನು ಅರಸತೊಡಗಿದರು. ಆಗ ಕಸಬಾ ಲಿಂಗಸ್ಗೂರಿನ ಮಾರುತೆಪ್ಪ ಗುಂತಗೋಳ ಎಂಬವರನ್ನು ಸಂಪರ್ಕಿಸಿದರು. ಅವರು ತಮ್ಮ ಮಗಳು ವಿಜಯಲಕ್ಷ್ಮಿಯನ್ನು ಕೇಳಿದಾಗ ಅವರೂ ಒಪ್ಪಿಗೆ ನೀಡಿದಳು. ಯುವತಿಯ ಪಾಲಕರೂ ಸಮ್ಮತಿಸಿ ನೇಪಾಳಿ ಯುವಕನಿಗೆ ತಮ್ಮ ಮಗಳನ್ನು ಧಾರೆಯೆರೆಯಲು ಒಪ್ಪಿದರು.
ಲಿಂಗಾಯತ ಸಂಪ್ರದಾಯದಂತೆ..: ಲಿಂಗಾಯಿತ ಸಮುದಾಯಕ್ಕೆ ಸೇರಿದ್ದರೂ ಅವರು ಜಾತಿ ಮೀರಿ ಮಗಳನ್ನು ನೇಪಾಳಿ ಯುವಕನಿಗೆ ಮಗಳನ್ನು ನೀಡಲು ಒಪ್ಪಿಗೆ ನೀಡಿದ್ದು ಮಾದರಿಯೆನಿಸಿದೆ. ಮೇ 31ರಂದು ಲಿಂಗಸ್ಗೂರಿನಲ್ಲಿ ಇವರಿಬ್ಬರ ವಿವಾಹ ಲಿಂಗಾಯತ ಧರ್ಮದ ಸಂಪ್ರದಾಯದಂತೆ ನೆರವೇರಿತು.
ಇಲ್ಲಿ ನಡೆದದ್ದು ಎರಡು ಮನಸ್ಸುಗಳ ಮಧ್ಯದ ಮದುವೆ. ರೀತಿ ರಿವಾಜು, ಜಾತಿ- ಧರ್ಮ, ನೀತಿ, ಸೀಮೆಗಳನ್ನು ದಾಟಿದ ಮದುವೆ ಎಂದರೆ ತಪ್ಪಾಗಲಿಕ್ಕಿಲ್ಲ. ಯಾದಗಿರಿಯ ಅಮರೇಶ ಹಿರೇಮಠ, ಇಮ್ಯಾನುವೆಲ್ ಕ್ರಿಸ್ಟೋಫರ್, ಶೇಖ ಸಲೀಮ್ ಶಿಲೇದಾರ, ಪಂಪಯ್ಯ ಮಠ, ಚೆಂದ್ರಶೇಖರ ಮಾವನಿ ಹಾಗೂ ಮಿತ್ರರು ನೇಪಾಳಿ ಯುವಕ ಹಾಗೂ ಲಿಂಗಾಯಿತ ಯುವತಿಯ ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

