ಗುಲ್ಬರ್ಗಾ

ಗುಲ್ಬರ್ಗ ಹೊಂಡ ಸಿಟಿ...

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.3
ನಿತ್ಯ ಸಂಚಾರದ ಪ್ರಮುಖ ರಸ್ತೆಗಳೇ ಹೀಗೆ ಕುಳಿ ಬಿದ್ದು ವರ್ಷ ಕಳೆದರೂ ಯಾರೂ ಕೇಳುವವರೇ ಇಲ್ಲದಂತಾಗಿದೆ. ಗುಲ್ಬರ್ಗ ಹೊಂಡ ಸಿಟಿಯಾಗದೆ ಇನ್ನೇನಾಗಬೇಕು? ಮಹಾನಗರ ಪಾಲಿಕೆಗೆ ಚುನಾವಣೆಯಾಗಿ 3 ತಿಂಗಳಾಯ್ತು, ಪುರಪಿತೃಗಳು ನಮಗೇ ಅಧಿಕಾರ ಸಿಕ್ಕಿಲ್ಲ, ಇನ್ನು ರಸ್ತೆಗಳ ಬಗ್ಗೆ ನಾವೇನ್ ಮಾತನಾಡಲು ಸಾಧ್ಯವೆಂದು ಕೈ ಚೆಲ್ಲಿದ್ದಾರೆ.
ಪ್ರಸಕ್ತ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿರುವ ದಕ್ಷಿಣೋತ್ತರ ಶಾಸಕದ್ವಯರಾದ ದತ್ತು ಪಾಟೀಲ್, ಖಮರುಲ್ ಇಸ್ಲಾಂ ಇವರಿನ್ನೂ ಶಾಸಕ ಸ್ಥಾನ, ಪ್ರಮಾಣ ವಚನ, ಮಂತ್ರಿಗಿರಿ, ಸಚಿವ ಖಾತೆಗಳು, ಜಿಲ್ಲಾ ಉಸ್ತುವಾರಿ ಎಂದು ಗೌಜು ಗದ್ದಲದಲ್ಲಿದ್ದಾರೆ. ಕಳೆದೊಂದು ವರ್ಷದಿಂದ ಜನರನ್ನು ಕಾಡುತ್ತಿರುವ ಕುಳಿ ತುಂಬಿದ ರಸ್ತೆಗಳ ಸಮಸ್ಯೆ, ಇತರೆ ಸಮಸ್ಯೆಗಳು ದಕ್ಷಿಣದ ನೂತನ ಶಾಸಕ ದತ್ತು ಗೌಡರಿಗಾಗಲಿ, ಜಿಲ್ಲಾ ಪಾಲಕ ಮಂತ್ರಿಯಾಗಿರುವ ಖಮರುಲ್ ಇಸ್ಲಾಂ ಅವರಿಗಾಗಲೇ ಹೊಸತೇನಲ್ಲ.
ಆದರೆ ಯಾಕೋ ಏನೋ ಶಾಸಕದ್ವಯರು ರಸ್ತೆಗಳ ಕುಳಿ ಮುಚ್ಚುವ ಕೆಲಸಕ್ಕೆ ನಿರೀಕ್ಷಿಸಿದಂತೆ ಆದ್ಯತೆ ನೀಡುವ ಮನಸ್ಸು ಇನ್ನೂ ಮಾಡುತ್ತಿಲ್ಲ. ಇದರಿಂದಾಗಿ ಜನದಟ್ಟಣೆಯ ಈ ಪ್ರಮುಖ ರಸ್ತೆಗಳಲ್ಲಿ ನಿತ್ಯವೂ ನರಕ ಯಾತನೆ ಅನುಭವಿಸುವ ಪಾಡು ನಗರವಾಸಿಗಳಿಗೆ ತಪ್ಪದಂತಾಗಿದೆ.
ದುರಂತವೇ ಸರಿ: ಈಗಂತೂ ಮಳೆಗಾಲ, ಶಾಲೆಗಳು ಆರಂಭವಾಗಿವೆ. ಕುಳಿ ತುಂಬಿದ ರಸ್ತೆಗಳಲ್ಲಿ ನೀರು ನಿಂತರಂತೂ ರಸ್ತೆ ಯಾವುದು, ಕುಳಿ ಯಾವುದು ಎಂದು ಗೊತ್ತೇ ಆಗದು. ಹೀಗಾಗಿ ಹೆಚ್ಚಿನ ಅಪಘಾತ, ರಸ್ತೆಯ ಮೇಲಿನ ತೊಂದರೆಗಳು ದ್ವಿಗುಣಗೊಳ್ಳುವ ಸಂದರ್ಭ ಇದು. ಇದರಿಂದಾಗಿ ಜನರು ಹೌಹಾರಿದ್ದಾರೆ. ಹೇಗಪ್ಪ ಕುಳಿ ತುಂಬಿರುವ ರಸ್ತೆಗಳಲ್ಲಿ ನಾಲ್ಕು ತಿಂಗಳ ಮಳೆಗಾಲದ ದಿನಗಳನ್ನು ದೂಡುವುದು ಎಂದು ಬೆಚ್ಚಿ ಬಿದ್ದಿದ್ದಾರೆ.
ಸೇಂಟ್ ಜೋಸೆಫ್, ಎಸ್ಬಿ ಪಬ್ಲಿಕ್ ಶಾಲೆ, ಕಾಲೇಜುಗಳು, ಎನ್ವಿ ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರಪತಿ ಚೌಕ್- ಆನಂದ ಹೊಟೇಲ್ ರಸ್ತೆಯಂತೂ ಹದಗೆಟ್ಟು ಹೋಗಿ ವರ್ಷಗಳೇ ಕಳೆದಿದೆ. ಆದರೂ ಯಾರು ಅದರತ್ತ ನೋಡುತ್ತಿಲ್ಲ. ನಗರ ಜನನಾಯಕರು(ಹಿಂದಿನವರು- ಇಂದಿನವರು), ಜಿಲ್ಲಾಡಳಿತದ ಹಿರಿಯ ಅಧಿಕಾರಿ ವರ್ಗ, ಪಾಲಿಕೆಯ ಆಯುಕ್ತರೇ ಮೊದಲಾದಂತಹ ಸಿಬ್ಬಂದಿ ವರ್ಗ ಎಲ್ಲರೂ ಈ ರಸ್ತೆ ನಿತ್ಯ ಬಳಸುತ್ತಿದ್ದರೂ ಇಲ್ಲಿ ಬಾಯಿ ತೆರೆದು ಬಲಿಗಾಗಿ ಕಾದಂತಿರುವ ಕುಳಿಗಳನ್ನು ಮುಚ್ಚಲು ಬುಟ್ಟಿ ಮಣ್ಣು- ಮುರುಮ್ ಆದರೂ ಚೆಲ್ಲಬೇಕು ಎಂದು ಕ್ರಮಕ್ಕೆ ಮುಂದಾಗದೆ ಸುಮ್ಮನಿರುವುದು ನಗರವಾಸಿಗಳ ಪಾಲಿನ ದುರವಂತವಲ್ಲದೆ ಮತ್ತೇನು?
ಪಾಲಿಕೆಗೆ ರಸ್ತೆಗಳ ಅಧೋಗತಿ ವಿವರಿಸಿ ಸುದಾರಣೆ ಯಾವಾಗ ಎಂದರೆ ಎಸ್‌ಎಫ್‌ಸಿ ಅನುದಾನದ ಮಾತು ಹೇಳುತ್ತ ಕನ್ನಡಿ ಗಂಟು ತೋರಿಸಿ ಪಾಲಿಕೆಯವರು ಸುಮ್ಮನಾಗುತ್ತಿದ್ದಾರೆ. ಕಳೆದಾರು ತಿಂಗಳಿಂದ ಹಣ ಸಾಕಷ್ಟು ಪಾಲಿಕೆಗೆ ಬಂದರೂ ಅದರ ಸದ್ವಿನಿಯೋಗಕ್ಕೆ ಯಾರೂ ಕ್ರಮ ಜರುಗಿಸುತ್ತಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಯಾಕೆ, ಏನು ಎಂದು ಕೇಳದೆ ಮೌನತಾಳಿದ್ದೇ ಪರಿಸ್ಥಿತಿ ಹದಗೆಡಲು ಕಾರಣ.
ವರ್ಷ 3 ಉರುಳಿದರೂ ಮುಗಿದಿಲ್ಲ ಕಾಮಗಾರಿ: ನಗರೋತ್ಥಾನ ಯೋಜನೆಯಡಿಯಲ್ಲಿ ನಗರದ ನಾಲ್ಕು ರಸ್ತೆಗಳ ಕಾಮಗಾರಿ ಕೈಗೆತ್ತಿಕೊಂಡು ವರ್ಷ 3 ಉರುಳಿದರೂ ಇನ್ನೂ ಕೆಲ ರಸ್ತೆಗಳ ಕಾಮಗಾರಿಗೆ ಗ್ರಹಣ ಅಮರಿದೆ. ಇಲ್ಲಿನ ಆಡಳಿತ ವ್ಯವಸ್ಥೆಗೆ, ಜನಪರ ಕೆಲಸಗಳನ್ನು ಬಹುಬೇಗ ಮಾಡಿ ಮುಗಿಸಬೇಕು ಹೇಗೆ ಎಂಬ ಮಹಾನಗರ ಪಾಲಿಕೆಯ ನಿಧಾನವೇ ಪ್ರಧಾನ ಎಂಬ ನಿಲುವಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?
ಶರಣಬಸವೇಶ್ವರ ಮಂದಿರದಿಂದ ಸ್ಟೇಷನ್ ಬಜಾರ್ ಸಂಪರ್ಕಿಸುವ ರಸ್ತೆ ಇನ್ನೂ ಕುಟುಂತ್ತಲೇ ಸಾಗಿದ್ದರೂ ಯಾರೂ ಕೇಳುವವರಿಲ್ಲ. ಗುತ್ತಿಗೆದಾರರ ಮನಸೋ ಇಚ್ಛೆ ಕಾಮಗಾರಿಗೆ ಅಧಿಕಾರಿಗಳು- ಎಂಜಿನಿಯರ್‌ಗಳು ಕುಣಿಯುತ್ತಿದ್ದಾರೆಯೇ ಹೊರತು ಯಾರೂ ಯಾಕೆ ನಿಗದಿತ ಅವಧಿಯೊಳಗೆ ಕೆಲಸವಾಗುತ್ತಿಲ್ಲ ಎಂದು ಕೇಳುವ ಮೂಲಕ ಮೂಲ ಸೌಕರ್ಯಗಳ ಕಾಮಗಾರಿಗೆ ವೇಗ ನೀಡುವ ಕೆಲಸ ಮಾಡುತ್ತಿಲ್ಲ.
ಎಲ್ಲ ರಸ್ತೆಗಳಲ್ಲಿ ನಿತ್ಯವೂ ಸಂಚಾರ ದಟ್ಟಣೆ ಭೂತ ಕಾಡಲಾರಂಭಿಸಿದೆ. ಲಾಲಗೇರಿ ಕ್ರಾಸ್, ಜೇವರ್ಗಿ ಕ್ರಾಸ್, ರಾಮ ಮಂದಿರ ಸರ್ಕಲ್ ಕ್ರಾಸ್, ಪಟೇಲ್ ಸರ್ಕಲ್ ಕ್ರಾಸ್, ಅನ್ನಪೂರ್ಣ ದವಾಖಾನೆ ರಸ್ತೆಯ ತಿರುವು ಇಲ್ಲೆಲ್ಲಾ ಗಂಟೆಗಟ್ಟಲೇ ಸಂಚಾರ ದಟ್ಟಣೆ ಕಾಡುತ್ತಿರುವುದರಿಂದ ವಾಹನ ಸವಾರರಂತೂ ಯಾವಾಗಾದರೂ ಈ ಗೋಳಿನಿಂದ ಮುಕ್ತಿ ದೊರಕುವುದೋ ಎಂದು ಹೌಹಾರಿದ್ದಾರೆ.
ಸೊಂಟ- ಬೆನ್ನುನೋವು- ಸ್ಪಾಂಡೆಲೆಟಿಸ್ ಕಾಟ: ಗುಲ್ಬರ್ಗ ನಗರದ ಕುಳಿ ತುಂಬಿದ ರಸ್ತೆಗಳು ಜನಾರೋಗ್ಯದ ಮೇಲೂ ದುಷ್ಪರಿಣಾಮ ಬೀರಲಾರಂಭಿಸಿವೆ. ನಿತ್ಯ ಬೈಕ್ ಸವಾರರು, ವಾಹನ ಬಳಕೆದಾರರಲ್ಲಿ ಹೆಚ್ಚಿನವರು ಬೆನ್ನು- ಸೊಂಟ ನೋವು ಹಾಗೂ ಸ್ಪಾಂಡಿಲೆಟಿಸ್‌ನಿಂದ ಬಳುವಂತಾಗಿದೆ. ಇಲ್ಲಿನ ಹಿರಿಯ ವೈದ್ಯರುಗಳ ಪ್ರಕಾರ ಇದಕ್ಕೆಲ್ಲ ಹದಗೆಟ್ಟ ರಸ್ತೆಗಳೇ ಮೂಲ ಕಾರಣವಂತೆ.
ಮೂಳೆ ಹಾಗೂ ನರರೋಗ ತಜ್ಞರ ಪ್ರಕಾರ, ಕುಳಿ ತುಂಬಿದ ರಸ್ತೆಗಳಲ್ಲಿ ಹಾಗೂ ಹರಿದು ಹೋದ ರಸ್ತೆಗಳಲ್ಲಿ ನಿತ್ಯ ಬೈಕ್ ಸಂಚಾರ ಮಾಡಿದರೆ ಸೊಂಟ ನೋವು- ಸ್ಪಾಂಡಿಲಿಟಿಸ್ ತಪ್ಪಿದ್ದಲ್ಲ. ಇದಲ್ಲದೆ ಕಾರು ಇತರೆ ವಾಹನಗಳ ಸವಾರರಿಗೂ ಈ ಸಮಸ್ಯೆ ಕಾಡದೆ ಇರದು.
ನಗರವಾಸಿಗಳ ಆರೋಗ್ಯಕ್ಕೆ ಸಂಚಕಾರ ಬಂದರೂ ಆಡಳಿತದ ಚುಕ್ಕಾಣಿ ಹಿಡಿದವರು, ಅಧಿಕಾರಿಗಳು ರಸ್ತೆಗಳ ದುರಸ್ತಿಗೆ ಮುಂದಾಗುತ್ತಿಲ್ಲ. ಬದಲಾಗಿ ಮುಂದುವರಿದಂತಹ ತಂತ್ರಜ್ಞಾನದ ಹಾಗೂ ಹೊಚ್ಚ ಹೊಸ ಬ್ರಾಂಡ್ ವಾಹನಗಳನ್ನು ತಾವು ಬಳಸುತ್ತ ಬಡ, ಮಧ್ಯಮ ವರ್ಗದವರಿಗೆ ಧೂಳು ಹಾಗೂ ಕುಳಿ ತುಂಬಿದ ರಸ್ತೆಗಳೇ ಗತಿ ಎಂದು ತಮ್ಮ ಪಾಡಿಗೆ ತಾವಿದ್ದಾರೆ.
-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.