ದಾಸ್ತಾನು ಅನಧಿಕೃತ ರಫ್ತು ಮಾಡಿದರೆ ಕ್ರಮ: ಜಿಲ್ಲಾಧಿಕಾರಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.3
ಖಾಸಗಿ ದಾಸ್ತಾನುದಾರರು ಅನಧಿಕೃತವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಬೇರೆ ಕಡೆ ರಫ್ತು ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಜಿಲ್ಲಾ ಪಂಚಾಯ್ತಿ ಹಳೆ ಸಭಾಂಗಣದಲ್ಲಿ ನಡೆದ ಕೃಷಿ ಮತ್ತು ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ದಾಸ್ತಾನುದಾರರು ಯಾವುದೇ ಕಾರಣಕ್ಕೂ ಅಭಾವ ಸೃಷ್ಟಿಸುವ ಕೆಲಸ ಮಾಡಬಾರದು ಎಂದರು.
ಒಂದು ವೇಳೆ ಕೃತಕ ಅಭಾವ ಸೃಷ್ಟಿಸಿ ಬೇರೆ ಕಡೆ ರಫ್ತು ಮಾಡುವ ಪ್ರಯತ್ನ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಬೆಲೆ ವಿವರ ನಾಮಫಲಕ ಕಡ್ಡಾಯ: ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, 32 ರೈತ ಸಂಪರ್ಕ ಕೇಂದ್ರಗಳಲ್ಲಿ ಶೀಘ್ರದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಕೃಷಿ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಕ್ಷೇತ್ರ ಬಿಟ್ಟು ಹೊರಗೆ ಹೋಗದೆ ರೈತರಿಗೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಸಹಕರಿಸಬೇಕು ಎಂದು ಸೂಚನೆ ನೀಡಿದರು.
ಖಾಸಗಿ ದಾಸ್ತಾನುದಾರರು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ವಿವರ ಹಾಗೂ ಹಿಂದಿನ ಮತ್ತು ಪ್ರಸುತ್ತ ಬೆಲೆಯ ವಿವರಗಳನ್ನು ಒಳಗೊಂಡ ನಾಮಫಲಕ ಹೊರಗಡೆ ಹಾಕಬೇಕು ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಐ.ಎ. ಬಳತ್ಕರ್ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆಯು ಪ್ರಾರಂಭವಾಗಿದ್ದು, ಜನವರಿಯಿಂದ ಡಿಸೆಂಬರ್ ಅಂತ್ಯಕ್ಕೆ ವಾಡಿಕೆ ಮಳೆ 842.22 ಮಿ.ಮೀ.ಗೆ ಎದುರಾಗಿ ಜೂನ್ 1ರವರೆಗೆ 91.83 ಮಿ.ಮೀ. ಮಳೆಯಾಗಿದ್ದು, ಒಟ್ಟು ಶೇ.37.7ರಷ್ಟು ಮಳೆಯಾಗಿದೆ ಎಂದರು.
ಈ ಮಳೆಯು ಗುಲ್ಬರ್ಗ ಶೇ.7 (143.7 ಮಿ.ಮೀ.), ಚಿಂಚೋಳಿ ಶೇ.18(38.8 ಮಿ.ಮೀ.), ಚಿತ್ತಾಪುರ ಶೇ.69(160.9 ಮಿ.ಮೀ.), ಸೇಡಂ ಶೇ.0(64.9ಮಿಮಿ), ಅಫಜಲ್ಪುರ ಶೇ.309 (61.6 ಮಿ.ಮೀ.), ಜೇವರ್ಗಿ ಶೇ.32(119.2.0 ಮಿ.ಮೀ) ಮತ್ತು ಆಳಂದ 33(53.7ಮಿ.ಮೀ.) ತಾಲೂಕುಗಳಲ್ಲಿ ಮಳೆಯಾಗಿದೆ ಎಂದು ವಿವರಿಸಿದರು.
ಮುಂಗಾರು ಬಿತ್ತನೆ ಕ್ಷೇತ್ರದ ಗುರಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 5.72 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ ಹೊಂದಲಾಗಿದೆ. ಇದರಲ್ಲಿ 5.16 ಲಕ್ಷ ಹೆಕ್ಟೇರ್ ಖುಷ್ಕಿ ಕ್ಷೇತ್ರ ಮತ್ತು 0.54 ಹೆಕ್ಟೇರ್ ನೀರಾವರಿ ಕ್ಷೇತ್ರವಾಗಿರುತ್ತದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಹಮ್ಮಿಕೊಳ್ಳಲಾಗಿರುವ ಬೆಳೆ ಉತ್ಪಾದನೆ ಕಾರ್ಯಕ್ರಮ 5.72 ಲಕ್ಷ ಹೆಕ್ಟೇರ್ಗೆ ಬೇಕಾಗುವ ಬೀಜದ ಪ್ರಮಾಣ 68,609 ಕ್ವಿಂಟಲ್, ಬೀಜ ಬದಲಿಕೆ ಅನುಪಾತದ ಆಧಾರದ ಮೇಲೆ ಒಟ್ಟಾರೆ 27,026 ಕ್ವಿಂಟಲ್ ಬಿತ್ತನೆ ಬೀಜ ಅವಶ್ಯಕತೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.
ಇಲ್ಲಿಯವರೆಗೆ 5616.6 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿಕರಿಸಿದೆ. ಬಿತ್ತನೆ ಬೀಜ ಶೇ.50ರ ಸಹಾಯಧನದಲ್ಲಿ ರೈತ ಬಾಂಧವರಿಗೆ ಇಲಾಖೆಯಿಂದ ರೈತ ಸಂಪರ್ಕಗಳ ಮೂಲಕ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಎಂದರು.
ಮುಂಗಾರು ಹಂಗಾಮಿಗಾಗಿ ವಿವಿಧ ಗ್ರೇಡ್ಗಳ ರಸಗೊಬ್ಬರಗಳ ಅವಶ್ಯಕತೆ ಇರುತ್ತದೆ. ಇದರಲ್ಲಿ 30,507 ಮೆಟ್ರಿಕ್ ಟನ್ ರಸಗೊಬ್ಬರ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಂಡಳದಲ್ಲಿ ಹಾಗೂ ಖಾಸಗಿಯವರಲ್ಲಿ 8,356 ಮೆಟ್ರಿಕ್ ಟನ್ ದಾಸ್ತಾನು ಇರುತ್ತದೆ. ಯಾವುದೇ ರೀತಿಯಲ್ಲಿ ಬೀಜ ಮತ್ತು ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
---
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

