ಶಾಲಾ ಮಕ್ಕಳ ಬಿಸಿಯೂಟಕ್ಕೂ ಬರ
ಕನ್ನಡಪ್ರಭ ವಾರ್ತೆ, ಆಳಂದ, ಜೂ.4
ಕುಡಿಯುವ ನೀರಿಗೂ ಬರ, ಕಾಮಗಾರಿಗಳಿಗೂ ಬರ, ಜತೆಗೆ ಬಿಸಿಯೂಟಕ್ಕೂ ಬರ ತಟ್ಟಿರುವ ಸಂಗತಿ ತಾಲೂಕಿನಲ್ಲಿ ಉಂಟಾಗಿದೆ. ಭೀಕರ ಬರ ಪರಿಸ್ಥಿತಿಯಿಂದ ತತ್ತರಿಸಿ ಹೋಗುತ್ತಿರುವ ಜನ ಜಾನುವಾರುಗಳು ತಮ್ಮ ಹೊಟ್ಟೆಪಾಡಿಗಾಗಿ ಅಲೆದಾಡುವ ಪ್ರಸಂಗ ನಿರ್ಮಾಣವಾಗಿದೆ. ಬರದ ಹಿನ್ನೆಲೆಯಲ್ಲಿ ಗುಳೇ ಹೊರಟವರ ಗೋಳು ಹೇಳತಿರದು.
- ಅಂತರ್ಜಲ ಕುಸಿತದಿಂದ ಆಳಂದ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪವಿದು.
ಮಹಿಳೆಯರು, ಮಕ್ಕಳು ಸೇರಿ ಕೊಡ ನೀರಿಗಾಗಿ ಅಲೆದಾಡುವ ಪ್ರಸಂಗ ಸಾಮಾನ್ಯವಾಗಿದೆ. ಇಂತಹ ಬರ ನಿರ್ವಹಣೆ ಹಿನ್ನೆಲೆಯಾಗಿ 1ರಿಂದ 8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭಿಸಲು ರಾಜ್ಯ ಸರ್ಕಾರ ಆದೇಶಿಸಿತ್ತು. ಸದ್ಯ ಬೇಕಾದ ಆಹಾರ ಧಾನ್ಯಗಳು ಬಿಸಿಯೂಟ ಕೇಂದ್ರಗಳಲ್ಲಿ ಲಭ್ಯವಿಲ್ಲ. ಇಲಾಖೆ ಅಧಿಕಾರಿಗಳು ಆಹಾರಧಾನ್ಯ ಪೂರೈಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಬರ ಪರಿಸ್ಥಿತಿ ಬಿಸಿಯೂಟ ಕೇಂದ್ರಗಳಲ್ಲಿ ಕಾಣುವಂತಾಗಿದೆ.
ಮಕ್ಕಳಿಗೆ ನೆರವಾಗಲಿ ಎಂಬ ಉದ್ದೇಶ: ಒಟ್ಟು 217 ಬಿಸಿಯೂಟ ಕೇಂದ್ರಗಳು ತಾಲೂಕಿನಲ್ಲಿವೆ. 25 ಕೇಂದ್ರಗಳು ಆಳಂದ ಪಟ್ಟಣದಲ್ಲಿವೆ ಮತ್ತು 40 ಕೇಂದ್ರಗಳು ಎನ್ಜಿಒ ಸಂಸ್ಥೆಗಳ ಅಧೀನದಲ್ಲಿವೆ. ಬರದಿಂದ ತತ್ತರಿಸಿ ಬಳಲುತ್ತಿರುವ ಕುಟುಂಬದ ಮಕ್ಕಳಿಗಾದರೂ ಬಿಸಿಯೂಟ ನೆರವಾಗಲಿ ಎಂಬ ಉದ್ದೇಶದಿಂದ ಆರಂಭಿಸಲು ಸೂಚಿಸಲಾಗಿದೆ.
ಬೇಸಿಗೆ ಬಿಸಿ, ಬರದ ಛಾಯೆಯಿಂದ ಇಂದು ಯಾವುದೇ ಕೇಂದ್ರಗಳು ಕಾರ್ಯನಿರ್ವಹಿಸದಂತಹ ಸ್ಥಿತಿ ಎದುರಾಗಿದೆ. ಊಟ ಹಾಕಲು ವಾರ ಕಳೆದರೂ ಮಕ್ಕಳು ಮಾತ್ರ ಕೇಂದ್ರದತ್ತ ಸುಳಿಯುತ್ತಿಲ್ಲ. ಕೇಂದ್ರಕ್ಕೆ ಅಗತ್ಯವಾದ ಆಹಾರ ಧಾನ್ಯಗಳನ್ನು ಸರ್ಕಾರ ಪೂರೈಸಲು ಮುಂದಾಗುತ್ತಿಲ್ಲ.
ಅಧಿಕಾರಿಗಳು ವಿಫಲ: ಆಳಂದ ತಾಲೂಕಿಗೆ ಒಟ್ಟು 35 ಸಾವಿರ ಟನ್ ಆಹಾರ ಧಾನ್ಯ ಬೇಕಾಗಿದೆ. ಅವುಗಳಲ್ಲಿ ಅಕ್ಕಿ, ಗೋದಿ ಹಾಗೂ ಎಣ್ಣೆ, ಉಪ್ಪು ಸೇರಿ ಗ್ಯಾಸ್ ಸರಬರಾಜು ಮಾಡಬೇಕಾಗಿದೆ. ಒಟ್ಟು 800 ಸಿಲಿಂಡರ್ ಗ್ಯಾಸ್ ಪೈಕಿ 500 ಸಿಲಿಂಡರ್ ಬೇಸಿಗೆ ಬಿಸಿಯೂಟದ ಕೇಂದ್ರಗಳಿಗೆ ಅಗತ್ಯವಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಆಹಾರಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ಕಳಿಸುವಲ್ಲಿ ವಿಫಲರಾಗಿದ್ದಾರೆ.
ಕಳೆದ ಮಾರ್ಚ್ ಅವಧಿಯಲ್ಲಿ ಬಾಕಿ ಉಳಿದಿರುವ ಆಹಾರ ಧಾನ್ಯಗಳ ಆಧಾರದ ಮೇಲೆ ಕೆಲ ಕೇಂದ್ರಗಳು ಆರಂಭಗೊಂಡಿವೆ. ತಾಲೂಕಿನ ಬಹುತೇಕ ಕೇಂದ್ರಗಳು ಆಹಾರಧಾನ್ಯಗಳ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ.
ಶಾಲೆಗೆ ಬಾರದ ವಾತಾವರಣ: ಮುಖ್ಯೋಪಾಧ್ಯಾಯರು, ಮುಖ್ಯ ಅಡುಗೆಗಾರರು, ಅಡುಗೆ ಸಹಾಯಕರು ಮಾತ್ರ ಕೇಂದ್ರದಲ್ಲಿ ಕಾಣಸಿಗುತ್ತಾರೆ. ಮಕ್ಕಳಿಲ್ಲದ ಕೇಂದ್ರಗಳು ಬರ ಪರಿಸ್ಥಿತಿಯಾಗಿವೆ. ಎನ್ಜಿಒ ನಡೆಸುತ್ತಿರುವ ಕೇಂದ್ರಗಳು ಸದ್ಯಕ್ಕೆ ಬಾಗಿಲು ತೆರೆಯುತ್ತಿಲ್ಲ. ಅಂತಹ ಕೇಂದ್ರದ ಮಕ್ಕಳು ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೇಂದ್ರಗಳಿಗೆ ಹೋಗಿ ಬಿಸಿಯೂಟ ಪಡೆಯಲು ಸೂಚಿಸಲಾಗಿದೆ. ಆದರೂ ಯಾವ ಮಕ್ಕಳು ಶಾಲೆ ಬರಲಾರದಂತಹ ವಾತಾವರಣ ನಿರ್ಮಾಣವಾಗಿದೆ.
ಊಟಕ್ಕೆ ಬರ: ಬಡ ಮಕ್ಕಳು ಬಿಸಿಯೂಟದತ್ತ ಮುಖ ಮಾಡಿದರೂ ಊಟವೇ ಇಲ್ಲವೆಂದು ಬರಿಗೈಲಿ ಹೋಗಿದ್ದಾರೆ. ಮುಖ್ಯೋಪಾಧ್ಯಾಯರು, ಮುಖ್ಯ ಅಡುಗೆಗಾರರು, ಮದುವೆ ಕಾರ್ಯಕ್ರಮಗಳಿಗೆ ರಜೆ ಮೇಲೆ ಹೋಗುತ್ತಿದ್ದರೂ ಕೇಂದ್ರಗಳ ಬಾಗಿಲು ಮಾತ್ರ ತೆರೆದಿರುತ್ತವೆ. ಅಲ್ಲಿ ಊಟಕ್ಕೆ ಬರ ಕಾಣುವಂತಾಗಿದೆ.
ಹೈ.ಕ. ಭಾಗದಲ್ಲಿ 46 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಶಾಲೆಯ ಕೇಂದ್ರಗಳತ್ತ ಮಕ್ಕಳು ಬಾರದ ಸ್ಥಿತಿ ಉಂಟಾಗಿದೆ. ಆದರೂ ಪರಿಣಾಮಕಾರಿ ವ್ಯವಸ್ಥೆಯಿಂದ ಬಿಸಿಯೂಟ ಕೇಂದ್ರಗಳಿಗೆ ಆಹಾರ ಧಾನ್ಯ ಪೂರೈಸಿ ಬರದಿಂದ ತತ್ತರಿಸಿದ ಮಕ್ಕಳಿಗೆ ಸಹಾಯ ಮಾಡಬೇಕಾಗಿದೆ. ಈ ಬರ ನಿರ್ವಹಣೆಯಲ್ಲಿ ಅಧಿಕಾರಿಗಳು, ಶಿಕ್ಷಕರು ಮತ್ತು ಪಾಲಕರು ಸೇರಿ ನೆರವಾಗಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

