ಗುಲ್ಬರ್ಗಾ

ಮರಳು ದಂಧೆ ವಿರುದ್ಧ ಕಾಂತಾ ಕಹಳೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.5
ಭೀಮಾ ದಡದ ಮರಳು ಅಕ್ರಮವಾಗಿ ಸಾಗಿಸಲು ಬಳಕೆಯಾಗಿ ಪೊಲೀಸ್ ವಶದಲ್ಲಿದ್ದ ಹಿಟಾಚಿ ವಾಹನ ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿ, ಗುಲ್ಬರ್ಗ ಉಪ ವಿಭಾಗದ ಸಹಾಯಕ ಆಯುಕ್ತರು ಮೌಖಿಕವಾಗಿ ಆದೇಶ ನೀಡಿದ್ದಾರೆಂದು ಹೇಳಿ ಫರತಾಬಾದ್ ಪೊಲೀಸ್ ಠಾಣೆಗೆ ಅಲ್ಲಿನ ನಾಡ ಕಚೇರಿ ಉಪ ತಹಸೀಲ್ದಾರ್ ನೀಡಿರುವ ಪತ್ರ ಇದೀಗ ತೀವ್ರ ವಿವಾದ ಹುಟ್ಟುಹಾಕುವ ಲಕ್ಷಣಗಳಿವೆ.
ಏಕೆಂದರೆ ಮಾಹಿತಿ ಹಕ್ಕು ಅಡಿಯಲ್ಲಿ ಈ ಪತ್ರವನ್ನು ಪಡೆದಿರುವ ಹೋರಾಟಗಾರ ಎಸ್.ಕೆ. ಕಾಂತಾ, ಕಳ್ಳತನ ದಂಧೆಗೆ ಬಳಸಲಾಗಿರುವ ವಾಹನಗಳನ್ನು ಬಿಡುಗಡೆಗೊಳಿಸಿ ಎಂದು ಮೌಖಿಕವಾಗಿ ಸೂಚಿಸಲು ಡಿಸಿ-ಎಸಿ ಯಾರು, ಯಾಕೆ ಇವರು ಅಂತಹ ವಾಹನಗಳ ಮೇಲೆ ಪ್ರೀತಿ ತೋರುತ್ತಿದ್ದಾರೆ, ಇಂತಹ ಪ್ರಕರಣಗಳಲ್ಲಿ ದಾವೆ ಹೂಡದೆ ವಾಹನಗಳನ್ನು ಬಿಡುಗಡೆ ಮಾಡುತ್ತ ಸಾಗಿದರೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದೆ ಕುಮ್ಮಕ್ಕು ನೀಡಿದಂತೆ ಆಗುವುದಿಲ್ಲವೆ ಎಂಬ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಕಾಂತಾ ಮಾತನಾಡಿ, ಜಿಲ್ಲೆಯಲ್ಲಿನ ಮರಳು ಮಾಫಿಯಾ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದು, ಇದಕ್ಕೆ ಜಿಲ್ಲಾಡಳಿತದ ಚುಕ್ಕಾಣಿ ಹಿಡಿದಿರುವ ಅಧಿಕಾರಿಗಳ ಇಂತಹ ಬೇಕಾಬಿಟ್ಟಿ ಮೌಖಿಕ ಆದೇಶಗಳೇ ಕಾರಣ ಎಂದು ದೂರಿದ್ದಾರೆ. ಅಲ್ಲದೇ ಈ ಬೆಳವಣಿಗೆ ಬಗ್ಗೆ, ಅಧಿಕಾರಿಗಳ ಮರಳು ಮಾಫಿಯಾ ಬಗೆಗಿನ ಒಲವು ಕುರಿತಂತೆ ಸಿಒಡಿ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರದಲ್ಲಿ ಏನುಂಟು, ಏನಿಲ್ಲ: ಮೇ 28ರಂದು ಫರಹತಾಬಾದ್ ನಾಡ ಕಚೇರಿ ಉಪ ತಹಸೀಲ್ದಾರರು ಅಲ್ಲಿನ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷರಿಗೆ ಪತ್ರ ಬರೆದು ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವ ಸ್ಥಳದಲ್ಲಿ ಹಿಡಿದಿದ್ದ ಹಿಟಾಚಿ ವಾಹನ ಸಂಖ್ಯೆ- ಇಎಕ್ಸ್ 200, ಎಂಸಿ 2001- 2954 ಇದನ್ನು ತಮ್ಮ ವಶಕ್ಕೆ ಒಪ್ಪಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ಮೌಖಿಕ ನಿರ್ದೇಶನದಂತೆ ಸದರಿ ವಾಹನವನ್ನು ಬಿಡುಗಡೆ ಮಾಡುವಂತೆ ಸಹಾಯಕ ಆಯುಕ್ತರು ಮೌಖಿಕವಾಗಿ ಹೇಳಿದ್ದಾರೆ. ಆದ್ದರಿಂದ ಸದರಿ ಹಿಟಾಚಿ ವಾಹನವನ್ನು ತಮ್ಮ ವಶದಿಂದ ಅದರ ಮಾಲೀಕರ ವಶಕ್ಕೆ ಒಪ್ಪಿಸಲು ಕೋರಿದ್ದೇನೆಂದು ಸ್ಪಷ್ಟವಾಗಿ ಬರೆದು ಸಹಿ ಮಾಡಿ ಕಚೇರಿ ಮೊಹರು ಹಾಕಿದ್ದಾರೆ.
ಗುಲ್ಬರ್ಗ ತಹಸೀಲ್ದಾರರು, ಗುಲ್ಬರ್ಗ ಉಪ ವಿಭಾಗ ಆಯುಕ್ತರ ಮಾಹಿತಿಗೂ ತಮ್ಮ ಈ ಕೋರಿಕೆ ಪತ್ರದ ಪ್ರತಿ ರವಾನಿಸಿರುವ ಫರತಾಬಾದ್ ಉಪ ತಹಸೀಲ್ದಾರ್ ಅದರ ಪ್ರತಿಯೊಂದನ್ನು ಹಿಟಾಚಿ ಮಾಲೀಕರಿಗೂ ರವಾನಿಸಿದ್ದಾರೆ.
ತನಿಖೆಗೆ ಆಗ್ರಹ: ಈ ಪತ್ರದ ಪ್ರತಿ ಕಾಂತಾ ಅವರ ಬಳಿ ಇದ್ದು, ಇದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇಂತಹ ಮೌಖಿಕ ಆದೇಶಗಳನ್ನು ಜವಾಬ್ದಾರಿಯುತ ಅಧಿಕಾರಿಗಳು ನೀಡುತ್ತ ಹೋದಲ್ಲಿ ಗತಿ ಏನು, ಕಳವಿನ ಮಾಫಿಯಾ ದಂಧೆಗೆ ಕಡಿವಾಣ ಹಾಕಲು ಸಾಧ್ಯವೇ, ಇಂತಹ ಅಧಿಕಾರಿಗಳು ಮರಲು ಮಾಫಿಯಾ ತಡೆಯಲು ಸಮರ್ಥರೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮರಳು ಮಾಫಿಯಾಕ್ಕೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಅಧಿಕಾರಿಗಳೇ ಹೀಗೆ ಮೌಖಿಕ ಆದೇಶಗಳನ್ನು ನೀಡುತ್ತ ಕೈಕಟ್ಟಿ ಕುಳಿತಿದ್ದರಿಂದ ತಾವು ಈ ವಿಷಯವಾಗಿ ಸಂಗ್ರಹಿಸಿರುವ ಮಹತ್ವದ ಕಾಗದ ಪತ್ರಗಳು, ಪೊಲೀಸ್ ಇಲಾಖೆಯ ಮಾಹಿತಿ, ಜಪ್ತಿ ಮಾಡಲಾದ ವಾಹನಗಳು, ಬಿಡುಗಡೆಯಾದ ವಾಹನಗಳು ಇತ್ಯಾದಿಗಳೆಲ್ಲದರ ವಿವರಗಳನ್ನು ಬರೆದು ಲೋಕಾಯುಕ್ತರಿಗೂ ಸಲ್ಲಿಸಿ ತನಿಖೆಗೆ ಆಗ್ರಹಿಸುವುದಾಗಿ ಕಾಂತಾ ಹೇಳಿದ್ದಾರೆ.
ನದಿ ಸಿನ್ನೂರ ಪಾಯಿಂಟ್ ಇಲ್ಲವೇ ಇಲ್ಲ: 2011ರಲ್ಲಿ ಜಾರಿಗೊಂಡಿರುವ ಮರಳು ನೀತಿಯಂತೆ ಜಿಲ್ಲೆಯಲ್ಲಿ 16 ಮರಳು ಸಾಗಣೆಗೆ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಯಾದಿಯಲ್ಲಿ ಫರತಾಬಾದ್ ಇಲ್ಲ. ನದಿ ಸಿನ್ನೂರು ಗ್ರಾಮದ ಸ್ಥಳ ಗುರುತಾಗಿದೆ. ಆದರೆ ಮರಳು ಮಾಫಿಯಾದವರು ನದಿ ಸಿನ್ನೂರನತ್ತ ಸುಳಿಯದೆ ಫರಹತಾಬಾದ್ ಭೀಮಾ ತೀರದಲ್ಲಿ ತಮ್ಮ ಕಳವಿನ ಅಕ್ರಮಕ್ಕೆ ಮುಂದಾಗಿದ್ದಾರೆ. ಬೇಕಾಬಿಟ್ಟಿ ಸಾಗಿರುವ ಮರಳು ಅಗೆತಕ್ಕೆ ಯಾರೂ ಕಡಿವಾಣ ಹಾಕುತ್ತಿಲ್ಲ.
ಆದರೆ ಸೇಡಂ ಉಪ ವಿಭಾಗದ ಸಹಾಯಕ ಆಯುಕ್ತರು ಶಹಾಬಾದ್ ಸುತ್ತಮುತ್ತ ಹಾಗೂ ಕಾಗಿಣಾ ತೀರದಲ್ಲಿ ನಡೆಸಿರುವ ಮರಳು ಅಡ್ಡೆಗಳ ಮೇಲಿನ ದಾಳಿಯಲ್ಲಿ ವಾಹನಗಳನ್ನೆಲ್ಲ ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಅಂತಹ ದಿಟ್ಟತನ ಯಾಕೆ ಗುಲ್ಬರ್ಗದ ಜಿಲ್ಲಾಧಿಕಾರಿ, ಉಪ ವಿಭಾಗದ ಸಹಾಯಕ ಆಯುಕ್ತರು ಪ್ರದರ್ಶಿಸಿಲ್ಲ ಎಂದು ಕಾಂತಾ ಪ್ರಶ್ನಿಸಿದ್ದಾರೆ.
ಜನಾಂದೋಲನ ಕಟ್ಟುವೆ: ಮರಳು ನೀತಿಯಂತೆ ಸಾಗಣೆ ನಡೆಯುತ್ತಿಲ್ಲ. ಮರಳು ಮಾಫಿಯಾದಲ್ಲಿ ರಾಜಕಾರಣಿಗಳು, ಅವರ ಮಕ್ಕಳು, ಬಂಧು ಬಳಗವಿದೆ. ರಾಜಕೀಯದವರು ಹಾಕುವ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಅದಕ್ಕೆ ಜಿಲ್ಲೆಯ ಮರಳು ಅಕ್ರಮ ಬೆಳೆಯುತ್ತಲೇ ಸಾಗಿದೆ ಎಂದಿರುವ ಕಾಂತಾ, ಈ ಕಳವಿನ ದಂಧೆ ವಿರುದ್ಧ ತಾವು ಬರುವ ದಿನಗಳಲ್ಲಿ ಜನಂದೋಲನವನ್ನೇ ಕಟ್ಟುವುದಾಗಿ ಹೇಳಿದ್ದಾರೆ.
ಇಂತಹ ಹೋರಾಟಗಳಿಗೆ ಅದೆಷ್ಟು ಜನ ಬರುತ್ತಾರೋ ಗೊತ್ತಿಲ್ಲ. ಈ ಹೋರಾಟ ಆರಂಭಿಸುವೆ. ಸಮಾಜದಿಂದ ಸ್ಪಂದನೆ ಅದೆಷ್ಟು ದೊರಕುವುದೋ ಗೊತ್ತಿಲ್ಲ ಎಂದಿರುವ ಕಾಂತಾ, ಬರುವ ದಿನಗಳಲ್ಲಿ ತಾವು ಹೋರಾಟವನ್ನಂತೂ ಶುರು ಮಾಡುವುದಾಗಿ ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.