ಗುಲ್ಬರ್ಗಾ

ಸಂಕ್ಷಿಪ್ತ ಸುದ್ದಿ

Published On :

ಸ್ವಾಭಿಮಾನ ಸಂಕಲ್ಪ ದಿನ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಡಾ. ಅಂಬೇಡ್ಕರ್ 122ನೇ ಜಯಂತ್ಯುತ್ಸವ ನಿಮಿತ್ತ ಸ್ವಾಭಿಮಾನ ಸಂಕಲ್ಪ ದಿನವನ್ನು ಜೂ. 9ರಂದು ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕರಣಿಕ ತಿಳಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಪುಟ್ಟನಾಯಕ ಅವರಿಂದ ಧ್ವಜಾರೋಹಣ, ಮಧ್ಯಾಹ್ನ 3 ಗಂಟೆಗೆ ಪಿಐ ಎಸ್.ಎಸ್.ಹುಲ್ಲೂರ ಅವರಿಂದ ಮೆರವಣಿಗೆ ಉದ್ಘಾಟನೆ. ಸಂಜೆ 6 ಗಂಟೆಗೆ ಬಹಿರಂಗ ಸಭೆ ನಡೆಯಲಿದ್ದು, ಡಾ. ಗುರುಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಶಾಸಕ ಜಿ. ರಾಮಕೃಷ್ಣ ಸಭೆಯನ್ನು ಉದ್ಘಾಟಿಸುವರು. ಅತಿಥಿಗಳಾಗಿ ಡಾ. ಡಿ. ಜಿ. ಸಾಗರ, ಜಿಪಂ ಉಪಾಧ್ಯಕ್ಷೆ ಪಾರ್ವತಿ ಚವ್ಹಾಣ, ಗುರುಮ್ಮ ಕರಣಿಕ, ದಸಸಂ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಡಾ. ಐ.ಎಸ್. ವಿದ್ಯಾಸಾಗರ, ಸಂಜಯ ಮಾಕಲ್, ಸಂತೋಷಕುಮಾರ ಇಂಗಿನಶೆಟ್ಟಿ, ನಿಂಗಣ್ಣ ಹುಳಗೋಲ, ಡಾ.ಪಿ.ಎಂ. ಸಜ್ಜನ್, ಡಾ.ಎಂ.ಎ. ರಶೀದ್, ಡಾ.ಅಶೋಕ ಜಿಂಗಾಡೆ, ಸೋಮಶೇಖರ ನಂದಿದ್ವಜ, ಮಹ್ಮದ್ ಖದೀರ ಪಾಲ್ಗೊಳ್ಳುವವರು. ನಗರ ಸಭೆಯ ನೂತನ ಚುನಾಯಿತ ಸದಸ್ಯರಿಗೆ ಸನ್ಮಾನ ಹಾಗೂ ಸಾಗರ ತಂಡದಿಂದ ಸಾಂಸ್ಕೃತಿಕ, ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ದತ್ತಿ ಉಪನ್ಯಾಸ
ಗುಲ್ಬರ್ಗ: ಲಿಂ. ಡಾ. ಡಿ.ಜಿ. ಮೋದಿ ಸ್ಮರಣಾರ್ಥ ಜೂ.9ರಂದು ಸಂಜೆ 6ಕ್ಕೆ ಗುಲ್ಬರ್ಗ ಬಸವ ಸಮಿತಿ ವತಿಯಿಂದ ಜಯ ನಗರದ ಅನುಭವ ಮಂಟಪದಲ್ಲಿ 338ನೇ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಸಾಕ್ಷಿ ಪ್ರಜ್ಞೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ಬೆಲ್ಲದ್ ಮತ್ತು ಚಿಕಾಗೊದ ಶ್ರೀಶೈಲ್ ಹಾದಿಮನಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಗೊ.ರು. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಗನ ಬಸವಣ್ಣನವರು ಸಾನ್ನಿಧ್ಯ ವಹಿಸಲಿದ್ದಾರೆ. ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಬೀದರ್ ಶಾಸಕ ಅಶೋಕ ಖೇಣಿ, ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಕೋರಲಾಗಿದೆ.
ಇಂದು ಪ್ರದರ್ಶನ
ಗುಲ್ಬರ್ಗ: ನಗರದ ಶಮ್ಸ್ ಫಂಕ್ಷನ್ ಹಾಲ್‌ನಲ್ಲಿ ಜೂ.9ರಂದು ಸಂಜೆ 4.30ಕ್ಕೆ ಆವಿಷ್ಕಾರ ಫಿಲ್ಸ್ ಸೊಸೈಟಿಯಿಂದ ಕುಮಾರ ನಿರ್ದೇಶನದ ಸಾಥ್ ಸಾಥ್ ಹಿಂದಿ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಸೊಸೈಟಿಯಿಂದ ಈಗಾಗಲೇ ಮೂರು ಕನ್ನಡ ಚಲನಚಿತ್ರಗಳನ್ನು(ಕನಸೆಂಬೊ, ಕುದುರೆಯನೇರಿ, ಬೇರು, ಬರ) ಪ್ರದರ್ಶನಗೊಂಡಿವೆ. ಸಾಥ್ ಸಾಥ್ ಚಲನಚಿತ್ರ ಪ್ರದರ್ಶನದ ನಂತರ ನಡೆಯುವ ಸಂವಾದ ಕಾರ್ಯಕ್ರಮವನ್ನು ಮಹಿಳಾ ಸಾಂಸ್ಕೃತಿಕ ಸಂಘಟನೆಯ ಅಖಿಲ ಭಾರತ ಕಾರ್ಯದರ್ಶಿ ಡಾ. ಯಲಕ್ಷ್ಮಿ ನಡೆಸಿಕೊಡಲಿದ್ದಾರೆ.

ಶಹಾಬಾದ್; ರಸ್ತೆ ದುರಸ್ತಿ, ಚರಂಡಿ ಸ್ವಚ್ಛತೆಗೆ ಆಗ್ರಹ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರದ ಮುಖ್ಯ ರಸ್ತೆಯಿಂದ ಪಾರ್ವತಿ ಚಿತ್ರಮಂದಿರ ಮೂಲಕ ಲಕ್ಷ್ಮೀ ಗಂಜ್‌ಗೆ ಹೋಗುವ ರಸ್ತೆ ಸುಧಾರಿಸಲು, ಈ ಭಾಗದ ಚರಂಡಿಗಳನ್ನು ಸ್ವಚ್ಛಗೊಳಿಸಲು ಸ್ಥಳೀಯರಾದ ಚನ್ನಪ್ಪ ಎಸ್. ಇಂಗಿಶೆಟ್ಟಿ ನಗರಸಭೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ನಗರದ ಮುಖ್ಯರಸ್ತೆಯಿಂದ ಚಿತ್ರಮಂದಿರದ ರಸ್ತೆ ಮೂಲಕ ಪ್ರತಿದಿನ ರೈತರು, ವ್ಯಾಪಾರಸ್ಥರು ಗಂಜ್ ಪ್ರದೇಶಕ್ಕೆ ಬರುವುದರಿಂದ ಈ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿರುವ ಚರಂಡಿಯಲ್ಲಿ ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ವಾಸನೆ ಹರಡುತ್ತಿದೆ. ಸ್ವಯಂ ಪೌರ ಕಾರ್ಮಿಕರು ದುರ್ವಾಸನೆಯಿಂದ ಕಂಗೆಟ್ಟು ಚರಂಡಿ ಸ್ವಚ್ಛಗೊಳಿಸಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ನೈರ್ಮಲ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಚರಂಡಿ ಸ್ವಚ್ಛಗೊಳಿಸಿ, ಪರಿಸರದ ನೈರ್ಮಲ್ಯ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಜೀಪ್ ಡಿಕ್ಕಿ; ಪಾದಚಾರಿ ಸಾವು
ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜೂ.8
ರಾಷ್ಟ್ರೀಯ ಹೆದ್ದಾರಿ 218ರಲ್ಲಿರುವ ಇಲ್ಲಿಗೆ ಸಮೀಪದ ಉಪಳಾಂವ ಕ್ರಾಸ್ ಬಳಿ ಶುಕ್ರವಾರ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟಿದ್ದಾನೆ. ಉಪಳಾಂವ ಗ್ರಾಮದ ನಿವಾಸಿ ಸಿದ್ದಪ್ಪ(59) ಎಂಬಾತ ಮೃತಪಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ ಹೊಲಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕ್ರೂಸರ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಾಗಿದ್ದವು. ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಲಿನಲ್ಲಿ ಬೆಂಕಿಗೆ ಬಿದ್ದು ಸಾವು
ಗುಲ್ಬರ್ಗ: ಕುಡಿದು ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಬೆಂಕಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಚಿಂಚೋಳಿ ತಾಲೂಕಿನ ಖರ್ಚಖೇಡದಲ್ಲಿ ನಡೆದಿದೆ. ಯಂಕಪ್ಪ ತಂದೆ ನಿಂಗಪ್ಪ(49) ಎಂಬಾತ ಮೃತಪಟ್ಟಿದ್ದಾನೆ. ಗುರುವಾರ ರಾತ್ರಿ ಮದ್ಯ ಸೇವಿಸಿದ ಅಮಲಿನಲ್ಲಿದ್ದ ವೇಳೆಯಲ್ಲಿ ಗ್ರಾಮದಲ್ಲಿ ಮಳೆಯಾಗಿದ್ದರಿಂದ ಬೆಂಕಿ ಕಾಯಿಸಿಕೊಳ್ಳುತ್ತಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ಆಯತಪ್ಪಿ ಬಿದ್ದಿದ್ದಾರೆ.
ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದ ಆತನಿಗೆ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಸೇಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಆತ್ಮಹತ್ಯೆ
ಗುಲ್ಬರ್ಗ: ಮಾನಸಿಕವಾಗಿ ಅಸ್ವಸ್ಥ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಳಂದ ತಾಲೂಕಿನ ಬಂಗರಗಾ ಗ್ರಾಮದಲ್ಲಿ ನಡೆದಿದೆ. ಶಿವಪ್ಪ(23) ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ಯುವಕ. ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಆತ ಗುರುವಾರ ಗ್ರಾಮದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಸಿಪಿಐ ಊಡಗಿ, ಪಿಎಸ್‌ಐ ರವಿಕುಮಾರ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.