ಗುಲ್ಬರ್ಗಾ

ಕೋಚಿಂಗ್ ಕೇಂದ್ರಗಳನ್ನು ಮುಚ್ಚಿಸಿ: ಸಿದ್ದನಗೌಡ

Published On :

ಯಾದಗಿರಿ: ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಕೋಚಿಂಗ್ ಕೇಂದ್ರಗಳು ತಲೆ ಎತ್ತುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇದ್ದು, ಖಾಸಗಿ ಕೋಚಿಂಗ್ ಕೇಂದ್ರಗಳಲ್ಲಿ ಓದುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರುವುದಿಲ್ಲ ಎಂದು ಜಿಪಂ ಸದಸ್ಯ ಸಿದ್ದನಗೌಡ ಪೊಲೀಸಪಾಟೀಲ ಕಳವಳ ವ್ಯಕ್ತಪಡಿಸಿ, ಇದಕ್ಕೆ ಕಡಿವಾಣ ಹಾಕಲು ಆಗ್ರಹಿಸಿದರು.
ಕೆಂಭಾವಿಯಂಥ ಪಟ್ಟಣದಲ್ಲೇ ಹತ್ತಾರು ಕೇಂದ್ರಗಳು ತಲೆ ಎತ್ತಿವೆ. ಜಿಲ್ಲಾದ್ಯಂತ ಇದೇ ರೀತಿ ಪರಿಸ್ಥಿತಿಯಿದೆ. ಇಂಥ ಕೇಂದ್ರಗಳು ಮಕ್ಕಳಿಂದ ವ್ಯಾಪಕ ಸುಲಿಗೆ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕುವುದು ಅಗತ್ಯವಿದೆ ಎಂದು ಸಿದ್ದನಗೌಡ ವಿಷಯ ಪ್ರಸ್ತಾಪಿಸಿದರು.
ಗಮನಕ್ಕೆ ಬಂದಿಲ್ಲ: ಜಿಪಂ ಸಿಇಒ ಸೂಚನೆ ಮೇರೆಗೆ ಮಾತನಾಡಿದ ಡಿಡಿಪಿಐ ರಾಮಾಂಜನೇಯ, ಇದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳುತ್ತಿದ್ದಂತೆ, ಅಸಮಾಧಾನಗೊಂಡ ಸಿಇಒ, ಪ್ರತಿಯೊಂದೂ ನನ್ನ ಗಮನಕ್ಕೆ ಬಂದಿಲ್ಲ ಅನ್ನುತ್ತೀರಿ. ನಿಮ್ಮ ಕೆಳಗಿನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಇನ್ನೊಂದು ಸಲ ಗಮನಕ್ಕೆ ಬಂದಿಲ್ಲ ಎಂಬ ಶಬ್ದ ಬಳಸಬೇಡಿ ಎಂದು ಎಚ್ಚರಿಸಿದರು. ಕೂಡಲೆ ಡಿಡಿಪಿಐ ಕ್ಷಮೆ ಯಾಚಿಸಿ, ಒಂದೆರಡು ದಿನಗಳಲ್ಲಿ ಇಂತಹ ಕೇಂದ್ರಗಳಿಗೆ ನೋಟಿಸ್ ನೀಡಿ ಪರವಾನಗಿ ಇಲ್ಲದ ಕೇಂದ್ರಗಳನ್ನು ಮುಚ್ಚಿಸುವುದಾಗಿ ಭರವಸೆ ನೀಡಿದರು. ಶಾಲಾ ಅವಧಿಯಲ್ಲೇ ಮಕ್ಕಳು ಕಂಡು ಬಂದಲ್ಲಿ ಸಂಬಂಧಪಟ್ಟ ಶಾಲಾ ಮುಖ್ಯಗುರುಗಳ ಮೇಲೆ ಶಿಸ್ತುಕ್ರಮ ಜರಗಿಸುವುದಾಗಿ ತಿಳಿಸಿದರು.
ಕುಡಿದು ಪಾಠ: ಶಾಲೆಗಳಲ್ಲಿ ಶಿಕ್ಷಕರು ಕುಡಿದು ಬಂದು ಪಾಠ ಮಾಡುತ್ತಾರೆ. ಇದರ ಬಗ್ಗೆ ನಿಮ್ಮ ಗಮನಕ್ಕೆ ಇದೆಯೇನ್ರೀ. ಮುಂಡರಗಿ ಗ್ರಾಮದಲ್ಲಿ ಇಬ್ಬರು ಶಿಕ್ಷಕರು ಕುಡಿದು ಪಾಠ ಮಾಡುತ್ತಾರೆ. ಅಲ್ಲಿ 450 ಮಕ್ಕಳಿದ್ದು, 50ಕ್ಕೂ ಹೆಚ್ಚು  ಮಕ್ಕಳು ಕೋಣೆಗಳ ಕೊರತೆಯಿಂದ ಶಾಲಾ ಆವರಣದಲ್ಲಿ ಪಾಠ ಕೇಳುತ್ತಾರೆ. ಒಮ್ಮೆ ಭೇಟಿ ನೀಡಿ ಎಂದು ಸದಸ್ಯೆ ಅನಸೂಯಾ ಬೋರಬಂಡಾ ಸೂಚಿಸಿದರು. ಇದಕ್ಕೆ ಧ್ವನಿಗೂಡಿಸಿದ ಭೀಮರಾಯ, ಕಂದಕೂರಿನಲ್ಲಿ ಸಹ ಶಿಕ್ಷಕರು ಕುಡಿದು ಪಾಠ ಮಾಡುತ್ತಾರೆ ಎಂದು ದೂರಿದರು. ಅಂತಹ ಶಿಕ್ಷಕರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಡಿಡಿಪಿಐ ಉತ್ತರಿಸಿದರು.
ಕೊಠಡಿ ಕೊರತೆ: ಹೆಚ್ಚು ಮಕ್ಕಳಿದ್ದಲ್ಲಿ ಕೊಠಡಿಗಳ ಕೊರತೆ ಇದೆ. 30 ಮಕ್ಕಳಿದ್ದಲ್ಲಿ ಹೆಚ್ಚಿನ ಕೋಣೆಗಳಿವೆ. ಅಧಿಕಾರಿಗಳು ಶಿಕ್ಷಣದ  ಗುಣಮಟ್ಟ ಹೆಚ್ಚಳದ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ ಎಂದು ಉಪಾಧ್ಯಕ್ಷ ಶರಣಿಕಕುಮಾರ ದೋಖಾ ಆರೋಪಿಸಿದರು. ವಶ್ಯಕತೆ ಇದ್ದಲ್ಲಿ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ. ಕೆಲ ಗ್ರಾಮಗಳಲ್ಲಿ ನಿವೇಶನ ಕೊರತೆಯಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಡಿಡಿಪಿಐ ಸಭೆಯ ಗಮನಕ್ಕೆ ತಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.