ಸಮ್ಮೇಳನಾಧ್ಯಕ್ಷರ ಭಾಷಣಕ್ಕೂ ಮುನ್ನವೇ ಖಾಲಿಯಾಯ್ತು ವೇದಿಕೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.15
ಸಾಹಿತ್ಯ ಕ್ಷೇತ್ರ, ಸಾಹಿತಿಗಳು, ಸಾಹಿತ್ಯದ ಸಮಾರಂಭಗಳು ಮತ್ತು ಗುಲ್ಬರ್ಗ ರಾಜಕಾರಣಿಗಳಿಗೆ ಅಷ್ಟಕ್ಕಷ್ಟೆ ಎಂಬಂಶ ಇಲ್ಲಿನ ಶ್ರೀವಿಜಯ ಮಹಾಮಂಟಪದಲ್ಲಿ ಶನಿವಾರ ಶುರುವಾದ 13ನೇ ಕನ್ನಡ ಸಾಹಿತ್ಯ ಸಮ್ಮೇಳನವೇ ಕನ್ನಡಿಯಾಯಿತು.
ಏಕೆಂದರೆ ಜಿಲ್ಲೆಯ ಶಾಸಕರು, ಎಂಎಲ್ಸಿಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದ್ದವರ ಪೈಕಿ ಗೈರುಹಾಜರಾದವರೇ ಬಹಳ. ಅದರಲ್ಲೂ ಹಾಜರಿದ್ದ ಬೆರಳೆಣಿಕೆಯ ರಾಜಕೀಯ ನಾಯಕರು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಾಗೂ ಸಮ್ಮೇಳನಕ್ಕೆ ದೀಪ ಹಚ್ಚಿ ಚಾಲನೆ ನೀಡುವ ಹೊತ್ತಲ್ಲಿ ಮಾತ್ರ ಕಾಣಿಸಿಕೊಂಡು ಕ್ಯಾಮೆರಾಕ್ಕೆ ಪೋಸು ಕೊಟ್ಟು ನಾಲ್ಕಾರು ಅಣಿಮುತ್ತು ಉದುರಿಸಿ ಕೆಲಸವಿದೆ ಎಂದು ಮೆಲ್ಲಗೆ ಜಾಗ ಖಾಲಿ ಮಾಡಿಬಿಟ್ಟರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಖಮರುಲ್ ಇಸ್ಲಾಂ, ಕಾರ್ಯಾಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಜಿಪಂ ಅಧ್ಯಕ್ಷ ಶರಣಪ್ಪ ತೇಲ್ಕೂರ್ ಉದ್ಘಾಟನೆ ಸಮಾರಂಭಕ್ಕೆ ಹಾಜರಿದ್ದರಾದರೂ ಸಮ್ಮೇಳನದ ಸರ್ವಾಧ್ಯಕ್ಷ ಎಲ್.ಬಿ.ಕೆ. ಆಲ್ದಾಳ್ ಅವರ ಭಾಷಣ ಶುರುವಾಗುವ ಮುನ್ನವೇ ಜಾಗ ಖಾಲಿ ಮಾಡಿದ್ದರು. ಖಮರುಲ್ ಇಸ್ಲಾಂ ಅವರಂತೂ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆಲ ಮಾತುಗಳನ್ನಾಡಿ ತರಾತುರಿಯಲ್ಲಿ ಹಾಜರಿ ಹಾಕಿ ಹೊರಟರು. ದತ್ತಾತ್ರೇಯ ಪಾಟೀಲ್ ಮೊದಲ್ಗೊಂಡು ವೇದಿಕೆಯಲ್ಲಿದ್ದ ಹಲವರು ಇಸ್ಲಾಂ ಅವರನ್ನೇ ಅನುಸರಿಸಿದರು. ಇದೆಲ್ಲವನ್ನು ಕಂಡು ಸೇರಿದ್ದ ಸಭಿಕರು ಮುಸಿಮುಸಿ ನಕ್ಕರು.
ಖಮರುಲ್ ಖ(ಕ)ನ್ನಡ: ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರಿಗೆ ಕನ್ನಡ ಸುಲಭದಲ್ಲಿ ಮಾತನಾಡಲು ಆಗದು. ಆದಾಗ್ಯೂ ಅವರು ತಮ್ಮ ಸ್ವಾಗತ ಭಾಷಣವನ್ನು ಕನ್ನಡದಲ್ಲೇ ಶುರು ಮಾಡಿದಾಗ ಸಭಿಕರೆಲ್ಲರೂ ಅಚ್ಚರಿಗೊಂಡರು. ಇಸ್ಲಾಂ ಮೊದಲೆರಡು ವಾಕ್ಯ ಕನ್ನಡದಲ್ಲಿ ಹೇಳುತ್ತಲೇ ಇಂಗ್ಲಿಷ್ ಬೆರೆಸಿ ಮಾತನಾಡತೊಡಗಿದಾಗ ಎಲ್ಲರೂ 'ಇದು ಖಮರುಲ್ ಖನ್ನಡ' ಎಂದು ನಕ್ಕರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

